ಬಸ್ರೂರು ಗುಪ್ಪೆ ಹಾಡಿ ಸ್ವಾಮಿಯ ಐತಿಹ್ಯ
ಇತಿಹಾಸ ಪ್ರಸಿದ್ಧವಾದ ಬಸ್ರೂರಿನ ಗುಪ್ಪೆ ಹಾಡಿ ವಿಜಯನಗರ ಕಾಲಕ್ಕಿಂತಲೂ ಬಹಳ ಹಿಂದೆಯೇ ಒಂದು ಪ್ರಮುಖ ಧಾರ್ಮಿಕ ಕೇಂದ್ರವಾಗಿತ್ತು ಎಂಬುದನ್ನು ೧೫೩೧ರ ಶಾಸನವೊಂದು ತಿಳಿಸುತ್ತದೆ. ಅಲ್ಲಿ ಗೋಪಿನಾಥ ದೇವರ ದೇವಾಲಯವಿತ್ತೆಂಬುದನ್ನೂ, ಸದಾನಂದ ಒಡೆಯರ ಮಠ ಇದ್ದ ಬಗ್ಗೆಯೂ ಶಾಸನ ದೊರೆತಿತ್ತು. ದೇವು ಸೆಟ್ಟಿ ಗುಪ್ಪೆಯ ಜೀರ್ಣೋದ್ಧಾರಕ್ಕೆ 25 ವರಹಗದ್ಯಾಣಗಳನ್ನು ನೀಡಿದ್ದನೆಂದು ದೊಡ್ಡಕೆರೆ ಕಟ್ಟೆಯ ಶಾಸನ ತಿಳಿಸುತ್ತದೆ.
ಗುಪ್ಪೆಹಾಡಿಯ ಮಠ ಈಗ ಅಳಿದುಳಿದ ಸ್ಥಿತಿಯಲ್ಲಿದ್ದು, ಈ ಮಠ ಹಾಗೂ ಗುಪ್ಪೆ ಹಾಡಿ ಸ್ವಾಮಿಯ ಬಗೆಗಿನ ಒಂದು ಐತಿಹ್ಯ:
ಅಳಿದುಳಿದ ಗುಪ್ಪೆ ಸದಾನಂದ ಮಠ |
ಬಹಳ ಹಿಂದೆ ಗುಪ್ಪೆ ಹಾಡಿಯಲ್ಲಿ ಸದಾನಂದ ಸ್ವಾಮಿಗಳ ಮಠವಿತ್ತು. ಪ್ರಸಿದ್ಧವಾದ ಈ ಮಠಕ್ಕೆ ನೂರಾರು ಮಂದಿ ಭಕ್ತರು ಬರುತ್ತಿದ್ದರು. ಈ ಸ್ವಾಮಿಗೆ ಪ್ರತಿದಿನ ಹಾಲು ತಂದು ಕೊಡುವಾಕೆಗೆ ಮಠದ ಸ್ವತ್ತುಗಳನ್ನು ನೋಡಿ ಆಸೆಯಾಯಿತು. ಹೇಗಾದರೂ ಅದನ್ನೆಲ್ಲ ಒಳಹಾಕಬೇಕೆಂದುಕೊಂಡವಳು ಒಂದು ದಿನ ಮಠದ ಸ್ವಾಮಿಗಳಿಗೆ ಹಾಲಿಗೆ ವಿಷ ಬೆರೆಸಿ ಕೊಟ್ಟಳು.
ದಿವ್ಯ ಜ್ಞಾನಿಗಳಾದ ಸ್ವಾಮಿಗಳಿಗೆ ಇದು ಗೊತ್ತಾಗಿ ಹಾಲನ್ನು ಅವಳೆದುರೇ ತಾವು ಸಾಕಿದ ಪ್ರೀತಿಯ ಬೆಕ್ಕಿಗೆ ಎರೆದರು. ವಿಷ ಮಿಶ್ರಿತ ಹಾಲು ಕುಡಿದ ಬೆಕ್ಕು ಅಲ್ಲಿ ಸತ್ತುಬಿದ್ದಾಗ, ಹಾಲಿನಾಕೆ ಭಯದಿಂದ ತತ್ತರಿಸಿ ಸ್ವಾಮಿಗಳಲ್ಲಿ ತನ್ನ ತಪ್ಪನ್ನು ಒಪ್ಪಿಕೊಂಡಳು. ಕುಪಿತರಾದ ಸ್ವಾಮಿಗಳು ಹಾಲಿನ ಚೆಂಬು ಹಿಡಿದ ಶಿಲಾಬಾಲಿಕೆ ಆಗುವಂತೆ ಆಕೆಯನ್ನು ಶಪಿಸಿದರು. ಹಾಲಿನವಳ ವರ್ತನೆಯಿಂದ ಬೇಸರಗೊಂಡ ಸ್ವಾಮಿಗಳು ಗುಹೆಯೊಳಗೆ ನಡೆದರು.
ಭಕ್ತರುಗಳು ಯಾವಾಗ ಮರಳಿ ಬರುವರೆಂದು ಬೇಡಿಕೊಂಡಾಗ "ಕಲ್ಲು ಕೋಳಿ ಕೂಗಿದಾಗ, ಕೆಸುವಿನ ಎಲೆ ಕೂಡಿದಾಗ, ಮಂಡಿಬಾಗಿಲು ಹೊಳೆ ಬತ್ತಿದಾಗ" ಬರುವೆನೆಂದು ಅಂತರ್ಧಾನರಾದರು.
ತಂಬಿಗೆ ಹಿಡಿದು ನಿಂತ ಶಿಲಾಬಾಲಿಕೆಯ ಕಲ್ಲೊಂದು ಗುಪ್ಪೆ ಹಾಡಿಯಲ್ಲಿ ಸಿಕ್ಕಿದ್ದನ್ನು ಈ ಕತೆಗೆ ಹಿನ್ನೆಲೆಯಾಗಿ ಸ್ಮರಿಸಿಕೊಳ್ಳಬಹುದು.
ಅಳಿದುಳಿದ ಗುಪ್ಪೆ ಸದಾನಂದ ಮಠ |
ಅಳಿದುಳಿದ ಗುಪ್ಪೆ ಸದಾನಂದ ಮಠ |
(ಈ ಲೇಖನದ ಕೆಲವು ಭಾಗಗಳನ್ನು 'ಹೆಸರಾದ ಪಟ್ಟಣ ಬಸ್ರೂರು - ಒಂದು ಅಧ್ಯಯನ' ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ.)
ಸಂಗ್ರಹ ಮತ್ತು ಚಿತ್ರಗಳು: ಶಿವರಾಜ್ ಶೆಟ್ಟಿ.