ಕಾಷ್ಠಶಿಲ್ಪದ ಉಸಿರು ಬಸ್ರೂರು.
ಕಾಷ್ಠಶಿಲ್ಪದ ಉಸಿರು ಬಸ್ರೂರು
ಬಸ್ರೂರು ಐತಿಹಾಸಿಕ ಪ್ರಸಿದ್ಧಿಯನ್ನು ಪಡೆದಿರುವ ಪಟ್ಟಣ. ಕರಾವಳಿಯ ಪ್ರಸಿದ್ಧ ಐತಿಹಾಸಿಕ ಊರುಗಳಲ್ಲಿ ಒಂದಾದ ಕುಂದಾಪುರ ತಾಲೂಕಿನ ಬಸ್ರೂರು ಗ್ರಾಮ ಹತ್ತುಹಲವು ಗುಡಿಗೋಪುರಗಳನ್ನು ಹೊಂದಿದೆ. ಬಸರೂರನ್ನು ದೇಗುಲಗಳ ಪಟ್ಟಣವೆಂದು ಕರೆದಿದ್ದಾರೆ.
ಅಂದು ವಸು ಚಕ್ರವರ್ತಿ ಇಲ್ಲಿನ ಮಹಾಲಿಂಗೇಶ್ವರ ದೇವಸ್ಥಾನವನ್ನು ಅಭಿವದ್ಧಿ ಪಡಿಸಿದ್ದಾನೆ ಎನ್ನಲಾಗುತ್ತದೆ. 5 ಗ್ರಾಮಗಳಾದ ಬಸ್ರೂರು, ಆನಗಳ್ಳಿ, ಜಪ್ತಿ, ಬಳ್ಕೂರು ಮತ್ತು ಕಂದಾವರ ವಸುರಾಜ ಆಳ್ವಿಕೆಗೆ ಒಳಪಟ್ಟಿದ್ದವು. ಇವುಗಳನ್ನು ಮಂತ್ರಿಗಳು ನೋಡಿಕೊಳ್ಳುತ್ತಿದ್ದರು. ಇವರುಗಳಿಗೆ ರಾಹುಕ್ ಕೇರಿಯಲ್ಲಿ 5, ಕೆರೆಕಬ್ಬೆಯಲ್ಲಿ 3 ಮನೆ ಕಟ್ಟಿಸಿಕೊಟ್ಟಿದ್ದ. ಇವುಗಳಲ್ಲಿ ಕೆರೆಕಬ್ಬೆಯಲ್ಲಿನ ಹರಿಕಾರರ ಮನೆ ಮುಖ್ಯವಾದುದಾಗಿತ್ತು. ಮನೆ ಎಡಭಾಗದಲ್ಲಿರುವ ಕೆರೆಯನ್ನು ವಸುರಾಜನು ನಿರ್ಮಿಸಿ ಅದಕ್ಕೆ ವಸುತೀರ್ಥ ಎಂದು ಹೆಸರಿಟ್ಟನಂತೆ.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕಲ್ಲಿನ ಮೇಲೆ ಕೆತ್ತನೆಗಳು ಅನೇಕ ಕಡೆಗಳಲ್ಲಿವೆ. ಆದರೆ ಕಾಷ್ಠಶಿಲ್ಪದಲ್ಲಿ ಬಸ್ರೂರಿನ ಪುರಾತನ ಹರಿಕಾರರ ಮನೆ ಪ್ರಸಿದ್ಧ. 600 ವರ್ಷ ಹಿಂದಿನದಾದ ಈ ಅಪೂರ್ವ ಕೆತ್ತನೆ ಇಂದಿಗೂ ತನ್ನ ವೆಶಿಷ್ಟ್ಯವನ್ನು ಕಳೆದುಕೊಂಡಿಲ್ಲ. ಆಗಿನ ಕಾಲದ ಶಿಲ್ಪಕಾರರು ಮರದಲ್ಲಿ ಅರಳಿಸಿರುವ ಅವರ ನೆಪುಣ್ಯದ ನೆಜರೂಪವನ್ನು ಇಲ್ಲಿ ನೋಡಬಹುದಾಗಿದೆ. ಶಿಲ್ಪಿಗಳಿಗೆ ಸಂಬಳವಾಗಿ ಕೆತ್ತನೆಯ ಸಮಯದಲ್ಲಿ ಬಂದ ಹುಡಿಯನ್ನು ಅಳತೆ ಮಾಡಿ ಅದು ಎಷ್ಟಿದೆಯೋ ಅಷ್ಟೇ ಚಿನ್ನದ ನಾಣ್ಯವನ್ನು ಮಂತ್ರಿಗಳು ಕೊಡುತ್ತಿದ್ದರಂತೆ.(ಹುಡಿಯನ್ನು ಸೇರಿನಲ್ಲಿ ಅಳತೆ ಮಾಡಲಾಗುತ್ತಿತ್ತು.) ಇದರಲ್ಲಿ ಸುಮಾರು 280ಕ್ಕಿಂತಲೂ ಅಧಿಕವಾದ ಹೂವುಗಳು, ಒಂದರಂತೆ ಇನ್ನೊಂದಿಲ್ಲ. ಪ್ರತಿಯೂಂದು ಹೂವಿನಲ್ಲೂ ಭಿನ್ನತೆಯನ್ನು ಗುರುತಿಸಬಹುದಾಗಿದೆ. ಇವುಗಳನ್ನು ಯಾವ ಮರದಿಂದ ಮಾಡಲಾಗಿದೆ ಎನ್ನುವುದು ಗುರುತಿಸಲು ಇಂದಿಗೂ ಸಾಧ್ಯವಾಗಿಲ್ಲ.
ಸುತ್ತಲೂ ವಿಧವಿಧದ ಪ್ರಾಣಿ, ಪಕ್ಷಿಗಳ ಕೆತ್ತನೆಗಳಿವೆ. ಹೂ ಬಳ್ಳಿಗಳು, ಇವುಗಳ ಮಧ್ಯೆ ತುಳಸಿ ಕಬ್ಬೆಗಳು, ಅಷ್ಟಲಕ್ಷ್ಮಿ, ಗಜಲಕ್ಷ್ಮಿ ಮುಂತಾದ ದೇವತೆಗಳ ಕೆತ್ತನೆಗಳು ಇಲ್ಲಿ ಮೂಡಿಬಂದಿರುವುದನ್ನು ನೋಡಬಹುದು. ಈಗ ತಿಪ್ಪಯ್ಯ ಹರಿಕಾರರ ವಂಶಜರು ಈ ಮನೆಯಲ್ಲಿ ವಾಸವಾಗಿದ್ದಾರೆ. ಇತಿಹಾಸದ ಪುಟಗಳಿಗೆ ಸೇರಿಹೋದ ಗಹವನ್ನು ನೋಡಬೇಕಾದರೆ ಒಮ್ಮೆ ಹರಿಕಾರರ ಮನೆಗೆ ಭೇಟಿ ನೀಡಿ.
ಬರಹ: ಕರುಣಾಕರ ಬಳ್ಕೂರು
ಸಂಗ್ರಹ: ಶಿವರಾಜ್ ಶೆಟ್ಟಿ