ಇತಿಹಾಸ ಪ್ರಸಿದ್ಧವಾದ ಬಸ್ರೂರು ಹಲವಾರು ದೇವಾಲಯಗಳನ್ನು ಹೊಂದಿದೆ. ಇವುಗಳಲ್ಲಿ ಬಸ್ರೂರು ಕೆಳಪೇಟೆಯ ತಿರುಮಲ ಶ್ರೀ ವೆಂಕಟರಮಣ ದೇವಾಲಯವು ಕ್ರಿ. ಶ. ಹದಿನಾರನೆಯ ಶತಮಾನದಲ್ಲಿ ಒಂದು ಪ್ರಮುಖ ಧಾರ್ಮಿಕ-ಸಾಂಸ್ಕೃತಿಕ ಕೇಂದ್ರವಾಗಿ ಮೆರೆದಿತ್ತು ಎಂಬುದಕ್ಕೆ ಹಲವಾರು ಸಾಕ್ಷ್ಯಗಳು ದೊರೆತಿವೆ. ಅಲ್ಲದೇ ಇಲ್ಲಿರುವ ಮೂರು ದಾನ ಶಾಸನಗಳು ಇದನ್ನು ಪುಷ್ಟೀಕರಿಸುತ್ತದೆ. ಆದರೆ ಈ ದೇವಾಲಯವು ಯಾವಾಗ ಅಸ್ತಿತ್ವಕ್ಕೆ ಬಂತು ಎನ್ನುವುದು ನಿಖರವಾಗಿ ತಿಳಿದುಬಂದಿಲ್ಲ.
|
ದೇವಾಲಯದ ಹೊರಭಾಗ |
ಪ್ರಧಾನ ಬಲಿಪೀಠ ನವರಂಗ ಮತ್ತು ಚತುರಸ್ರವಾದ ಗರ್ಭಗೃಹವನ್ನು ಹೊಂದಿರುವ ಈ ದೇವಾಲಯಕ್ಕೆ ಭದ್ರವಾದ ಶಿಲಾಮಯ ಅಧಿಷ್ಟಾನವಿದೆ. ಒಂದು ಪ್ರಾಕಾರ ಮತ್ತು ಹೊರ ಪ್ರದಕ್ಷಿಣಾ ಪಥವನ್ನು ಸಹ ಹೊಂದಿದ್ದು, ಶ್ರೀ ವೆಂಕಟರಮಣ ದೇವರ ಎಡ ಭಾಗದಲ್ಲಿ ಗಜಲಕ್ಷ್ಮಿ ಗುಡಿಯಿದೆ.
ದೇವಸ್ಥಾನದಲ್ಲಿರುವ ರಾಮಾನುಜ ಆಂಜನೇಯ, ಗಜಲಕ್ಷ್ಮಿ, ಹಾಗೂ ಗರುಡ ಮೂರ್ತಿಗಳು ಕಲಾತ್ಮಕವಾಗಿವೆ. ದೇವಸ್ಥಾನದ ಎದುರಿನಲ್ಲಿ ಕಂಚಿನ ದೀಪಸ್ತಂಭವಿದ್ದು ಸುಂದರವಾದ ಗೋಪಿಕಾ ವಸ್ತ್ರಾಪಹರಣದ ದೃಶ್ಯವನ್ನು ಕೆತ್ತಲಾಗಿದೆ.
|
ಶ್ರೀ ಆಂಜನೇಯ ಗುಡಿ |
ಉತ್ತರಾಭಿಮುಖವಾಗಿರುವ ವೆಂಕಟರಮಣ ದೇವಸ್ಥಾನದ ಬಲ ಭಾಗದಲ್ಲಿ ಆಂಜನೇಯನ ಗುಡಿಯಿದ್ದು ಅದು ಪಶ್ಚಿಮಾಭಿಮುಖವಾಗಿದೆ. ರಾವುತಕೆರಿಯಲ್ಲಿರುವ ಈ ತಿರುಮಲ ವೆಂಕಟರಮಣ ದೇವಸ್ಥಾನದ ಪಶ್ಚಿಮಕ್ಕೆ ಒಂದು ಕೆರೆ ಇದೆ. ಈ ಕೆರೆಗೆ 'ದೇವರ ಕೆರೆ' ಎಂದು ಹೆಸರು. ಬಹಳ ವಿಶಾಲವಾಗಿರುವ ಈ ಕೆರೆಯ ಮಧ್ಯದಲ್ಲೊಂದು ಚಿಕ್ಕದಾದ ದೇವರ ಗುಡಿ ಇದ್ದಿತ್ತು. ಆದರೆ ಈಗ ಇದರ ಕುರುಹನ್ನು ಮಾತ್ರ ನೋಡಬಹುದಾಗಿದೆ.
|
ಚಿತ್ರ ಕೃಪೆ: ಶ್ರೀಲಕ್ಷ್ಮಿ ಭಟ್ |
ತ್ರಿಕಾಲ ಪೂಜೆ ನಡೆಯುತ್ತಿರುವ ಈ ದೇವಸ್ಥಾನದಲ್ಲಿ ಹಲವಾರು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಹೊರಗಿನ ಪ್ರಾಕಾರದೊಳಗಿರುವ ಕಂಚಿನ ದೀಪಸ್ತಂಭ ಕಾರ್ತಿಕಮಾಸದಲ್ಲಿ, ಪ್ರತಿ ಶನಿವಾರ ಹಾಗೂ ಹುಣ್ಣಿಮೆಯಲ್ಲಿ ದೀಪಾರಾಧನೆ ನಡೆಯುತ್ತದೆ. ಶ್ರೀ ಗೋಕುಲಾಷ್ಟಮಿಗೆ ವಿಶೇಷ ಪೂಜೆ, ರಾತ್ರಿ ರಂಗಪೂಜೆ, ಸ್ಥಳೀಯರಿಂದ ಭಜನೆ, ಶ್ರೀ ಕೃಷ್ಣನಿಗೆ ಬಿಲ್ವಪತ್ರೆ, ಅರ್ಘ್ಯದ ಅರ್ಪಣೆ, ಮರುದಿನ ಸಾರ್ವಜನಿಕವಾಗಿ ವಿಟ್ಲಪಿಂಡಿ ಹಬ್ಬದ ಆಚರಣೆ. ಅಂದು ವೆಂಕಟರಮಣ ದೇವರ ನಗರೋತ್ಸವ, ಎಣ್ಣೆ ಹಚ್ಚಿದ ಅಡಿಕೆ ಮರವನ್ನು ಹತ್ತಿ ತುದಿಯಲ್ಲಿ ಕಟ್ಟಿದ ಪ್ರಸಾದವನ್ನು ಪಡೆಯುವ ಸ್ಪರ್ಧೆ ಅದ್ಭುತವಾದುದು. ಭಕ್ತರಿಂದ ಶ್ರೀ ರಾಘವೇಂದ್ರ ಸ್ವಾಮಿ ಆರಾಧನೆ, ಶ್ರಾವಣ ಮಾಸದ ಪುರಾಣ ವಾಚನ ಮೊದಲಾದುವು ಸಾಂಸ್ಕೃತಿಕ ಮಹತ್ವವನ್ನು ಪಡೆದಿವೆ.
|
ದೇವಾಲಯದ ಒಳಭಾಗ. ಚಿತ್ರ ಕೃಪೆ: ಶ್ರೀಲಕ್ಷ್ಮಿ ಭಟ್ |
ಇಲ್ಲಿ ಚಂದ್ರಶೇಖರ ಆಜಾದ್ ಮಿತ್ರ ಮಂಡಳಿಯವರು ಪ್ರತೀ ವರ್ಷ ಗಣೇಶೋತ್ಸವ ನಡೆಸುತಿದ್ದು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗಾಗಿ ಅನೇಕ ಸ್ಪರ್ಧೆಗಳನ್ನು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ.
ಈ ದೇವಸ್ಥಾನ ಸಂಪೂರ್ಣವಾಗಿ ಜೀರ್ಣೋದ್ಧಾರವಾಗಿದ್ದು ತನ್ನ ಹಳೆಯ ಸ್ವರೂಪವನ್ನು ಕಳೆದುಕೊಂಡಿದ್ದು, ಕಾಂಕ್ರೀಟ್ ಗುಮ್ಮಟ ಈಗ ಇಲ್ಲಿ ಇದೆ.