ಬಸ್ರೂರಿನ ಇತಿಹಾಸ -ಭಾಗ 1
ಬಸ್ರೂರಿನ ಇತಿಹಾಸ -ಭಾಗ 1
ಕರ್ನಾಟಕದ ಕರಾವಳಿಯ ಪ್ರಸಿದ್ಧ ಐತಿಹಾಸಿಕ ಕೇಂದ್ರಗಳ ಪೈಕಿ ಬಹಳ ಮಹತ್ವವನ್ನು ಪಡೆದ ಪಟ್ಟಣ ಬಸರೂರು. 'ವಸು ಚಕ್ರವರ್ತಿ' ಆಳಿದ್ದರಿಂದ 'ವಸುಪುರ' ಎಂದು ಕರೆಯಲ್ಪಟ್ಟು ಮುಂದೆ ಇದೆ ಹೆಸರು 'ಬಸರೂರು' ಎಂದಾಯಿತು ಎಂಬ ಜನಜನಿತವಾದ ನಂಬಿಕೆಯೊಂದು ಇದೆಯಾದರೂ ಇದಕ್ಕೆ ಯಾವ ಆಧಾರವೂ ಇಲ್ಲ. ಇಲ್ಲಿನ ನೆಲವು ನೀರಿನ ಒಸರಿನಿಂದ ಕೂಡಿದ್ದರಿಂದ 'ಒಸರೂರು' ಎಂದು ಕರೆಯಲ್ಪಟ್ಟು ನಂತರ ಈ ಹೆರರು ಬಸರೂರು ಎಂದಾಯಿತು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಈ ಹೆಸರು ಸಸ್ಯವಾಚಕವಿರಬೇಕೆಂದೂ ಸಂಶೋಧಕರು ಬರೆದಿದ್ದಿದೆ. 'ಬಸುರೆ ಪುರ' ಎಂದು ಹನ್ನೆರಡನೇ ಶತಮಾನದಲ್ಲಿ ಶಾಸನದಲ್ಲಿ ಬಳಸಿರುವ ಈ ಹೆಸರಿನ ಮೊದಲ ಭಾಗ ಇದೆ ಹೆಸರಿನ ಸಸ್ಯವನ್ನು ಸೂಚಿಸುವಂತಿದೆ, ಬಸ್ರೂರು 'ಬಸರಿ' ಗಿಡದಿಂದ ಬಂದಿರುವ ಸಾಧ್ಯತೆ ಇದೆ. ಬಸರಿ ಬೇರು, ಬಸರಿ ಕಟ್ಟೆ, ಬಸರಿತ್ತಡ್ಕ ಇರುವಂತೆ 'ಬಸರಿ ಊರು' ಕ್ರಮೇಣ ಬಸರೂರು ನಂತರ ಬಸ್ರೂರು ಆಗಿರಬಹುದು.
ಬಸ್ರೂರಿನ ಪ್ರಾಚೀನತೆಯನ್ನು ಹುಡುಕುತ್ತಾ ಹೋದರೆ ನಮ್ಮನ್ನು ಪ್ರಾಗಿತಿಹಾಸ ಕಾಲದವರೆಗೆ ತಲುಪಿಸುವ ಅವಶೇಷಗಳು ಬಸ್ರೂರಿನಲ್ಲಿ ಸಿಗುತ್ತವೆ. ಇಲ್ಲಿ ಬಂಗ್ಲೆ ಗುಡ್ಡೆಯ ಬದಿಯಲ್ಲಿ ಬಂಡೆಕಲ್ಲುಗಳ ಮೇಲೆ ಕಂಡುಬರುವ ಚನ್ನೆಮಣಿಯಂತಹ ರಚನೆಗಳು ಬೇರೆಡೆಯೂ ಪ್ರಾಗೈತಿಹಾಸಿಕ ನಿವೇಶನದಲ್ಲಿ ದೊರೆತಿವೆ. ಸಮೀಪದಲ್ಲೇ ಬಂಡೆಯಲ್ಲಿ ಕೆತ್ತಿರುವ ಕುದುರೆಯ ಮೇಲೆ ಬಲಗೈಯಲ್ಲಿ ಆಯುಧ ಹಿಡಿದು ನಿಂತಿರುವ ವ್ಯಕ್ತಿಯ ಚಿತ್ರ, ಸೂರ್ಯ ಹಾಗೂ ತ್ರಿಶೂಲವನ್ನು ಹೋಲುವ ಆದರೆ ಮಧ್ಯದಲ್ಲಿ ಕಣ್ಣುಗಳಂತಿರುವ ಆಳವಾದ ಚುಕ್ಕೆಗಳಿರುವ ರಚನೆ(ಕೆತ್ತನೆಗಳು ಆಸ್ಪಷ್ಟವಾಗಿವೆ) ಹಾಗೂ ಇತರ ಕೆತ್ತನೆಗಳು ಬಸ್ರೂರಿನ ಪ್ರಾಚೀನತೆಯತ್ತ ಬೊಟ್ಟು ಮಾಡುವುದರೊಂದಿಗೆ ಪ್ರಾಯಶಃ ಪ್ರಾಗಿತಿಹಾಸಕಾಲ ಹಾಗೂ ಇತಿಹಾಸದ ಆರಂಭಕಾಲದಲ್ಲಿ ಇಲ್ಲಿ ನೆಲೆಸಿದ್ದ ಜನ ಕಲೆಯ ಪ್ರಗತಿಗೆ ಬುನಾದಿ ಹಾಕಿಕೊಟ್ಟರೆಂಬುದನ್ನು ನೆನಪಿಸುವಂತಿದೆ.
ಕ್ರಿಸ್ತಶಕದ ಆದಿಯಿಂದಲೇ ಪಾಶ್ಚಾತ್ಯರಿಗೆ ವ್ಯಾಪಾರ ಕೇಂದ್ರವಾಗಿ ಪರಿಚಿತವಾಗಿದ್ದ ಬಸ್ರೂರು ಮುಂದಿನ ಕೆಲವು ಶತಮಾನಗಳಲ್ಲಿ ರಾಜಕೀಯ ಮಹತ್ವವನ್ನು ಗಳಿಸಿತು. ಸಾಂಸ್ಕ್ರತಿಕ ಪ್ರಗತಿಯನ್ನು ಕಂಡಿತು.
ಬಸ್ರೂರಿನಲ್ಲಿ ಆಳುವ ಅರಸರ ಆಳ್ವಿಕೆಯನ್ನು ಪ್ರಸ್ತಾಪಿಸುವ ಪ್ರಥಮ ಶಾಸನ ದೊರೆಯುವುದು 12ನೇ ಶತಮಾನದಲ್ಲಿ. ಆಳುಪ ಅರಸು ಕವಿಯಾಳುಪೇಂದ್ರ ಆಳುತ್ತಿದ್ದಾಗ(1154ರಲ್ಲಿ) ಮೌನಯೋಗಿಯು ನಖರೇಶ್ವರ ದೇವರ ನೈವೇದ್ಯದ ವೆಚ್ಚಕ್ಕಾಗಿ ಚಿನ್ನದ ನಾಣ್ಯ(ಪಾಂಡ್ಯಗದ್ಯಾಣ)ಗಳನ್ನು ದಾನ ಮಾಡಿದ್ದನ್ನು ತಿಳಿಸುವ ಈ ಶಾಸನವು, ಬಸ್ರೂರು ಆ ಸಮಯಕ್ಕಾಗಲೇ ಹೊಸ ರೂಪ ಪಡೆದದ್ದನ್ನು ಸೂಚಿಸುತ್ತದೆ. ಹೊಸ ಪಟ್ಟಣವೆಂದು ಕರೆಸಿಕೊಂಡ ಬಸ್ರೂರಿನಲ್ಲಿ ಆ ಸಮಯಕ್ಕೆ ಕೇರಿಗಳ ವಿಂಗಡಣೆ ಮತ್ತು ಹೊಸ ಸ್ಥಳೀಯ ಆಡಳಿತ ವ್ಯವಸ್ಥೆ ಜಾರಿಗೆ ಬಂದಿರಬಹುದು, ಪಟ್ಟಣದ ವಿಸ್ತರಣೆಯೂ ಆಗಿರಬಹುದು.
ನಂತರ ಆಳಿದ ಆಳುಪ ಅರಸು ಕುಲಶೇಖರನ ಶಾಸನವು ಬಸ್ರೂರಿನಲ್ಲಿ ದೊರೆತಿದೆ. ಇಲ್ಲಿನ ಮಹಾಲಿಂಗೇಶ್ವರ ದೇವಾಲಯದಲ್ಲಿ ಇರುವ ಈ ಶಾಸನ ಕ್ರಿ. ಶ. 1176ರಲ್ಲಿ ರಾಜಪ್ಪ ಸೆಟ್ಟಿಯ ಮಗಳು ಚಂಡಬ್ಬೆ ನಖರೇಶ್ವರ ದೇವರಿಗೆ ನೀಡಿದ ದತ್ತಿ ಇಲ್ಲಿ ದಾಖಲಿಸಲ್ಪಟ್ಟಿದೆ. ಬಸ್ರೂರಿನಲ್ಲಿ ಹೊಸತಾಗಿ ದೊರೆತ ಶಾಸನಗಳ ಪೈಕಿ ಮೂಡುಕೇರಿ ಆದಿನಾಥೇಶ್ವರ ದೇವಸ್ಥಾನದ ಕುಲಶೇಖರನ ಶಾಸನವೂ ಒಂದು. ಅವನ ಆಳ್ವಿಕೆಯ ಕಾಲದಲ್ಲಿ ಬರೆಸಲಾದ ಈ ದತ್ತಿ ಶಾಸನ ಬಹಳಷ್ಟು ಸವೆದು ಹೋಗಿರುವುದರಿಂದ ದತ್ತಿಯ ವಿವರಗಳು ನಷ್ಟವಾಗಿವೆ. ಈ ಮೇಲಿನ ಆಳುಪ ಶಾಸನಗಳಿಂದ ತಿಳಿದು ಬರುವ ವಿಚಾರಗಳೆಂದರೆ 12ನೇ ಶತಮಾನದ ಮೊದಲೇ ಬಸ್ರೂರು ಮಹತ್ವದ ವ್ಯಾಪಾರ ಕೇಂದ್ರವಾಗಿತ್ತು. ಮುಖ್ಯವಾದ ವ್ಯಾಪಾರಿ ಸಂಘಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಾ ಇಲ್ಲಿನ ಆರ್ಥಿಕ ಚಟುವಟಿಕೆಯ ಮೇಲೆ ನಿಯಂತ್ರಣ ಹೊಂದಿದ್ದುದಷ್ಟೆ ಅಲ್ಲ, ನಖರ ವ್ಯಾಪಾರಗಳ ಸಂಘ ನಖರೇಶ್ವರ ದೇವಾಲಯ ನಿರ್ಮಿಸುವುದರೊಂದಿಗೆ ಧಾರ್ಮಿಕ ಕ್ಷೇತ್ರದಲ್ಲೂ ಹಾಗೂ ಆಡಳಿತ ಕ್ಷೇತ್ರದಲ್ಲೂ ತನ್ನ ಪ್ರಭಾವ ಹೊಂದಿತ್ತು. ಮೂಡುಕೇರಿಯ ಆದಿನಾಥೇಶ್ವರ ಆಗ ಬಸ್ರೂರಿನ ಇನ್ನೊಂದು ಪ್ರಮುಖ ದೇವಾಲಯವಾಗಿತ್ತು ಹಾಗೂ ದಾನದತ್ತಿಗಳನ್ನು ಪಡೆದಿತ್ತು. ಬಸ್ರೂರು ಹೊಯ್ಸಳರ ಆಳ್ವಿಕೆಗೆ ಒಳಪಟ್ಟಿದ್ದರೂ ಇಲ್ಲಿ ಯಾವುದೇ ಹೊಯ್ಸಳ ಶಾಸನ ದೊರೆತಿಲ್ಲ.
ಬಸ್ರೂರು ಸರ್ವತೋಮುಖ ಅಭಿವ್ರದ್ಧಿ ಕಂಡದ್ದು ವಿಜಯನಗರದ ಆಡಳಿತ ಕಾಲದಲ್ಲಿ. ವಿಜಯನಗರದ ಸಾಮ್ರಾಟರಿಂದ ನೇಮಿಸಲ್ಪಡುತ್ತಿದ್ದ ಬಾರ್ಕೂರು ರಾಜ್ಯದ ರಾಜ್ಯಪಾಲರುಗಳ ಆಡಳಿತಕ್ಕೆ ಬಸ್ರೂರು ಒಳಪಟ್ಟಿದ್ದರೂ ಸ್ಥಳೀಯ ಆಡಳಿತ ಹೆಚ್ಚಿನ ಮಹತ್ವ ಪಡೆದದ್ದು ಈ ಕಾಲದಲ್ಲೇ. ವಿಜಯನಗರದ ದೊರೆ ಇಮ್ಮಡಿ ಹರಿಹರನ ಕಾಲದಿಂದ ಇಲ್ಲಿ ದೊರೆಯುವ ವಿಜಯನಗರ ಶಾಸನಗಳು ಇದನ್ನು ಪುಷ್ಟೀಕರಿಸುತ್ತವೆ.
ಬಸ್ರೂರು ಮಹಾಲಿಂಗೇಶ್ವರ ದೇವಾಲಯದಲ್ಲಿರುವ ಕ್ರಿ. ಶ. 1400 ಆಗಸ್ಟ್ 11ರಂದು ಬರೆಸಿದ ಶಾಸನವು ಆಗ ಬಸ್ರೂರು ಬಾರ್ಕೂರಿನ ರಾಜ್ಯಪಾಲ ಬಸವಣ್ಣ ಒಡೆಯನ ಆಡಳಿತದಲ್ಲಿತ್ತು ಎಂಬುದನ್ನು ತಿಳಿಸುವುದಲ್ಲದೆ ಬಸ್ರೂರು ಮತ್ತು ಶೃಂಗೇರಿ ಮಠದ ಸಂಬಂಧವನ್ನೂ ಹೊರಗೆಡಹುತ್ತದೆ. ಆಗ ಸೆಟ್ಟಿಕಾರರ ವ್ಯಾಪಾರಿ ಸಂಘವು ಪ್ರಬಲವಾಗಿತ್ತು. ಅದರ ಸದಸ್ಯ ಮಾದಣ್ಣ ಸೆಟ್ಟಿಯು ಶೃಂಗೇರಿ ಮಠದ ವಿದ್ವಾನ್ ಚಕ್ರವರ್ತಿ ಉಪಾಧ್ಯಾಯರ ಮಗ ಸಿಂಗಣ್ಣ ಅಯ್ಯನಿಗೆ ನೀಡಿದ ದತ್ತಿಯ ವಿವರಗಳನ್ನು ಶಾಸನ ಒಳಗೊಂಡಿದೆ. ಸ್ಥಳೀಯ ಆಡಳಿತದಲ್ಲಿ ಪ್ರತಿನಿಧಿಗಳಾಗಿ ಭಾಗವಹಿಸುತ್ತಿದ್ದ ಹಲರ ಮಹತ್ವವೂ ಈ ಶಾಸನದಿಂದ ತಿಳಿಯುತ್ತದೆ. ಹೀಗೆ ಪಡೆದ ದತ್ತಿಯಿಂದ ಸಿಂಗಣ್ಣ ಅಯ್ಯನು ನಖರೇಶ್ವರ ದೇವರ ಮುಂದಿರುವ ನಂದಿಕೇಶ್ವರರ ನೈವೇದ್ಯದ ವ್ಯವಸ್ಥೆ ಮಾಡಬೇಕೆಂಬ ಶರತ್ತೂ ಶಾಸನದಲ್ಲಿದೆ. ಉಳ್ಳೂರ ದೇವರಿಗೆ ದತ್ತಿ ಬಿಟ್ಟಿರುವುದೂ ಮತ್ತು ಕೊನೆಯಲ್ಲಿ ಸುಬ್ರಹ್ಮಣ್ಯ ದೇವರ ಪ್ರಸ್ತಾಪ ಧಾರ್ಮಿಕ ಇತಿಹಾಸಕ್ಕೆ ಉಪಯುಕ್ತ ಮಾಹಿತಿಗಳಾಗಿವೆ. ಆಗ ಸೆಟ್ಟಿಕಾರರು ಭೂ ಒಡೆತನ ಹೊಂದಿದ್ದುದರಿಂದ ಜನನಿಗಳೂ ಆಗಿ ಕಾರ್ಯ ನಿರ್ವಹಿಸುತ್ತಿದ್ದುದನ್ನೂ ಈ ಶಾಸನ ಸೂಚಿಸುತ್ತದೆ. ಜನನಿಗೆ ಸಲ್ಲುವ ಹಣ(ಉಪಚಾರ)ದಲ್ಲಿ ಒಂದಂಶ ನೂಲಹಬ್ಬಕ್ಕಾಗಿ ದೇವರಿಗೆ ನೀಡಬೇಕೆಂಬ ಉಲ್ಲೇಖ ಆಗ ನೂಲಹಬ್ಬಕ್ಕಾಗಿ ದೇವರಿಗೆ ನೀಡಬೇಕೆಂಬ ಉಲ್ಲೇಖ ಆಗ ನೂಲಹಬ್ಬಕ್ಕಿದ್ದ ಮಹತ್ವವನ್ನೂ ತಿಳಿಸುತ್ತದೆ.
ಬಾರ್ಕೂರಿನ ರಾಜ್ಯಪಾಲ ಬಸವಣ್ಣ ಒಡೆಯನ ಆಳ್ವಿಕೆಯು 1401ರ ಇನ್ನೊಂದು ಶಾಸನದಿಂದ ತಿಳಿಯುತ್ತದೆ. ಆಗ ಭೂ ಒಡೆತನ ಹೊಂದಿದ್ದ ಪ್ರತಿಷ್ಟಿತ ವ್ಯಕ್ತಿ ಪಡುವಕೇರಿಯ ತುಳುವಕ್ಕ ಹೆಗ್ಗಡತಿ ತಾನು ಮಾಡಿಸಿದ ಧರ್ಮಛತ್ರದ ವೆಚ್ಚಕ್ಕೆ ಬೇರೆ ಬೇರೆ ಕಡೆ ಅವಳ ಭೂಮಿಯಿಂದ ಬರುವ ಆದಾಯವನ್ನು ದತ್ತಿ ನೀಡಿದ್ದಳು. ತುಳುವೇಶ್ವರ ದೇವರಿಗೆ ಮತ್ತು ಮುಳಲದೇವಿಗೆ ನೀಡಿದ್ದ ಇತರ ದತ್ತಿಗಳನ್ನು ಈ ಶಾಸನ ದಾಖಲಿಸುತ್ತದೆ. ಆಗ ಸಮಾಜದಲ್ಲಿ ಪ್ರಚಲಿತವಿದ್ದ ಬಳಿಗಳನ್ನು ಪ್ರಸ್ತಾಪಿಸುವ ಈ ಶಾಸನದಲ್ಲಿ ಮುಖ್ಯವಾಗಿ ಗಮನಿಸಬೇಕಾದದ್ದು ಬಳಗಾರ ಬಳಿ, ಆರಿಯ ಬಳಿ, ತೊಳಹರ ಬಳಿ ಮತ್ತು ಗೇಜರಡೆಯ ಬಳಿ. ಸ್ತ್ರೀಯು ಭೂ ಒಡೆತನ ಹೊಂದಿರುವುದು, ಗೇಣಿ ವ್ಯವಸ್ಥೆ, ತೆರಿಗೆ, ನಾಟ್ಯ ಕಾಟಿ ಗದ್ಯಾಣದ ಉಲ್ಲೇಖ ಬಸ್ರೂರಿನ ಆರ್ಥಿಕ ಇತಿಹಾಸದ ಮೇಲೆ ಬೆಳಕು ಬೀರುವ ಅಂಶಗಳು.
ಕ್ರಿ. ಶ. 1431ರಲ್ಲಿ ವಿಜಯನಗರದ ದೊರೆ ಇಮ್ಮಡಿ ದೇವರಾಯನ ಆಳ್ವಿಕೆಯಲ್ಲಿ ಬಾರ್ಕೂರಿನ ರಾಜ್ಯಪಾಲ ಚಂಡರಸ ಒಡೆಯ ಬಸ್ರೂರಿನ ಮೇಲೆ ಅಧಿಕಾರ ಹೊಂದಿದ್ದ ಬಗ್ಗೆ ತಿಳಿಸುವ ಶಾಸನವೊಂದನ್ನು ಆದಿನಾಥೇಶ್ವರ ದೇವಸ್ಥಾನದಲ್ಲಿ ಹಲವು ವರ್ಷಗಳ ಹಿಂದೆ ಪ್ರತಿ ಮಾಡಿ ಅಭ್ಯಸಿಸಿದ್ದು, ಇದೊಂದು ದತ್ತಿ ಶಾಸನವಾಗಿದೆ. ಬಸ್ರೂರಿನ ಮೂಡುಕೇರಿಯ ಹಲರು, ಸೆಟ್ಟಿಕಾರರು ಹಾಗೂ ಆರಿಯ ಬಳಿಯವರು ನೀಡಿದ ದತ್ತಿಯನ್ನು ಈ ಶಾಸನ ದಾಖಲಿಸುತ್ತದೆ. ದತ್ತಿ ನೀಡಿದ ಭೂಮಿಯ ಗಡಿಗಳನ್ನು ಹೇಳುವಾಗ ಸೇನಾಭೋವನ ಭೂಮಿ, ಹೊಳೆಯ ಮತ್ತು ಕೋಟೆಯ ಪ್ರಸ್ತಾಪ ಕಂಡುಬರುತ್ತದೆ.
ಇಮ್ಮಡಿ ದೇವರಾಯನು ವಿಜಯನಗರದಲ್ಲಿ ಆಳುತ್ತಿದ್ದಾಗ ಬಾರ್ಕೂರು ರಾಜ್ಯದ ರಾಜ್ಯಪಾಲ ಚಂಡರಸ ಒಡೆಯನು 1942ರಲ್ಲಿ ಬಸ್ರೂರಿನ ಮೇಲೆ ಅಧಿಕಾರ ಹೊಂದಿದ್ದಾಗ ಕೊಟಿಯಣ್ಣ ಸೆಟ್ಟಿ ಎಂಬವನು ಪಡುವ ಕೇರಿಯ ಮಹಾದೇವರಿಗೆ ಭೂಮಿಯನ್ನು ದತ್ತಿಯಾಗಿ ನೀಡಿದ. ರುದ್ರಪೂಜೆಯಲ್ಲದೆ ಇಲ್ಲಿ ಉಲ್ಲೇಖಿಸಲ್ಪಟ್ಟಿರುವ ದೀಪಾವಳಿ ಹಬ್ಬದ ಸಮಯ ರಂಗಪೂಜೆ ಮತ್ತು ಚೌಳಿಕೇರಿಯ ಹಲರ ಪ್ರಸ್ತಾಪ ಗಮನಾರ್ಹವಾದುದು. ಅಳಿಯ ಸಂತಾನ ಪದ್ಧತಿ ಪ್ರಚಲಿತವಿದ್ದ ಬಗ್ಗೆಯೂ ಈ ದಾಖಲೆಯಲ್ಲಿ ಪ್ರಸ್ತಾಪವಿದೆ. ದತ್ತಿ ನೀಡಿದ ಕೊಟಿಯಣ್ಣ ಸೆಟ್ಟಿಯು ಸನಿಯಮ ಸೆಟ್ಟಿಯ ಅಳಿಯನೆಂದೇ ಹೇಳಲಾಗಿದೆಯಲ್ಲದೆ ಈ ಧರ್ಮವನ್ನು ಆತನ ಬಳಿಕ ಅವನ ಅಳಿಯಂದಿರು ಮುಂದುವರೆಸಿಕೊಂಡು ಬರುವರೆಂದಿದೆ. ದತ್ತಿ ನೀಡಿದ ಕೋಟಿ ಸೆಟ್ಟಿಯ ಕುಟುಂಬಕ್ಕೆ ಈ ಭೂಮಿಯನ್ನು ಗೇಣಿಗೆ ಪಡೆದವರು "ಒಪ್ಪಾನೇ ತುಪ್ಪವನೂ ನಡೇಸಿಹರು" ಎಂಬ ಉಲ್ಲೇಖ ಆಗಿನ ಗೇಣಿ ವ್ಯವಸ್ಥೆಯಲ್ಲಿನ ಸಾಮಾಜಿಕ ಸಂಬಂಧದ ಸೂಚಕವಾಗಿದೆ.
ಮುಂದುವರೆಯುತ್ತದೆ...