Header Ads

ಬಸ್ರೂರಿನ ಇತಿಹಾಸ -ಭಾಗ 2


ಬಸ್ರೂರಿನ ಇತಿಹಾಸ -ಭಾಗ 2


        1444 ಜೂನ್ 25ರಂದು ಬರೆಸಿದ ಇಮ್ಮಡಿ ದೇವರಾಯನ ಶಾಸನವು ಆಗ ಬಸ್ರೂರು, ರಾಜ್ಯಪಾಲ ತಿಮ್ಮಣ್ಣ ಒಡೆಯನ ಆಳ್ವಿಕೆಯಲ್ಲಿತ್ತು ಎಂಬುದನ್ನು ತಿಳಿಸುತ್ತದೆ. ನಖರೇಶ್ವರದ ಶ್ರೀ ಮಹಾದೇವರ ಪೂಜೆಗಾಗಿ ನಾರಣ ಸೆಟ್ಟಿಗೆ ಹಲರು ಸೆಟ್ಟಿಕಾರರು ಭೂಮಿ ಬಿಟ್ಟುಕೊಟ್ಟದ್ದು ಆ ನಾರಣ ಸೆಟ್ಟಿ ಪ್ರತ್ಯೇಕವಾಗಿ ಪೂಜೆಗಾಗಿ ದತ್ತಿ ನೀಡಿದ್ದನ್ನು ಶಾಸನ ಒಳಗೊಂಡಿದೆ. ಹಲರು, ಸೆಟ್ಟಿಕಾರರು ನೇರವಾಗಿ ದತ್ತಿ ನೀಡುವ ಬದಲು ನಾರಣ ಸೆಟ್ಟಿಯ ಮೂಲಕ ನೀಡಿದ್ದು ಇಲ್ಲಿಯ ವೈಶಿಷ್ಟ್ಯ. ಈ ದತ್ತಿಯ ರಕ್ಷಣೆಯ ಜವಾಬ್ದಾರಿ ಹಲರು ಸೆಟ್ಟಿಕಾರರದ್ದು.

Basrur


       ತಿಮ್ಮಣ್ಣ ಒಡೆಯನ ಆಳ್ವಿಕೆಯಲ್ಲಿ ಬಸ್ರೂರಿನಲ್ಲಿ ನಡೆದ ಒಂದು ಘಟನೆಯನ್ನು ಪ್ರಸ್ತಾಪಿಸುವ 1444ರ ಇನ್ನೊಂದು ಶಾಸನ ನ್ಯಾಯಾಡಳಿತದ ದೃಷ್ಟಿಯಿಂದ ಹೆಚ್ಚು ಮಹತ್ವ ಪಡೆಯುತ್ತದೆ. ತಿರುಮ ಹಡುವಳ ಮತ್ತು ಬೆಮ್ಮ ಸೆಟ್ಟಿ ಎಂಬಿಬ್ಬರನ್ನು ನಖರದವರು ಕೊಂದಿದ್ದಕ್ಕೆ ಪಡುವ ಕೇರಿಯ ಹಲರು ಸೆಟ್ಟಿಕಾರರು ಸೇರಿ ನಖರದವರ ಕೈಯಲ್ಲಿ ಪ್ರಾಯಶ್ಚಿತ್ತ ರೂಪದಲ್ಲಿ ದಂಡ ತೆರುವಂತೆ ಮಾಡಿ ನ್ಯಾಯ ತೀರ್ಮಾನ ಮಾಡಿಸಿದರು. ಈ ದಂಡದ ಹಣವನ್ನು ದೇವಾಲಯದ ಮಾಡಿನ ತಾಮ್ರದ ತಗಡಿನ ಹಾಗೂ ಚಿನ್ನದ ಕಲಶದ ವೆಚ್ಚಕ್ಕೆ ವಿನಿಯೋಗಿಸಬೇಕೆಂದು ತೀರ್ಮಾನಿಸಲಾಯಿತು. ಕೊಲೆಯಾದಂತಹ ಸಂದರ್ಭದಲ್ಲಿ ರಾಜ್ಯಪಾಲನ ಅಥವಾ ರಾಜ್ಯಾಡಳಿತದ ಅಧಿಕಾರಿಗಳ ಮಧ್ಯಪ್ರವೇಶವಿಲ್ಲದೆ, ಬಸ್ರೂರಿನ ಸ್ಥಳೀಯಾಡಳಿತ ನೋಡಿಕೊಳ್ಳುತ್ತಿದ್ದ ಹಲರು, ಸೆಟ್ಟಿಕಾರರೇ ಎರಡು ಕುಟುಂಬದವರನ್ನು ಸಂತೈಸಿ ಸಮಸ್ಯೆ ತೀರ್ಮಾನ ಮಾಡಿರುವುದು ಬಸ್ರೂರಿನ ವಿಶಿಷ್ಟ ನ್ಯಾಯ ತೀರ್ಮಾನ ವ್ಯವಸ್ಥೆ ಅಂದು ಕಾರ್ಯವೆಸಾಗುತ್ತಿದ್ದ ರೀತಿಯ ಪರಿಚಯ ಮಾಡಿ ಕೊಡುತ್ತದೆ.

        1450 ಏಪ್ರಿಲ್ 24ರಂದು ವಿಜಯನಗರದಲ್ಲಿ ಸಾಮ್ರಾಟ ಮಲ್ಲಿಕಾರ್ಜುನ ಆಳುತ್ತಿದ್ದಾಗ ಬಾರ್ಕೂರು ರಾಜ್ಯದ ರಾಜ್ಯಪಾಲ ಲಿಂಗಪ್ಪ ಒಡೆಯ ಬಸ್ರೂರಿನ ಆಡಳಿತದ ಅಧಿಕಾರ ಹೊಂದಿದ್ದಾಗ ಪಡುವ ಕೇರಿಯಲ್ಲಿ ಕೋಟಿಯಕ್ಕ ನಾಯಕಿತ್ತಿ ಮತ್ತು ಅವಳ ಮಗ ಮೆರವಣ ಸೆಟ್ಟಿ ಮಠ ಕಟ್ಟಿಸಿ ವೆಚ್ಚಕ್ಕೆ ಆನಗಳ್ಳಿಯಲ್ಲಿ ಭೂಮಿ ಬಿಟ್ಟಿದ್ದರು. ಅಲ್ಲದೆ ಪಡುವ ಕೇರಿಯ ಹಲರು ಸೆಟ್ಟಿಕಾರರು ಕೋಟಿಯಕ್ಕ ನಾಯಕಿತ್ತಿಯ ಕೈಯಲ್ಲಿ ತೆಗೆದುಕೊಂಡ 200 ಕಾಟಿಗದ್ಯಾಣಕ್ಕೆ ಅವರು ತೆರಬೇಕಾದ ಬಡ್ಡಿಯಲ್ಲಿ 1 ಮುಡಿ ಅಕ್ಕಿಯನ್ನು ಈ ಮಠದ ವೆಚ್ಚಕ್ಕೆ ದತ್ತಿ ನೀಡಲಾಯಿತು. ಇದಲ್ಲದೆ ಇತರ ದತ್ತಿಗಳೂ ಈ ಮಾಠಕ್ಕಿದ್ದವು. ಬಸ್ರೂರಿನ ಜನ ವಿಜಯನಗರ ಕಾಲದಲ್ಲಿ ಮಠ ದೇವಾಲಯಗಳನ್ನು ಕಟ್ಟಿಸಿ ತಮ್ಮ ಸಂಪತ್ತನ್ನು ಧಾರೆಯೆರೆದು ಪೋಷಿಸಿದರೆಂಬುದಕ್ಕೆ ಇದು ಒಳ್ಳೆಯ ಉದಾಹರಣೆ.

       ಮಲ್ಲಿಕಾರ್ಜುನನ ಆಳ್ವಿಕೆಯ ಕಾಲದಲ್ಲಿ 1451ರಲ್ಲಿ ಭಾನಪ್ಪ ಒಡೆಯನು ರಾಜ್ಯಪಾಲನಾಗಿ ಆಡಳಿತ ನಡೆಸುತ್ತಿದ್ದಾಗ ಅವನು ನಖರೇಶ್ವ ದೇವರ ಎರಡು ಹೊತ್ತಿನ ಭೋಗಪಾತ್ರದ ವೆಚ್ಚಕ್ಕೆ ದತ್ತಿ ನೀಡಿದ್ದ. ಇಲ್ಲಿ ದೇವರ ಕೇರಿಯ ಉಲ್ಲೇಖ ಬರುತ್ತದೆ.

       1455ರಲ್ಲಿ ಇದೆ ಅರಸನ ಆಳ್ವಿಕೆಯಲ್ಲಿ ಪಂಡರಿದೇವನು ಈ ಪ್ರದೇಶದಲ್ಲಿ ಆಡಳಿತ ನಡೆಸುತ್ತಿದ್ದುದು ಮಹಾಲಿಂಗೇಶ್ವರ ದೇವಾಲಯದ ಶಾಸನವೊಂದರಿಂದ ತಿಳಿಯುತ್ತದೆ. ಆಗ ಪಡುವಕೇರಿ ಮತ್ತು ಮೂಡುಕೇರಿಯವರ ಮಧ್ಯೆ ವಿವಾದ ಏರ್ಪಟ್ಟಿತ್ತು. ಆಗ ಚಿರುಲಿಗುಂಡದ ವಿಷ್ಣುಮೂರ್ತಿ ದೇವರ ಸನ್ನಿಧಿಯಲ್ಲಿ ಬಸ್ರೂರ ನಾಲ್ಕು ಮಠದ ಅಯ್ಯನವರು ಹಾಗೂ ಕಂದಾವರ ಗ್ರಾಮದವರನ್ನು ಮುಂದಿಟ್ಟುಕೊಂಡು, ಮೂಡುಕೇರಿಯ ಹಲರು ಸೆಟ್ಟಿಕಾರರು ಮತ್ತು ಪಡುವ ಕೇರಿಯ ಹಲರು ಸೆಟ್ಟಿಕಾರರು ಸೇರಿ ವಿವಾದವನ್ನು ಬಗೆಹರಿಸಿಕೊಂಡರು. ಎರಡು ಕೇರಿಗಳ ಮಧ್ಯೆ ಗಡಿ ಮತ್ತು ವಿಶೇಷ ಅಧಿಕಾರಗಳನ್ನು ನಿರ್ಧರಿಸಲಾಯಿತು.

        ಬಸ್ರೂರಿನ ಆಡಳಿತದಲ್ಲಿ ತೆರಿಗೆ ಸಂಗ್ರಹಕ್ಕೆ ಸಂಬಂಧಿಸಿದಂತೆ ಮಹತ್ವದ ಒಂದು ವಿಚಾರವನ್ನು 1465 ಮೇ 15ರ ಮಲ್ಲಿಕಾರ್ಜುನನ ಶಾಸನ ದಾಖಲಿಸಿದೆ. ರಾಜ್ಯಪಾಲ ಪಂಡರಿದೇವನ ಆಳ್ವಿಕೆಯಲ್ಲಿ ಬಸ್ರೂರಿನ ಮುಸ್ಲಿಂ ವರ್ತಕ ಸಂಘವಾದ ಹಂಜಮಾನದವರು ತೆರಬೇಕಾಗಿದ್ದ ತೆರಿಗೆಯೊಂದನ್ನು(ಹಡಿಕೆಹೊನ್ನು) ತೆರಲು ಸಾಧ್ಯಾಗದಿದ್ದಾಗ ಅವರು ತಮ್ಮ ಪಳ್ಳಿಯ ಆದಾಯ 150 ಹೊನ್ನನ್ನು ಬಿಟ್ಟುಕೊಟ್ಟರು. ಈ ಹಣದಿಂದ ಪಂಡರಿದೇವನು ಪಡುವಕೇರಿಯ ಮಹಾದೇವರ ದೇವಸ್ಥಾನದಲ್ಲಿ ನಂದಾದೀಪ ಅಮೃತಪಡಿ ಮತ್ತು ಧರ್ಮಕ್ಕೆ ದಾನ ನೀಡಿದ. ಆಗ ಪಳ್ಳಿಗೆ ಬರತಕ್ಕ ಆದಾಯ (ಪಳ್ಳಿ ಮರ್ಯಾದೆ) ಬಸ್ರೂರ ಅಳುವೆಯಲ್ಲಿ ಸಂಗ್ರಹಿಸುವ ಸುಂಕ ಹಾಗೂ ಹಸರಕ್ಕೆ ಬರುವ ಸರಕುಗಳ ಮೇಲಿನ ಸುಂಕದಿಂದ ಸಿಗುತ್ತಿತ್ತೆಂದೂ ಈ ದಾಖಲೆಯಿಂದ ತಿಳಿಯಬಹುದಾಗಿದೆ. ಬಹಳ ಮಂದಿ ಮುಸ್ಲಿಂ ವರ್ತಕರು ಬಸ್ರೂರಿನಲ್ಲಿ ಇದ್ದರು. ಅಲ್ಲದೆ ಕಲ್ಲಿಕೋಟೆಯ ಶ್ರೀಮಂತ ವರ್ತಕರ ಪ್ರತಿನಿಧಿಗಳೂ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದರು. 16ನೇ ಶತಮಾನದಲ್ಲಿ ಪೋರ್ಚುಗೀಸ್ ಪ್ರಾಬಲ್ಯ ಹೆಚ್ಚುವವರೆಗೆ ತಮ್ಮದೇ ಹಡಗುಗಳನ್ನು ಹೊಂದಿದ್ದ ಮುಸ್ಲಿಂ ವರ್ತಕರು ಇಲ್ಲಿ ವ್ಯಾಪಾರದಲ್ಲಿ ತೊಡಗಿದ್ದ ವಿಚಾರ ವಿದೇಶಿ ಪ್ರವಾಸಿ ಬಾರ್ಬೊಸಾನ ವರದಿಯಿಂದ ತಿಳಿಯುತ್ತದೆ.

        1472ರಲ್ಲಿ ಬಸ್ರೂರಿನಲ್ಲಿ ತಿರುಮಲೆನಾಥ ಸೆಟ್ಟರ ಮಗ ಸಿರಿಯಪ್ಪ ವಾರಣಾಸಿಗೆ ಹೋದವನು ಬರುವಾಗ "ವಿಶ್ವನಾಥ ದೇವರನ್ನು ಪಂಚಪೂಜೆ ಸಹಿತವಾಗಿ ವಿಜಯಂಗಸಿಕೊಂಡು ಬಂದ ಪ್ರಯುಕ್ತ" ಆ ದೇವರನ್ನು ಪ್ರತಿಷ್ಟೆ ಮಾಡಿ ಪೂಜೆಯ ಮತ್ತು ತಾವು ಕಟ್ಟಿದ ಮಠದ ವೆಚ್ಚಕ್ಕೆ ನಾರಣಸೆನಭೊವನ ಮಗ ದುಗ್ಗಣ ಸೆಟ್ಟಿ ಮತ್ತು ಅವನ ಮೂವರು ಅಳಿಯಂದಿರು ದತ್ತಿ ನೀಡಿದ್ದನ್ನು ದೊರೆ ವಿರೂಪಾಕ್ಷ ಮತ್ತು ಬಾರ್ಕೂರಿನ ರಾಜ್ಯಪಾಲ ವಿಠರಸ ಒಡೆಯನ ಕಾಲದ ಮೂರು ಶಾಸನಗಳು ತಿಳಿಸುತ್ತವೆ.

       ಮೇಲೆ ಹೇಳಿದ ದತ್ತಿಯ ಹಣವನ್ನು, ಭೂಮಿಯನ್ನು ಅಡವು(ಆರುವಾರ) ಇರಿಸಿ ದುಗ್ಗಣ ಸೆಟ್ಟಿಯ ಕೈಯಲ್ಲಿ ಕೊಂಡದ್ದೆಂದು ಶಾಸನ ನಮೂದಿಸುತ್ತದೆ. ಧರ್ಮಕಾರ್ಯಕ್ಕಾಗಿ ಜನ ಸಾಲ ಮಾಡಿಯೂ ವೆಚ್ಚ ಮಾಡುತ್ತಿದ್ದುದು, ಬೇರೆ ಬೇರೆ ಗದ್ದೆಗಳ ಹೆಸರು, ಭೂ ಒಡೆತನ ಹೊಂದಿದ್ದ ಜನನಿಗಳ ಉಲ್ಲೇಖ, ದೀಪಾವಳಿ ಹಬ್ಬದ ಸಂಬಂಧ ಮೂರು ದಿನದ ರಂಗಪೂಜೆ ಹಾಗೂ ಮಹಾದೇವರ ಕೆರೆ(ದೇವರ ಕೆರೆ) ತೂಬಿನ ನೀರು ಹರಿವ ತೋಡಿನ ಉಲ್ಲೇಖ ಇತ್ಯಾದಿ ಹಲವು ಗಮನಾರ್ಹ ವಿಷಯಗಳನ್ನು ಈ ಮೂರು ಶಾಸನಗಳು ಒಳಗೊಂಡಿವೆ.

      ತಿರುಮಲ ವೆಂಕಟರಮಣ ದೇವಸ್ಥಾನ ಬಸ್ರೂರಿನ ಪ್ರಮುಖ ದೇವಸ್ಥಾನಗಳಲ್ಲೊಂದು. ಇಲ್ಲಿನ 1482 ಏಪ್ರಿಲ್ 19ರ ಶಾಸನದಲ್ಲಿ, ಬಾರ್ಕೂರಿನ ರಾಜ್ಯಪಾಲ ಮಲ್ಲಪ್ಪನಾಯಕನ ಆಳ್ವಿಕೆಯಲ್ಲಿ ಪಡುವಕೇರಿಯ ತಿರುಮಲ ದೇವರಿಗೆ ಅಮೃತಪಡಿಗಾಗಿ ಹಲರು ನೀಡಿದ ದತ್ತಿಯ ವಿವರವಿದೆ. ವಿವಿಧ ರೀತಿಯ ಸಾಲಗಳು(ಮೈಸಾಲ, ಆರುವಾರ, ಅರ್ಧ ಆರುವಾರ ಇತ್ಯಾದಿ), ಗೇಣಿ ವ್ಯವಸ್ಥೆ, ಹೇಳೆಕಳಿ ಕಡಿದು ಬೇಸಾಯದ ಗದ್ದೆಯಾಗಿ ಪರಿವರ್ತಿಸಿದ್ದು, ನೆಟ್ಟ ತೆಂಗಿನ ಸಸಿಗಳ ಮೇಲೆ ತೆರಿಗೆ ಇತ್ಯಾದಿ ವಿವರಗಳು ವಿಜಯನಗರ ಕಾಲದ ಸಾಮಾಜಿಕ ಆರ್ಥಿಕ ಪರಿಸ್ಥಿತಿಯನ್ನು ಚಿತ್ರಿಸುವಲ್ಲಿ ನೆರವಾಗುತ್ತವೆ. ಹಿರಿಯ ಕುದುರು(ಹೇರಿಕುದುರು), ಪಡುವಕುದುರು ಇತ್ಯಾದಿ ಉಲ್ಲೇಖಗಳು ಆಗಿನ ಭೂಸ್ಥಿತಿಯನ್ನು ತಿಳಿಯಲು ಉಪಯುಕ್ತವಾಗಿವೆ.

        ಬಸ್ರೂರಿನಲ್ಲಿ ಅತ್ಯಂತ ಪ್ರಬಲ ವ್ಯಾಪಾರಿ ಸಂಘವಾಗಿದ್ದ ಸೆಟ್ಟಿಕಾರರ ಗುರುಗಳಾದ ರುದ್ರಾಕ್ಷಿ ಒಡೆಯರು ಬಸ್ರೂರು ಪಡುವಕೇರಿಯಲ್ಲಿ ಮಠ ಕಟ್ಟಿಸಿದ್ದನ್ನು 1487ರ ಶಾಸನ ತಿಳಿಸುತ್ತದೆ. ಆಗ ರಾಜ್ಯಪಾಲನಾಗಿದ್ದವನು ವಿರೂಪಾಕ್ಷ ದೇವ ಒಡೆಯ.

Basrur
        1506ರಲ್ಲಿ ವೀರ ನರಸಿಂಹನ ಆಳ್ವಿಕೆಯಲ್ಲಿ ಈ ಪ್ರದೇಶದ ಆಡಳಿತ ನಡೆಸುತ್ತಿದ್ದ ಬಾರ್ಕೂರಿನ ರಾಜ್ಯಪಾಲ ಬಸವರಸ ಒಡೆಯನು ರಾಜನಿಗೆ ಶತ್ರು ಕ್ಷಯ, ಮಿತ್ರೋರ್ಜಿತ, ಆಯುರಾರೋಗ್ಯ ಅಭಿವೃದ್ಧಿಯಾಗಬೇಕೆಂದು ತಿರುಮಲ ದೇವರಿಗೆ ದತ್ತಿ ನೀಡಿದ್ದ. ಕಂದಾವರ ಗ್ರಾಮವನ್ನು ಅರಮನೆಯ ಭಂಡಾರ ಸ್ಥಳವೆಂದು ನಮೂದಿಸಿರುವುದು ಗಮನಾರ್ಹ. ಆಡಳಿತದ ಅಧ್ಯಯನಕ್ಕೆ ಈ ಶಾಸನ ಉಪಯುಕ್ತ ಮಾಹಿತಿಯನ್ನು ಒಳಗೊಂಡಿದೆ. ಸಾಲಿಗರ ಕೇರಿ(ನೇಯ್ಗೆಯವರದ್ದು) ಮತ್ತು ಮೊದಲು ಮೂಡುಕೇರಿಯ ಭಾಗವಾಗಿದ್ದು ನಂತರ ಪ್ರತ್ಯೇಕ ಕೇರಿಯಾಗಿ ಮಾರ್ಪಟ್ಟ ಹೊಸಕೇರಿಯ ಪ್ರಸ್ತಾಪ ಈ ಶಾಸನದಲ್ಲಿದೆ. ಉತ್ಸವ ಮುಂತಾದ ವಿಶೇಷ ಸಂದರ್ಭಗಳಲ್ಲಿ ಅಶ್ವತ್ಥ ಕಟ್ಟೆಯಲ್ಲಿ ಕುಡಿಯುವ ನೀರಿನ ಧರ್ಮದ ವ್ಯವಸ್ಥೆಗೆ ಮತ್ತು ದೀಪಾವಳಿಯ ದೀಪದ ವೆಚ್ಚಕ್ಕೆ ದತ್ತಿ ನೀಡಿದ್ದು ತಿಳಿದುಬರುತ್ತದೆ.

ಮುಂದುವರೆಯುತ್ತದೆ...





-ಶಿವರಾಜ್ ಶೆಟ್ಟಿ.

Theme images by sndr. Powered by Blogger.