Header Ads

ಬಸ್ರೂರಿನಲ್ಲಿ ಸ್ವಾತಂತ್ರ್ಯ ಚಳುವಳಿ.


ಬಸ್ರೂರಿನಲ್ಲಿ ಸ್ವಾತಂತ್ರ್ಯ ಚಳುವಳಿ

       
            ವ್ಯಾಪಾರ ವ್ಯವಹಾರದಲ್ಲಿ ಹಿಮ್ಮೆಟ್ಟುತ್ತಿದ್ದ ಬಸ್ರೂರು ಬಂದರು ಬ್ರಿಟೀಷರ ಆಳ್ವಿಕೆಯಲ್ಲಿ (ಕ್ರಿ. ಶ. 1799ರಿಂದ 1947ರವರೆಗೆ) ಕ್ಷೀಣಿಸುತ್ತಾ, ಪೂರ್ಣವಾಗಿ ಸ್ಥಗಿತಗೊಂಡಿತು. ಆರ್ಥಿಕ ವ್ಯವಹಾರವು ಕಡಿಮೆಯಾಗುತ್ತಿದ್ದಂತೆ, ಇಲ್ಲಿಯ ಸಾಂಸ್ಕೃತಿಕ ವೈಭವವೂ ಮಸುಕಾಗುತ್ತಾ ಬಂತು.

Basrur

         ಕ್ರಿ. ಶ. 1799ರಲ್ಲಿ ಮದ್ರಾಸ್ ಪ್ರಾಂತ್ಯಕ್ಕೆ ಸೇರಿದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ರಿಟಿಷ್ ಆಡಳಿತ ಪದ್ಧತಿ ಜಾರಿಗೆ ಬಂದಾಗ ಸರ್ ಥಾಮಸ್ ಮನ್ರೋ ಮೊದಲ ಕಲೆಕ್ಟರ್ ಆಗಿದ್ದನು. ಅವನ ಬಂಗಲೆಯು ಬಸ್ರೂರಿನಲ್ಲಿತ್ತು. ಇಂದು ನಿವೇದಿತಾ ಹೈಸ್ಕೂಲು ಇರುವ ಸ್ಥಳವನ್ನು ಕಚೇರಿಗುಡ್ಡ ಎಂದೇ ಕರೆಯುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಉತ್ತರ ಭಾಗದ, ಕಂದಾಯ ವಸೂಲಿ ಮೊದಲಾದ ಆಡಳಿತ ವ್ಯವಹಾರವನ್ನು ನಡೆಸುವಾಗ ಕಲೆಕ್ಟರ್ ಬಸ್ರೂರಿನಲ್ಲಿಯೇ ನೆಲಸುತ್ತಿದ್ದನು. ಬಾಸೆಲ್ ಮಿಷನ್ ಹಿರಿಯ ಪ್ರಾಥಮಿಕ ಶಾಲೆಯ ಬದಿಯಲ್ಲಿರುವ "ಮನ್ರೋ ವೆಲ್" (ಕ್ರಿ. ಶ. 1800) ಮೊದಲ ಕಲೆಕ್ಟರನನ್ನು ಸ್ಮರಿಸುತ್ತಿದೆ. ಕ್ರಿ. ಶ. 1862ರಲ್ಲಿ ಕರಾವಳಿ ಪ್ರದೇಶವು ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡವೆಂಬ ವಿಭಾಗವಾಗಿ, ದ. ಕ. ಜಿಲ್ಲೆಯ ಉತ್ತರ ತುದಿಯಲ್ಲಿರುವ ಪ್ರದೇಶಕ್ಕೆ ಕುಂದಾಪುರ ಎಂಬ ಹೆಸರು ಬಂತು. ಕುಂದಾಪುರ ತಾಲೂಕು ಪ್ರದೇಶಗಳಲ್ಲಿ ಆಡಳಿತಾತ್ಮಕವಾಗಿಯೂ ಬಸ್ರೂರಿನ ಮಹತ್ವ ಕಡಿಮೆಯಾಯಿತು. ಕರಾವಳಿಯ ರಸ್ತೆ ಕುಂದಾಪುರ-ಗಂಗೊಳ್ಳಿಗಾಗಿ ಹಾದು ಹೋದುದರಿಂದಲೂ, ಪ್ರಾಕೃತಿಕ ತೊಂದರೆಗಳಿಂದ ಹಡಗುಗಳು ಬಸ್ರೂರಿಗೆ ಬರುವುದು ನಿಂತು ಹೋದುದರಿಂದ ಬಸ್ರೂರು ತನ್ನ ಇತಿಹಾಸದ ಗತವೈಭವಗಳನ್ನು ಮಾತ್ರ ಉಳಿಸಿಕೊಂಡಿತು. ಕುಂದಾಪುರ ನಗರ ಪ್ರದೇಶವು ಬೆಳೆಯತೊಡಗಿತು.

          ಬಸ್ರೂರು ಮಾಗಣೆ ಆನಗಳ್ಳಿ, ಹಟ್ಟಿಕುದ್ರು, ಬಳ್ಕೂರು, ಜಪ್ತಿ, ಕಂದಾವರ ಗ್ರಾಮಗಳನ್ನು ಒಳಗೊಂಡು ಪ್ರತ್ಯೇಕ ಆಡಳಿತ ವ್ಯವಸ್ಥೆಗೆ ಒಳಪಟ್ಟಿತ್ತು. ಎಲ್ಲ ಊರುಗಳಂತೆ ಇಲ್ಲಿಯೂ ಪಟೇಲರು ಸರಕಾರವನ್ನು ಪ್ರತಿನಿಧಿಸುವ ಪ್ರಮುಖ ಅಧಿಕಾರಿಯಾಗಿದ್ದರು. ಅವರ ಅಧೀನದಲ್ಲಿ ಶ್ಯಾನುಭೋಗ ಮತ್ತು ಊಳಿಗದವರಿರುತ್ತಿದ್ದರು. ಅವರು ಜನನ ಮರಣ ನೋಂದಾವಣೆ, ಕಂದಾಯ ವಸೂಲಿ, ನ್ಯಾಯ ತೀರ್ಮಾನ ಮೊದಲಾದ ಕಾರ್ಯಗಳನ್ನು ನಿರ್ವಹಿಸುತ್ತಿದ್ದರು. ಪಂಚ ಗ್ರಾಮಗಳಿಗೆ ಸಂಬಂಧಿಸಿದ ನ್ಯಾಯ ತೀರ್ಮಾನಗಳು ಇಲ್ಲೆ ನಡೆಯುತ್ತಿದ್ದವು.

          ಸುಮಾರು 1920ರಿಂದ ತೀವ್ರಗೊಂಡ ಸ್ವಾತಂತ್ರ್ಯ ಚಳುವಳಿಗೆ ಕುಂದಾಪುರವೇ ಕೇಂದ್ರವಾಗಿತ್ತು. 1929ರಲ್ಲಿ ಕುಂದಾಪುರ ನರಿ ಬೇಣದ(ಈಗಿನ ಗಾಂಧಿ ಮೈದಾನ) ಸಾರ್ವಜನಿಕ ಸಭೆಯ ಮೂಲಕ ಸ್ವಾತಂತ್ರ್ಯ ಹೋರಾಟ ಮೊದಲ್ಗೊಂಡಿತು. ಅನಂತರ 1930ರ ಉಪ್ಪಿನ ಸತ್ಯಾಗ್ರಹದಲ್ಲಿ ಬಸ್ರೂರಿನ ಉತ್ಸಾಹೀ ಯುವಕರಾದ ಶುಂಠಿ ರಾಮಪ್ರಭು, ರಾಮದಾಸ ಪಡಿಯಾರ್, ಸೂರಪ್ಪ ಶೆಟ್ಟಿ, ಸುಬ್ಬಣ್ಣ ಶೆಟ್ಟಿ, ಗೋಪಾಲಕೃಷ್ಣ ಶೆಣೈ ಮೊದಲಾದವರು ತ್ಯಾಗ ಮೊನೋಭಾವದಿಂದ ಕಣಕ್ಕಿಳಿದವರು. ಇವರು ಕುಂದಾಪುರದಿಂದ ಮಂಗಳೂರಿಗೆ ವಿಜಯಯಾತ್ರೆ ಮಾಡಿ, ಅಲ್ಲಿ ಕಾರ್ನಾಡ್ ಸದಾಶಿವರಾಯರ ನೇತ್ರತ್ವದಲ್ಲಿ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದರು. ಕರ್ನಾಡ್ ಸದಾಶಿವರಾಯರ ಬಂಧನವಾದ ಬಳಿಕ ತಮ್ಮ ತಮ್ಮ ಊರಿಗೆ ಹಿಂತಿರುಗಿ ಬ್ರಿಟಿಷ್ ವಿರೋಧಿ ಚಟುವಟಿಕೆಗಳನ್ನು ನಡೆಸಿದರು. ಕುಂದಾಪುರದ ಕೋಟೆ ಬಾಗಿಲಿನಲ್ಲಿ ಉಪ್ಪು ನೀರು ಕುದಿಸಿ, ಉಪ್ಪು ತಯಾರಿಸಿ, ಪೇಟೆಗೆ ತಂದು ಏಲಂ ಹಾಕುತ್ತಿದ್ದರು, ಹಾಗೆಯೇ ಶರಾಬು ಅಂಗಡಿ ಪಿಕೆಟಿಂಗ್, ವಿದೇಶಿ ವಸ್ತ್ರ ಬಹಿಷ್ಕಾರ, ಕರ ನಿರಾಕರಣೆ ಮೊದಲಾದವು ಸತ್ಯಾಗ್ರಹದ ಇತರ ಚಟುವಟಿಕೆಗಳು. ಜನಜಾಗೃತಿಯನ್ನುಂಟುಮಾಡಲು ಗಲ್ಲಿ ಗಲ್ಲಿಯಲ್ಲಿ ಪ್ರಭಾತ ಫೇರಿ ನಡೆಸುತ್ತಿದ್ದರು. ಹಾಡುವುದರಲ್ಲಿ ನಿಪುಣರಾದ ಬಸ್ರೂರು ಗೋಪಾಲಕೃಷ್ಣ ಶೆಣೈ ಅವರು ಆಗ ಹೇಳುತ್ತಿದ್ದ ಹಾಡುಗಳನ್ನು ನೆನಪಿಸಿಕೊಳ್ಳುತ್ತಾರೆ.

"ಮಾತೃಭೂಮಿ ಜನನಿ ನಿನ್ನ ಸೇವೆ ಮಾಡುವೆ l
ಪರಮ ಹರುಷದಿಂದ ನನ್ನ ಪ್ರಾಣ ನೀಡುವೆ ll
        ಹಿಂದೂ ಮಾತೆ ಬಂಧು ಭಾವದಿಂದ ನಿನ್ನ ನಮಿಪೆವು l
       ಒಂದು ಗೂಡಿ ಪಾರತಂತ್ರ್ಯದಿಂದ ನಿನ್ನ ಬಿಡಿಪೆವು ll"

         ಬಸ್ರೂರು ಸೂರಪ್ಪ ಶೆಟ್ಟರು ಕುಪ್ಪ ಕೊರಗನ ಡೋಲನ್ನು ಬಾರಿಸುತ್ತಾ ಜನರನ್ನು ಬಡಿದೆಬ್ಬಿಸುತ್ತಾ, "ಜಾತಿ ಮತ ಇಲ್ಲ, ನಾವೆಲ್ಲರೂ ಒಂದೇ, ನಮ್ಮ ಗುರಿ ಪೂರ್ಣ ಸ್ವರಾಜ್ಯ" ಎಂಬ ಸಂದೇಶವನ್ನು ಕೇರಿಕೇರಿಗಳಲ್ಲಿ ಸಾರಿದರು. ಇವರು ಚರಕ ಚಳುವಳಿ ಹಬ್ಬಲು ಪ್ರಮುಖರಾದರು.

         1937ರಲ್ಲಿ ಪ್ರಾಂತ್ಯ ಸರಕಾರಕ್ಕೆ ಚುನಾವಣೆ ನಡೆದಾಗ ಮನೆಯವರ ವಿರೋಧವನ್ನೂ ಲೆಕ್ಕಿಸದೆ ಸೂರಪ್ಪ ಶೆಟ್ಟಿ, ರಘುನಾಥ ಶೆಟ್ಟಿ ಮೊದಲಾದವರು ಆಗಿನ ಕಾಂಗ್ರೆಸ್ ಪಕ್ಷದ ಪ್ರಚಾರ ಮಾಡಿದರು. ಸರಕಾರದ ಜಸ್ಟೀಸ್ ಪಕ್ಷವನ್ನು ಹಿಮ್ಮೆಟ್ಟಿಸುವಲ್ಲಿ ಸಮರ್ಥರಾದರು. ಚುನಾವಣಾ ಪ್ರಚಾರದಲ್ಲಿ ಎಳೆಯ ಮಕ್ಕಳಿಗೆ ಖಾದಿ ಬಟ್ಟೆ, ಟೋಪಿ ಹಾಕಿಸಿ ಕೈಯಲ್ಲಿ ಕಾಂಗ್ರೆಸ್ ಬಾವುಟ ಹಿಡಿದು ಕೇರಿ ಕೇರಿ ತಿರುಗಿದುದನ್ನು ಶ್ರೀ ಬಿ. ಕೆ. ಬಳೆಗಾರ್ ನೆನಪಿಸಿಕೊಳ್ಳುತ್ತಾರೆ. ಆಗ ಗಾಂಧೀಜಿಯವರ ಸಂದೇಶವನ್ನು ಕೈಯಲ್ಲಿ ಬರೆದು ಮನೆಮನೆಗೆ ಹಂಚುತ್ತಿದ್ದರು.

        1942ರ ಕ್ವಿಟ್ ಇಂಡಿಯಾ ಚಳುವಳಿಯು ವಿನಾಶಾತ್ಮಕವಾಗಿ ಮುಂದುವರಿಯಿತು. ಬಸ್ರೂರಿನ ಪ್ರತಿಯೊಬ್ಬ ಪ್ರಜೆಯೂ ಸರಕಾರವನ್ನು ವಿರೋಧಿಸುವಂತೆ ಭಾಷಣ, ಮೆರವಣಿಗೆ, ಘೋಷಣೆಗಳು ನಡೆದವು. ಇಲ್ಲಿಯ ಕೆಚ್ಚೆದೆಯ ದೇಶ ಪ್ರೇಮಿಗಳು ಅವಕಾಶ ದೊರೆತಾಗ ಹೊರನಾಡುಗಳಿಗೆ ಹೋಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ, ಸೆರೆಯಾದುದುಂಟು. ಶ್ರೀ ಗೋಪಾಲಕೃಷ್ಣ ಶೆಣೈಯವರು ಕರ ನಿರಾಕರಣೆಯ ಪ್ರಚಾರವನ್ನು ಮಾಡಲು ಯಲ್ಲಾಪುರದಲ್ಲಿದ್ದಾಗ ಬಂಧಿತರಾದರೆ, ಬಸ್ರೂರು ಸದಾಶಿವ ದೇವಾಡಿಗರ ಕಾರ್ಯಕ್ಷೇತ್ರ ತೀರ್ಥಹಳ್ಳಿಯಾಗಿತ್ತು. ಕಳಂಜೆ ರಾಮಕೃಷ್ಣ ಭಟ್ಟರು ಧಾರವಾಡ ಜಿಲ್ಲೆಯ ಹಿರೇಕೆರೂರು, ಹಿಂಡಲಗಿಯಲ್ಲಿ ಸೆರೆಮನೆವಾಸ ಅನುಭವಿಸಿದರೆ, ಗಾಂಧಿ ರಾಮಣ್ಣ ಶೆಟ್ಟರು ಕುಂದಾಪುರದಿಂದ ಹೊರಟು ಬ್ರಿಟಿಷ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಭಟ್ಕಳ ತಲುಪಿದಾಗ ಬಂಧನಕ್ಕೊಳಗಾದರು. ಬಸ್ರೂರು ಸುಬ್ಬಣ್ಣ ಶೆಟ್ಟರು ಬಸ್ರೂರಿನಲ್ಲಿ ಬ್ರಿಟಿಷ್ ಆಡಳಿತಕ್ಕೆ ಆತಂಕ ಒಡ್ಡುವ ಕೃತ್ಯಗಳಲ್ಲಿ ನಿರತರಾಗಿ ದೇಶ ಸೇವೆಗೈದರು.



   - ಶಿವರಾಜ್ ಶೆಟ್ಟಿ.

Theme images by sndr. Powered by Blogger.