Header Ads

ಏಳು ಕೇರಿ ಏಳು ಕೆರೆಗಳ ನಾಡು ಬಸ್ರೂರು.


ಏಳು ಕೇರಿ ಏಳು ಕೆರೆಗಳ ನಾಡು ಬಸ್ರೂರು.

         ತುಳುನಾಡಿನ ಐತಿಹಾಸಿಕ ಪಟ್ಟಣಗಳಲ್ಲಿ ಕುಂದಾಪುರ ತಾಲೂಕಿನ ಬಸ್ರೂರು ಒಂದಾಗಿದೆ. ಚಾರಿತ್ರಿಕ ಕಾಲದಲ್ಲಿ ಸಾಕಷ್ಟು ಮೆರೆದ ಹಾಗೂ ಪ್ರಸಿದ್ಧಿ ಪಡೆದ ಈ ಪಟ್ಟಣ ದೇವಾಲಯಗಳ ಆಗರ. ಸಾಮಾಜಿಕ ಘಟಕಗಳ ಕೇಂದ್ರ. ರಾಜಕೀಯ ವೈಶಿಷ್ಟ್ಯವುಳ್ಳ ಪ್ರದೇಶ. ಅಲ್ಲದೆ ಆರ್ಥಿಕ ವ್ಯವಹಾರಗಳ ಕೇಂದ್ರವೂ ಆಗಿತ್ತು. 'ವಸುಪುರ' ಎಂದೂ ಕರೆಸಿಕೊಳ್ಳುವ ಈ ಪಟ್ಟಣದಲ್ಲಿ ಏಳು ಕೇರಿ ಹಾಗೂ ಏಳು ಕೆರೆಗಳಿವೆ.

ಏಳು ಕೇರಿಗಳು:
೧. ಮಂಡಿಕೇರಿ:
           ಊರ ಪ್ರಮುಖ ಮಂದಿರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ನಗರ ಮಧ್ಯದಲ್ಲಿದ್ದು ಇದರ ಎಡಭಾಗದಿಂದ ಉತ್ತರಾಭಿಮುಖವಾಗಿ ಚಲಿಸಿದರೆ ಹಿಂದೆ ನಾವೆಗಳು ನಿಲ್ಲುವ ಬಂದರು ಸ್ಥಳ ಸಿಗುತ್ತದೆ. ಈ ಕೇರಿಯೇ ಮಂಡಿಕೇರಿ. ಸಗಟು ಮಾರಾಟದ ಮಳಿಗೆಗಳಿಗೆ ಮಂಡಿ ಎನ್ನುತ್ತಾರೆ. ಇಂತಹ ಮಂಡಿಗಳು ಇದ್ದುದರಿಂದಲೇ ಇದಕ್ಕೆ ಮಂಡಿಕೇರಿಯೆಂಬ ಹೆಸರಾಗಿದೆ. ಈ ಕೇರಿಯ ಉದ್ದ ಸುಮಾರು 200 ಮೀಟರುಗಳು. ಇದರ ಇಕ್ಕೆಲಗಳಲ್ಲಿಯೂ ಒತ್ತೊತ್ತಾಗಿ ಮನೆಗಳಿವೆ. ರಸ್ತೆಗೆ ತಾಗಿಯೇ ಈ ಮನೆಗಳ ಜಗಲಿಗಲು ಇರುವುದನ್ನು ಇಲ್ಲಿ ಕಾಣಬಹುದು. ಸುಮಾರು 300-400 ವರ್ಷಗಳ ಹಿಂದೆ ಮನೆಗಳ ರಚನೆ ಹೇಗಿತ್ತು ಎಂಬುದನ್ನು ಇಲ್ಲಿ ಕಾಣಬಹುದಾಗಿದೆ. ಇಲ್ಲಿ ಈಗಲೂ ಕೆಲವು ಮನೆಗಳಲ್ಲಿ ಹಿಂದಿನ ಕಾಲದ ಪಿಂಗಾಣಿಯ ಬೃಹತ್ ಗಾತ್ರದ ಪೀಪಾಯಿಗಳನ್ನು ಕಾಣಬಹುದು. ಹಿಂದೆ ವ್ಯಾಪಾರಿಗಳು ತಮ್ಮ ಅಮೂಲ್ಯ ಸರಕನ್ನು ಇದರಲ್ಲಿ ತುಂಬಿಸಿ ಸುರಕ್ಷಿತವಾಗಿ ಕಾಪಾಡುತ್ತಿದ್ದರಂತೆ. ಮಂಡಿಕೇರಿಯ ಬಂದರು ಪ್ರದೇಶಕ್ಕೆ ಮಂಡಿಬಾಗಿಲು ಎಂದು ಹೆಸರು. ದೇಶ ವಿದೇಶಗಳಿಂದ ವ್ಯಾಪಾರೀ ನಾವೆಗಳು ಬಸ್ರೂರ ತನಕ ತಲುಪುತ್ತಿದ್ದವು. ನಾವೆಗಳು ಬಂದು ನಿಲ್ಲಲು ಸುರಕ್ಷಿತವಾದ ಬಂದರು ಇದಾಗಿತ್ತು ಎನ್ನುವ ಸ್ಪಷ್ಟ ಕುರುಹು ಇಲ್ಲಿದೆ. ನಾವೆಗಳಿಂದ ಸರಕು ಇಳಿಸಲು ಹಾಗೂ ನಾವೆಗಳಿಗೆ ಸರಕು ತುಂಬಿಸಲು ಅನುಕೂಲವಾಗುವಂತೆ ಶಿಲಾಹಲಗೆಗಳಿಂದ ನಿರ್ಮಿಸಿದ ಜೆಟ್ಟಿ ಇಲ್ಲಿದೆ. ರಾತ್ರಿಕಾಲದಲ್ಲಿ ಯಾರೂ ನಗರ ಪ್ರವೇಶಿಸದಂತೆ ಮಂಡಿಬಾಗಿಲು ಮುಚ್ಚುವ ವ್ಯವಸ್ಥೆಯೂ ಹಿಂದೆ ಇದ್ದುದಾಗಿ ಹೇಳುತ್ತಾರೆ. ಮಂಡಿಬಾಗಿಲಿನಿಂದಲೇ ಹಟ್ಟಿಕುದ್ರಿಗೆ ದೋಣಿಯಲ್ಲಿ ಹೊಳೆ ದಾಟಿ ಹೋಗಬಹುದಾಗಿದೆ. ಮಂಡಿಕೇರಿಯಲ್ಲಿ ಗೌಡಸಾರಸ್ವತರ ಕುಲದೇವಸ್ಥಾನಗಳಲ್ಲಿ ಒಂದಾದ ಶ್ರೀ ಮಹಲಸ ನಾರಾಯಣೀ ದೇವಸ್ಥಾನವಿದೆ. ಭೀಮ ಸಂಘದ ಕಚೇರಿಯೂ ಇದೆ ಕೇರಿಯಲ್ಲಿದೆ.

೨.ವಿಲಾಸಕೇರಿ:
        ಮಂಡಿಕೇರಿಯ ಪೂರ್ವ ದಿಕ್ಕಿನಲ್ಲಿ ಸಮಾನಾಂತರವಾಗಿ ಇನ್ನೊಂದು ಕೇರಿಯಿದೆ. ಅದೇ ವಿಲಾಸಕೇರಿ. ಹೆಸರು ಬಹಳ ವಿಚಿತ್ರವಾಗಿದೆಯಲ್ಲವೇ? ಹಿಂದೆ ಬಸ್ರೂರು ರಸಿಕರನ್ನು ಆಕರ್ಷಿಸುವ ಕೇಂದ್ರವೂ ಆಗಿತ್ತು. ವ್ಯಾಪಾರಕ್ಕಾಗಿಯೋ ಇನ್ನಿತರ ಕಾರಣಗಳಿಗಾಗಿಯೋ ಬಸ್ರೂರಿಗೆ ಬಂದವರು ತಮ್ಮ ಯೋಗ್ಯತೆಗೆ ತಕ್ಕಂತೆ ವಿಲಾಸೀ ಮಂದಿರಗಳಲ್ಲಿ ಸ್ವಚ್ಛಂದವಾಗಿ ಕಾಲ ಕಳೆಯುತ್ತಿದ್ದುದು ಸ್ವಾಭಾವಿಕವಾಗಿತ್ತು. ವಿಲಾಸೀ ಮಂದಿರಗಳಲ್ಲಿ ತಂಗಿ ತಮ್ಮ ಮೈಮನಗಳ ದಣಿವನ್ನು ಆರಿಸಿಕೊಳ್ಳುತ್ತಿದ್ದರು. (ಡಾ ಶಿವರಾಮ ಕಾರಂತರ "ಮೈಮನಗಳ ಸುಳಿಯಲ್ಲಿ" ಎಂಬ ಕಾದಂಬರಿಯಲ್ಲಿ ಬಸ್ರೂರಿನ ವಿಲಾಸಕೇರಿಯ ಉಲ್ಲೇಖವಿದೆ.) ಇದು ಅವರ ಶ್ರೀಮಂತಿಕೆಯ ದ್ಯೋತಕವೂ ಆಗಿತ್ತು. ಇಂತಹ ವಿಲಾಸೀ ಮಂದಿರಗಳಿದ್ದ ಕೇರಿಯನ್ನೇ 'ವಿಲಾಸಕೇರಿ' ಎಂದು ಕರೆಯುತ್ತಿದ್ದಿರಬಹುದು. ಆದರೆ ಈಗ ಇಲ್ಲಿ ಅಂತಹ ಯಾವ ಮಂದಿರವೂ ಕಾಣಸಿಗುವುದಿಲ್ಲ. ಈ ಕೇರಿಯ ಉದ್ದವೂ ಸುಮಾರು 200 ಮೀಟರ್. ಕೇರಿಯ ಕೊನೆಯಲ್ಲಿ ಮಂಡಿಬಾಗಿಲಿನಲ್ಲಿದ್ದಂತೆಯೇ ಒಂದು ಪ್ರವೇಶದ್ವಾರವನ್ನು ಕಾಣಬಹುದು. ಇಲ್ಲಿಯೂ ಬಾಗಿಲು ಮುಚ್ಚುವ ವ್ಯವಸ್ಥೆಯ ಕುರುಹನ್ನು ಕಾಣಬಹುದು.
        ಹಿಂದೆ ಇಲ್ಲಿ ವೀರೇಶ ದೇವಾಲಯವಿದ್ದುದರಿಂದ ಈ ಕೇರಿ ವೀರೇಶಕೇರಿಯೆಂದಾಗಿತ್ತು, ಬರಬರುತ್ತಾ 'ವೀರೇಶ' ಹೋಗಿ 'ವಿಲಾಸ' ಆಗಿರಬಹುದೆಂಬ ಸಂಶಯ ವ್ಯಕ್ತಪಡಿಸುವವರೂ ಇದ್ದಾರೆ. ಆದರೆ ಈ ಮಾತಿಗೆ ಏನು ದಾಖಲೆಯಿದೆಯೆಂಬುದು ತಿಳಿದು ಬರುವುದಿಲ್ಲ. ಇಲ್ಲಿ ವೀರೇಶ ದೇವಾಲಯವಿದ್ದ ಯಾವ ಕುರುಹೂ ಈಗ ಇಲ್ಲ. ಈ ಕೇರಿಯ ಪ್ರಾರಂಭದಲ್ಲಿ ಒಂದು ಕಟ್ಟೆ ಕಾಣಸಿಗುತ್ತದೆ. ಇದಕ್ಕೆ ಚಿನಿವಾರಕಟ್ಟೆ ಎಂಬ ಹೆಸರು ಇದೆ. ಹಿಂದೆ ಈ ಸ್ಥಳದಲ್ಲಿ ಚಿನ್ನದ ಒಡವೆಗಳನ್ನು ಮಾರಾಟ ಮಾಡುವ ಅಥವಾ ತಯಾರಿಸುವ ಮಂದಿ ಇದ್ದಿರಬಹುದೆಂದು ಕಾಣುತ್ತದೆ.

೩.ಬಸದಿಕೇರಿ:
        ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನಿಂದ ಸ್ವಲ್ಪ ಮುನ್ನಡೆದು ಎಡಕ್ಕೆ ತಿರುಗಿ ಸುಮಾರು 100 ಮೀಟರ್ ನಡೆದು ಬಲಕ್ಕೆ ತಿರುಗಿ ನೇರವಾಗಿ ಪೂರ್ವದಿಕ್ಕಿಗೆ ಸುಮಾರು 300 ಮೀಟರ್ ತನಕ ಸಾಗುವ ರಸ್ತೆಯೇ ಬಸದಿಕೇರಿ. ಈ ಕೇರಿಯ ಇಕ್ಕೆಲಗಳಲ್ಲಿಯೂ ಒತ್ತೊತ್ತಾಗಿರುವ ಮನೆಗಳ ಸಾಲು ಇದೆ. ಮನೆಗಳ ಮಧ್ಯದಲ್ಲೊಂದು ಶಿಲಾನಿರ್ಮಿತ ಕಟ್ಟೆ ಇದೆ. ಇದನ್ನು ಬಸದಿಬಾಗಿಲು ಎನ್ನುತ್ತಾರೆ. ಈ ಎಲ್ಲ ಕಾರಣಗಳಿಂದ ಇಲ್ಲೆಲ್ಲೋ ಜೈನ ಬಸದಿ ಇದ್ದಿರಬಹುದು ಎಂಬ ಬಲವಾದ ಸಂಶಯ ಬರುತ್ತದೆ. ಈ ಕೇರಿಯಲ್ಲಿ ಈಗಲೂ ಕುಶಲಕರ್ಮಿಗಳಾದ ಗುಡಿಗಾರರು, ಕಂಚುಗಾರರು, ಚಿನಿವಾರರು, ನೇಕಾರರು ಮುಂತಾದವರ ಮನೆಗಳಿವೆ. ಬಹಳ ಹಿಂದೆ ಪಟಗಾರರೂ ಇದ್ದರು.

೪.ರಾವುತ ಕೇರಿ:
        ಚತುರಂಗ ಸೇನೆಗಳಲ್ಲಿ ಒಂದಾದ ಕುದುರೆ ಸವಾರರ ಸೈನ್ಯ ಇತ್ತೆಂಬುದಕ್ಕೆ ಈ ಕೇರಿಯ ಹೆಸರೇ ಸಾಕ್ಷಿ. ಅಲ್ಲದೆ ಕುದುರೆ ಕಟ್ಟುವ ಕಲ್ಲು ಹಾಗೂ ಕುದುರೆಗಳು ನೀರು ಕುಡಿಯಲು ನಿರ್ಮಿಸಿದ ಶೀಲಾ ತೊಟ್ಟಿಗಳು ಇಲ್ಲಿವೆ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದೆದುರಿನ ಬೀದಿಯ ದಕ್ಷಿಣ ದಿಕ್ಕಿನಿಂದ ಸುಮಾರು 200 ಮೀಟರ್ ತನಕ ಈ ಕೇರಿ ಇದೆ. ಇಲ್ಲಿ ಗೌಡ ಸಾರಸ್ವತರ ಕುಲದೇವಸ್ಥಾನಗಳಲ್ಲಿ ಒಂದಾದ ಶ್ರೀ ಶಾಂತೇರಿ ಕಾಮಾಕ್ಷಿ ದೇವಸ್ಥಾನವಿದೆ. ಅದರ ಎದುರುಗಡೆಯ ಒಂದು ಹಿತ್ತಿಲಿನಲ್ಲಿಯೇ ಅತೀ ಪ್ರಾಚೀನವಾದ ತುಳುವೇಶ್ವರ ಎಂಬ ಬಯಲು ದೇವಾಲಯವಿದೆ. ಶಿವಲಿಂಗದ ಎದುರಿಗೆ ಬೃಹದಾಕಾರದ, ಅತ್ಯಂತ ಸುಂದರ ನಂದಿ ವಿಗ್ರಹವಿದೆ. ಹಿಂದೆ ಇದಕ್ಕೆ ಗರ್ಭಗೃಹ, ಪ್ರಾಕಾರಗಳಿದ್ದಿರಲೂಬಹುದು. ಆದರೆ ಈಗ ದೊಡ್ಡದಾಗಿ ಬೆಳೆದು ನಿಂತ ಗೋಳಿಮರವೊಂದೇ ಇದಕ್ಕೆ ಆಶ್ರಯ. ಗೋಳಿಮರದ ಬೇರುಗಳೆಡೆಯಲ್ಲಿ ಶಿವಲಿಂಗ ಸಿಕ್ಕಿಹಾಕಿಕೊಂಡಂತಿದೆ. ಗಾಳಿ, ಮಳೆ, ಬಿಸಿಲುಗಳ ಹೊಡೆತದಿಂದ ಇನ್ನೂ ಹೆಚ್ಚು ಕಾಲ ಈ ವಿಗ್ರಹಗಳ ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲಾರವು. ಐತಿಹಾಸಿಕ ಪಳೆಯುಳಿಕೆಗಳನ್ನು ಉಳಿಸುವ ಸಲುವಾಗಿಯಾದರೂ ಈ ಗುಡಿಯ ಜೀರ್ಣೋದ್ಧಾರವಾಗಬೇಕಾದುದು ಅವಶ್ಯ. ಶ್ರೀ ಮಹಾಲಿಂಗೇಶ್ವರ ದೇವರ ಕೈಂಕರ್ಯದಲ್ಲಿ ನರ್ತಕಿಯರಾಗಿ ಭಾಗವಹಿಸುತ್ತಿದ್ದ ದೇವದಾಸಿ ಮನೆತನದ ಒಂದೆರಡು ಶಿಥಿಲ ಕಟ್ಟಡಗಳನ್ನು ಈ ಕೇರಿಯಲ್ಲಿ ಈಗಲೂ ಕಾಣಬಹುದು. ದಕ್ಷಿಣಾಭಿಮುಖವಾಗಿ ಮುಂದುವರಿದರೆ ರಸ್ತೆಯ ಎಡಭಾಗದಲ್ಲಿ ಊರಿನ ಇನ್ನೊಂದು ಮುಖ್ಯ ದೇವಸ್ಥಾನ ಶ್ರೀ ದೇವಿ ಅಮ್ಮನವರ ಗುಡಿ ಇದೆ. ಸುಮಾರು 400 ವರ್ಷಗಳಷ್ಟು ಪುರಾತನವಾದ ಈ ದೇವಾಲಯವು ನಾಥ ಪಂಥದ ಯತಿಗಳಿಂದ ಪ್ರತಿಷ್ಟಾಪಿಸಲ್ಪಟ್ಟಿತ್ತೆಂದು ಹೇಳುತ್ತಾರೆ. ಈ ದೇವಸ್ಥಾನದ ಕಾಷ್ಠ ಶಿಲ್ಪದ ಮೂರ್ತಿಗಳು ಪ್ರವಾಸಿಗರ ಮನಸೂರೆಗೊಳ್ಳದೆ ಬಿಡದು. ಈ ದೇವಸ್ಥಾನಕ್ಕೆ ಹೋಗುವ ರಸ್ತೆಯ ಬಲಬದಿಯಲ್ಲಿಯೇ "ಬಸ್ರೂರು ಬಳಕೆದಾರರ ವೇದಿಕೆ"ಯ ಕಚೇರಿ ಇದೆ.
        ಕೇರಿಯಲ್ಲಿ ಇನ್ನೂ ಮುಂದರಿದರೆ ಕೊನೆಯಲ್ಲಿ ಎರಡು ದೇವಸ್ಥಾನಗಳು ಒತ್ತೊತ್ತಾಗಿ ಸಿಗುತ್ತವೆ. ಒಂದು ಆಂಜನೇಯ ಗುಡಿ. ಇನ್ನೊಂದು ಶ್ರೀ ತಿರುಮಲ ವೆಂಕಟರಮಣ ಗುಡಿ. ಆಂಜನೇಯ ಗುಡಿಯು ಪಶ್ಚಿಮಾಭಿಮುಖವಾಗಿದ್ದಾರೆ, ಶ್ರೀ ವೆಂಕಟರಮಣ ದೇವರ ಗುಡಿಯು ಉತ್ತರಾಭಿಮುಖವಾಗಿದೆ. ವೆಂಕಟರಮಣ ದೇವಸ್ಥಾನದಲ್ಲಿರುವ ರಾಮಾನುಜ ಆಂಜನೇಯ, ಗಜಲಕ್ಷ್ಮಿ, ಹಾಗೂ ಗರುಡ ಮೂರ್ತಿಗಳು ಕಲಾತ್ಮಕವಾಗಿವೆ. ದೇವಸ್ಥಾನದ ಎದುರಿನ ಕಂಚಿನ ದೀಪಸ್ತಂಭದಲ್ಲಿರುವ ಗೋಪಿಕಾ ವಸ್ತ್ರಾಪಹರಣದ ದೃಶ್ಯವನ್ನು ಅನೇಕ ದೇಶೀಯ ಹಾಗೂ ವಿದೇಶೀಯ ಪ್ರವಾಸಿಗರು ತಮ್ಮ ಕಮೆರಾದಲ್ಲಿ ಸೆರೆಹಿಡಿದಿದ್ದಾರೆ.
         ಪೋರ್ಚುಗೀಸರು ವ್ಯಾಪಾರಕ್ಕಾಗಿ ಹಡಗು(ನಾವೆ)ಗಳ ಮೂಲಕ ಇಲ್ಲಿಗೆ ಬರುತ್ತಿದ್ದಾರೆನ್ನಲು ಬಲವಾದ ಸಾಕ್ಷಿಯೊಂದು ಈ ಕೇರಿಯಲ್ಲಿದೆ. ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ಪಕ್ಕದಲ್ಲಿಯೇ ಇರುವ ಅರ್ಚಕರ ಮನೆಯ ಎತ್ತರದ ಗೋಡೆಯಲ್ಲಿ ಅಳವಡಿಸಿದ ಪೋರ್ಚುಗೀಸ್ ಲಾಂಛನವು ನಿಮ್ಮನ್ನು ಆಕರ್ಷಿಸದೆ ಇರದು.

೫.ಗುಡಿಗಾರ ಕೇರಿ:
        ಶ್ರೀ ವೆಂಕಟರಮಣ ದೇವಸ್ಥಾನದ ಬಲಗಡೆಯಿಂದ ಪೂರ್ವಕ್ಕೆ ಈಗಿನ ಬಸ್ ಸ್ಟ್ಯಾಂಡ್ ತನಕ ಸಾಗುವ ಕೇರಿಯೇ ಗುಡಿಗಾರ ಕೇರಿ. ಗುಡಿಗಾರರ ಒಂದೇ ಒಂದು ಕುಟುಂಬ ಈ ಕೇರಿಯಲ್ಲಿ ಇಲ್ಲದಿದ್ದರೂ ಹೆಸರು ಮಾತ್ರ ಹಾಗೆಯೇ ಉಳಿದಿದೆ. ಸುಮಾರು 200 ಮೀಟರ್ ಉದ್ದದ ಈ ಕೇರಿಯ ಮಧ್ಯದಲ್ಲೊಂದು ಕಟ್ಟೆ ಈಗಲೂ ಉಳಿದುಕೊಂಡಿದೆ. ಅದಕ್ಕೆ ಗುಡಿಗಾರ್ರ ಕಟ್ಟೆ ಎಂದು ಹೆಸರು. ನಿಮಗೇನಾದರೂ ಕೈಮಗ್ಗಗಳನ್ನು ನೋಡಬೇಕೆಂದಿದ್ದರೆ ಈ ಕೇರಿಯಲ್ಲಿ ಕೈಮಗ್ಗದ ಯೂನಿಟ್ ಇದೆ.

೬.ಮೇಲ್ ಕೇರಿ:
        ಈಗಿರುವ ನೀರು ಟಾಂಕಿಯಿಂದ ಶ್ರೀ ಶಾರದಾ ಕಾಲೇಜಿನ ತನಕ ಇರುವ ಕೇರಿಗೆ ಮೇಲ್ ಕೇರಿಯೆಂದು ಹೆಸರು. ಇದಕ್ಕೆ ಸಾಲೇರ ಕೇರಿ ಎಂದೂ ಕರೆಯುತ್ತಾರೆ. ಇದರ ಉದ್ದ ಸುಮಾರು 250 ಮೀಟರ್. ಈಗಿನ ಬಸ್ ಸ್ಟ್ಯಾಂಡ್ ಈ ಕೇರಿಯ ಮಧ್ಯದಲ್ಲಿ ಇದೆ.

೭.ಮೂಡುಕೇರಿ: 
        ಇದು ಹೆಸರಿಗೆ ಸರಿಯಾಗಿ ಊರಿನ ಮೂಡು ದಿಕ್ಕಿನಲ್ಲಿದೆ. ಸುಮಾರು 300 ಮೀಟರ್ ಉದ್ದದ ಈ ಕೇರಿಯು ದಕ್ಷಿಣದಲ್ಲಿ ಕಾಶಿ ಮಠದಿಂದ ಉತ್ತರಕ್ಕೆ ಕೊಟಿ ಚೆನ್ನಯ್ಯರ ಗರಡಿ ಮನೆಯ ತನಕ ಸಾಗಿದೆ. ಈ ಕೇರಿಯಲ್ಲಿ ಶ್ರೀ ಭುವನೇಂದ್ರ ಬಾಲಕಾಶ್ರಮ, ಅದರ ಎದುರಲ್ಲೇ ಇರುವ ಶ್ರೀ ರಾಮಚಂದ್ರ, ಇದರ ಬಲಗಡೆಗೆ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನವು, ಉತ್ತರಾಭಿಮುಖವಾಗಿಯೂ ಕಾಶಿ ಮಠದ ಎಡಡಿಕ್ಕಿನಲ್ಲಿ ಬಹಳ ಪುರಾತನದ್ದೆಂದು ಹೇಳಲಾಗುವ ಶ್ರೀ ಆದಿನಾಥೇಶ್ವರ ದೇವಸ್ಥಾನವೂ ಇದೆ. ಈ ದೇವಸ್ಥಾನಕ್ಕೆ ಅಗಸ್ತ್ಯೇಶ್ವರ ಎಂಬ ಹೆಸರೂ ಇದೆ. ಈ ಕೇರಿಯಲ್ಲಿ ಇನ್ನೂ ಮುಂದುವರಿದರೆ ಬಸದಿಕೇರಿಯ ಕೂಡು ರಸ್ತೆಗೆ ಕೂಡಿಕೊಳ್ಳುತ್ತದೆ. ಮತ್ತೂ ಮುಂದುವರಿದರೆ ಶ್ರೀ ಕಾಲಭೈರವನ ಗುಡಿ ಇದೆ. ಕೊನೆಯಲ್ಲಿರುವುದೇ ಕೋಟಿಚೆನ್ನಯ್ಯರ ಗರಡಿ. ಈ ಗರಡಿಯಲ್ಲಿ ಕಾಷ್ಟ ವಿಗ್ರಹಗಳ ಒಂದು ಸಮೂಹವೇ ಇದೆ. ಈ ವಿಗ್ರಹಗಳ ಕಥೆ (ಐತಿಹ್ಯಗಳು) ಕೇಳಬೇಕೆಂದರೆ ಗರಡಿಯ ಅರ್ಚಕರನ್ನು ವಿಚಾರಿಸಬಹುದು. ಈ ಕೇರಿಯ ಕೆರೆಕಟ್ಟೆಯಲ್ಲಿ ನೇಪಾಳದ ಅಡಿಗರ ಮನೆ ಹಾಗೂ ಪ್ರಜಾಪಿತ ಬ್ರಹ್ಮಕುಮಾರಿಯರ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗ ಶಿಕ್ಷಣ ಕೇಂದ್ರವಿದೆ.


ಏಳು ಕೆರೆಗಳು:
       ಬಸ್ರೂರಿನಲ್ಲಿ ಕೆರೆಗಳ ಸಂಖ್ಯೆ ಅಪಾರವಾಗಿದೆ. ಆದರೆ ಹೆಚ್ಚಿನವೆಲ್ಲ ನೀರಾವರಿ ಉದ್ದೇಶದಿಂದ ತೋಡಿಡವುಗಳಾಗಿವೆ. ಬಸ್ರೂರಿನ 'ಏಳು ಕೆರೆ'ಗಳನ್ನು ಗುರುತಿಸುವಾಗ ಒಂದು ಮಾನದಂಡವನ್ನು ಉಪಯೋಗಿಸಿಕೊಳ್ಳಲಾಗಿದೆ. ಇವು ಕೆಂಪುಬಣ್ಣದ ಹಾಸು ಕಲ್ಲುಗಳಿಂದ ನಿರ್ಮಿತವಾಗಿದ್ದು ಶಿಲೆಯ ಹಾಸುಗಲ್ಲಿನ ಮೆಟ್ಟಿಲುಗಳನ್ನು ಹೊಂದಿವೆ. ಇವುಗಳನ್ನು ಅತೀ ಪ್ರಾಚೀನ ಕೆರೆಗಳೆಂದು ಗುರುತಿಸಲಾಗಿದೆ.

೧.ದೇವರ ಕೆರೆ: 
        ರಾವುತಕೆರಿಯಲ್ಲಿರುವ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ಪಶ್ಚಿಮಕ್ಕಿರುವ ಕೆರೆಗೆ ದೇವರ ಕೆರೆ ಎಂದು ಹೆಸರು. ಇದು ಬಹಳ ವಿಶಾಲವಾಗಿದ್ದು ಈ ಕೆರೆಯ ಮಧ್ಯದಲ್ಲೊಂದು ಚಿಕ್ಕದಾದ ದೇವರ ಗುಡಿಯು ಇದ್ದಿತ್ತು. ಈಗ ಅದರ ಕುರುಹು ಮಾತ್ರ ಕಾಣಬಹುದೆ ವಿನಹ ಅದರೊಳಗಿದ್ದ 'ದಶಭುಜ ಗಣಪತಿ'ಯ ಅಪೂರ್ವ ವಿಗ್ರಹವನ್ನು ಕೆರೆದಂಡೆಯಲ್ಲಿರುವ ಭಟ್ಟರೊಬ್ಬ್ಬರು ರಕ್ಷಿಸಿಕೊಂಡಿದ್ದಾರೆ. ಯಾರಿಗಾದರೂ ನೋಡಬೇಕೆನಿಸಿದರೆ ಅವರು ಸಂತೋಷದಿಂದ ತೋರಿಸುತ್ತಾರೆ.
        ಶ್ರೀ ಮಹಾಲಿಂಗೇಶ್ವರ ದೇವರ ದೀಪೋತ್ಸವ ಆಚರಿಸುವುದಾಗಲೀ, ರಥೋತ್ಸವದ ಮೂರನೇ ರಾತ್ರಿ ನಡೆಯುವ ತೆಪ್ಪೋತ್ಸವ ಆಚರಿಸುವುದಾಗಲೀ ಇಲ್ಲಿಯೇ. ದೋಣಿಯಲ್ಲಿ ದೇವರ ಉತ್ಸವಮೂರ್ತಿಯನ್ನಿಟ್ಟು ಈ ಜೆರೆಯಲ್ಲಿ ಸುತ್ತು ತಿರುಗಿಸುತ್ತಾರೆ. ದೀಪೋತ್ಸವದ ದಿನ ಕೆರೆಯ ಸುತ್ತ ಹಣತೆ ದೀಪಗಳ ಸಾಲು ಕಂಗೊಳಿಸುತ್ತದೆ.

Basrur
       ನಮ್ಮ ಪೂರ್ವಜರು ಯಾವ ಉದ್ದೇಶದಿಂದ ಇಂತಹ ಕೆರೆಗಳನ್ನು ಕಟ್ಟಿಸಿದ್ದಾರೋ ಆ ಉದ್ದೇಶ ಈಗ ಸಫಲವಾಗದಿರುವುದು ವಿಷಾದನೀಯ. ಹೊಸನೀರು ಕೆರೆಗೆ ಬರುವುದಕ್ಕೂ, ಕಶ್ಮಲ ಭರಿತ ನೀರು ಹೊರಹೋಗುವುದಕ್ಕೂ ಹಿಂದೆ ತೂಬುಗಳ ವ್ಯವಸ್ಥೆ ಇದ್ದಿತ್ತು. ಈಗ ಅದು ಸಂಪೂರ್ಣ ಮುಚ್ಚಿಹೋಗಿದೆ. ಈ ಕೆರೆಯ ವಠಾರದ ಜನರು ಬಟ್ಟೆ ತೊಳೆಯಲು ಹಾಗೂ ಸ್ನಾನ ಮಾಡಲು ಹಲವು ವರ್ಷಗಳಿಂದ ಉಪಯೋಗಿಸುತ್ತಿದ್ದುದರಿಂದ ಈ ಕೆರೆಯಲ್ಲಿ ಮುಕ್ಕಾಲು ಭಾಗ ಹೂಳು ತುಂಬಿದೆ. ಮಳೆಗಾಲ ಪ್ರಾರಂಭವಾಗುವ ಸುಮಾರು ನಾಲ್ಕು ತಿಂಗಳ ಮೊದಲೇ ಕೆರೆ ಬತ್ತಿ ಹೋಗಿ, ಜಲಚರ ಜೀವಿಗಳು ಸತ್ತು ಅಸಹ್ಯ ದುರ್ಗಂಧಯುಕ್ತ ವಾತಾವರಣ ನಿರ್ಮಾಣವಾಗುತ್ತದೆ. ಬಸ್ರೂರಿನ ಬಹುತೇಕ ಎಲ್ಲ ಕೆರೆಗಳ ಅವಸ್ಥೆಯೂ ಹೀಗೆ ಆಗಿದೆ. ಸ್ಥಳೀಯ ಪಂಚಾಯತಿನವರು ಜನರ ಸಹಕಾರ ಪಡೆದು ಈ ಕೆರೆಗಳ ಹೂಳೆತ್ತಲು ಹಾಗೂ ದುರಸ್ತಿ ಮಾಡಲು ಒಂದು ಯೋಜನೆಯನ್ನು ತಯಾರಿಸಿ ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿಕೊಂಡಲ್ಲಿ ಬಸ್ರೂರಿನ ಕೆರೆಗಳು ಹೊಸ ಜೀವ ತಳೆಯಲು ಸಾಧ್ಯವಿದೆ.
      ಈ ಕೆರೆಯ ದಂಡೆಯ ಮೇಲೆ ಸುತ್ತಲೂ, ಕೆರೆಗೆ ಮುಖಮಾಡಿಕೊಂಡಿರುವ ಒತ್ತೊತ್ತಾಗಿರುವ ಮನೆಗಳ ಸಾಲು ಇದೆ. ಇದಕ್ಕೆ ಅಗ್ರಹಾರವೆನ್ನುತ್ತಾರೆ. ಕೆರೆಯ ಪಶ್ಚಿಮದ ದಂಡೆಯಲ್ಲಿ ಉಮಾಮಹೇಶ್ವರ ದೇವರ ಗುಡಿಯಿದೆ.

೨.ಹಲರ ಕೆರೆ: 
       ಬಂಟರು ಅಥವಾ ನಾಡವರಲ್ಲಿ ಹಲರು ಎಂಬ ಮನೆತನವೊಂದಿತ್ತು. ಶ್ರೀ ಮಹಾಲಿಂಗೇಶ್ವರ ದೇವರ ರಥೋತ್ಸವದ ಮರುದಿನ ನಡೆಯುವ ಅವಭೃತ ಸ್ನಾನ ಕಾರ್ಯಕ್ರಮಕ್ಕೆ ಈ ಕೆರೆಯಿಂದಲೇ ನೀರನ್ನು ತೆಗೆದುಕೊಂಡು ಹೋಗಿ ಓಕುಳಿ ಹೊಂಡಕ್ಕೆ ತುಂಬಿಸುತ್ತಾರೆ. 'ಓಕುಳಿ ಹೊಂಡ'ಕ್ಕೆ ಹಾರುವ ಮೊದಲು ಹಲರು ಊರಿನ ಏಳು ಕೇರಿಗಳಲ್ಲೂ ಮೆರವಣಿಗೆ ನಡೆಸುತ್ತಾರೆ. ಓಕುಳಿ ಹೊಂಡದ ಮೇಲೆ ಎತ್ತರದಲ್ಲಿ ತೂಗಾಡಿಸಿದ ಬಾಳೆಹಣ್ಣಿನ ಗೊನೆಯನ್ನು ಕಿತ್ತುಕೊಳ್ಳಲು ಹಲರು ಅಥವಾ ಬಂಟ ಯುವಕರ ಮೇಲಾಟ ನಡೆಯುತ್ತದೆ. ಈ ಕಾರ್ಯಕ್ರಮದಲ್ಲಿ ಬೇರಾವ ಜಾತಿಯವರೂ ಭಾಗವಹಿಸುವಂತಿಲ್ಲ. ಹಲರು ಅಥವಾ ಬಂಟರಿಗೆ ಮಾತ್ರ ಈ ಹಕ್ಕು. ಜನರ ಆಡುಮಾತಿನಲ್ಲಿ 'ಕೋಟೇಶ್ವರ ತೇರು', 'ಬಸ್ರೂರ ಓಕುಳಿ' ಪ್ರಸಿದ್ಧವೆನಿಸಿದೆ. ಹಲರು ತಮ್ಮ ಓಕುಳಿ ಆಟಕ್ಕೆ ಈ ಕೆರೆಯ ನೀರನ್ನೇ ಬಳಸುವುದರಿಂದ ಈ ಕೆರೆಗೆ ಹಲರ ಕೆರೆ ಎಂದು ಹೆಸರು.
       ಮಹಾಲಿಂಗೇಶ್ವರ ದೇವಸ್ಥಾನದ ಹೊರಪೌಳಿಯ ತೆಂಕುದಿಕ್ಕಿನ ಬಾಗಿಲಿಗೆ ಎದುರಾಗಿ ದಕ್ಷಿಣ ದಿಕ್ಕಿಗೆ ಸಾಗುವ ರಸ್ತೆಯ ಪಕ್ಕದಲ್ಲಿಯೇ ಈ ಕೆರೆಯಿದೆ. ಈ ರಸ್ತೆ ಸಾರ್ವಜನಿಕ ಸ್ಮಶಾನದ ತನಕ ಸಾಗುತ್ತದೆ. ಈ ರಸ್ತೆಯಲ್ಲಿಯೂ 5 ದೇವಸ್ಥಾನಗಳನ್ನು ಸಂದರ್ಶಿಸಬಹುದು. ತೆಂಕು ಬಾಗಿಲಿನ ಹತ್ತಿರದಲ್ಲಿಯೇ ಬಲಬದಿಯಲ್ಲಿ ಶ್ರೀ ರಾಮಚಂದ್ರ ದೇವಸ್ಥಾನ, ಹಾಗೆಯೇ ಹತ್ತು ಹೆಜ್ಜೆ ಮುಂದೆ ಸಾಗಿದರೆ ವೀರಭದ್ರನ ಗುಡಿ, ಇನ್ನೂ ಹತ್ತಿಪ್ಪತ್ತು ಹೆಜ್ಜೆ ಮುಂದೆ ಸಾಗಿದರೆ ಶ್ರೀ ಲಕ್ಷ್ಮೀನಾರಾಯಣ ದೇವರ ಗುಡಿ, ಇನ್ನೂ ಹತ್ತಿಪ್ಪತ್ತು ಹೆಜ್ಜೆಯಲ್ಲಿ ಗೌಡ ಸಾರಸ್ವತರ ಕುಲದೇವಸ್ಥಾನ ಶ್ರೀ ಲಕ್ಷ್ಮಿ ದಾಮೋದರ, ಇನ್ನೂ ಹತ್ತಿಪ್ಪತ್ತು ಹೆಜ್ಜೆಯಲ್ಲಿ ಭತ್ತದ ಗದ್ದೆಗಳ ಮಧ್ಯೆ ಜಟ್ಟಿಗ ರಾಯರ ಗುಡಿ ಹೀಗೆ ಐದು ದೇವಸ್ಥಾನಗಳು. ಎಲ್ಲವೂ ಪೂರ್ವಾಭಿಮುಖವಾಗಿಯೇ ಪ್ರತಿಷ್ಟಾಪಿಸಲ್ಪಟ್ಟಿವೆ.

೩.ಮೂಡುಕೇರಿ ಕೆರೆ:
       ಶ್ರೀ ಆದಿನಾಥೇಶ್ವರ ದೇವಸ್ಥಾನದ ಎದುರಿನಲ್ಲಿಯೇ ಬಹಳ ವಿಶಾಲವಾದ ಹಾಗೂ ಹೆಚ್ಚು ಜೀರ್ಣಾವಸ್ಥೆಯಲ್ಲಿರುವ ಕೆರೆಯೇ ಮೂಡುಕೇರಿ ಕೆರೆ. ಇದಕ್ಕೆ ಅಗಸ್ತ್ಯ ತೀರ್ಥವೆಂಬ ಹೆಸರು ಇದೆ. ಈ ಕೆರೆಯ ಸುತ್ತಲೂ ಇನ್ನೊಂದು ಅಗ್ರಹಾರವಿದೆ. ಅಗ್ರಹಾರದಲ್ಲಿರುವ ಒಂದು ಮನೆಯೇ ಈಶ್ವರೀಯ ಕೇಂದ್ರ.

Basrur

       ಈ ಅಗ್ರಹಾರದಲ್ಲಿ ಹಿಂದೆ ಸಾಕಷ್ಟು ಮಠಗಳಿದ್ದು ಈಗಲೂ ಇಲ್ಲಿನ ಬ್ರಾಹ್ಮಣರ ಮನೆಯಲ್ಲಿ ಅಪರೂಪದ ದೇವರ ಮೂರ್ತಿಗಳಿವೆ. ವಾರಾಹಿ, ಅನ್ನಪೂರ್ಣೇಶ್ವರಿ, ಗಣೇಶ, ಶಿವಲಿಂಗ, ದುರ್ಗಿ, ಕೃಷ್ಣ, ವಿಷ್ಣು, ಹೀಗೆ ಅನೇಕ ಮೂರ್ತಿಗಳನ್ನು ಇಲ್ಲಿ ಕಾಣಬಹುದು.

೪.ಪಳ್ಳಿಕೆರೆ:
      ಕೆರೆ ಚಿಕ್ಕದಾದರೂ ಚೊಕ್ಕವಾಗಿದೆ. ಇಲ್ಲೊಬ್ಬ ಮಹನೀಯರ ತೆಂಗಿನ ತೋಟದೊಳಗೆ ಈ ಕೆರೆ ಇರುವುದರಿಂದ ಬಹುಶಃ ಸುಸ್ಥಿತಿಯಲ್ಲಿ ಉಳಿದಿರಬಹುದು. ಹತ್ತಿರದಲ್ಲಿಯೇ ಮುಸ್ಲಿಮರ ಪ್ರಾರ್ಥನಾ ಮಂದಿರವೊಂದು ಇದ್ದುದರಿಂದ ಬಹುಶಃ ಈ ಕೆರೆಗೆ ಪಲ್ಳಿಕೆರೆಯೆಂಬ ಹೆಸರು ಬಂದಿರಬಹುದು.

೫.ಮಠದ ಕೆರೆ:
      ಮೂಡುಕೇರಿಯ ರಾಮಚಂದ್ರ ದೇವಸ್ಥಾನ ಹಾಗೂ ತಿರುಮಲ ವೆಂಕಟರಮಣ ದೇವಸ್ಥಾನಗಳ ಹಿಂಬದಿಯಲ್ಲೇ ಈ ಕೆರೆ ಇದೆ. ಇದು ಚಿಕ್ಕದಾದರೂ ಸುಂದರವಾಗಿದೆ. ಹೂಳೆತ್ತಿ ದುರಸ್ತಿಗೊಳಿಸಿದರೆ ಒಳ್ಳೆಯ ಸುಸ್ಥಿತಿಗೆ ಬಂದೀತು. ಈ ಕೆರೆಯ ದಂಡೆಯಲ್ಲಿರುವ ವಿಶಾಲವಾದ ಜಾಗದಲ್ಲಿ ಗೌಡ ಸಾರಸ್ವತರ ವನಭೋಜನ ನಡೆಯುತ್ತದೆ. ಈ ಹಾಡಿಗೆ ಮಠದ ಹಾಡಿ ಎಂಬ ಹೆಸರಿದೆ.

೬.ಗದ್ದೆಮನೆ ಕೆರೆ:
       ಈ ಕೆರೆಯ ಮುಂದೆ ಕೋಟಿ ಚೆನ್ನಯ್ಯ ಗರಡಿಯೂ, ಹಿಂದೆ ದೊಟ್ಟೆಕಾಲು ದೈವದ ಗುಡಿಯೂ ಇದೆ. ಕೆರೆ ಬಹಳ ಹಿಂದಿನದ್ದು. ಕಟ್ಟಿದ ಕಲ್ಲುಗಳು ಉದುರಿ ಬಿದ್ದಿವೆ. ಕಾಯಕಲ್ಪ ನಡೆಯಬೇಕಾಗಿದೆ.

೭.ಚಿಲುಮೆ ಕೆರೆ:
        ಬಸ್ರೂರಿನಲ್ಲಿ ವೀರಶೈವರೂ ಇದ್ದರೂ ಎಂಬುದಕ್ಕೆ ಈ ಕೆರೆ ಸಾಕ್ಷಿ ಹೇಳುತ್ತದೆ. ಬಹಳ ಹಿಂದೆ ಇಲ್ಲಿ ವೀರಶೈವರ ಮತ ಹಾಗೂ ಗುಡಿ ಇದ್ದಿತ್ತಂತೆ. ಅದರ ಸಮೀಪವಿರುವ ಕೆರೆಯೇ ಚಿಲುಮೆ ಕೆರೆ. ಹಿಂದೆ ಗುಡಿಯಿದ್ದ ಜಾಗದಲ್ಲಿ ಈಗಲೂ ಪೂಜೆ ನಡೆಯುತ್ತದೆ. ಯಡಾಡಿ ಮತ್ಯಾಡಿಯ ಒಂದು ವೀರಶೈವ ಕುಟುಂಬ, ವರ್ಷಕ್ಕೊಮ್ಮೆ ಇಲ್ಲಿಗೆ ಬಂದು ಪೂಜೆ ಸಲ್ಲಿಸಿ ಹೋಗುತ್ತಿದ್ದಾರಂತೆ. ಬಸ್ರೂರಿನ ರೋಮನ್ ಕ್ಯಾಥೋಲಿಕರ ಸೈಂಟ್ ಮೇರಿ ಇಗರ್ಜಿಯ ನೈರುತ್ಯ ದಿಕ್ಕಿನಲ್ಲಿ ಚಿಲುಮೆ ಮಠ ಇದ್ದ ಜಾಗವನ್ನು ಕಾಣಬಹುದು.


ಸಂಗ್ರಹ: ಶಿವರಾಜ್ ಶೆಟ್ಟಿ.
ಆಧಾರ: ಹೆಸರಾದ ಪಟ್ಟಣ ಬಸ್ರೂರು ಒಂದು ಅಧ್ಯಯನ.

Theme images by sndr. Powered by Blogger.