ಪ್ರವಾಸಿಗರ ತಾಣ-ಬಸ್ರೂರು ನಗರ ನೋಡಬನ್ನಿ Part 2
ಬಸ್ರೂರು ನಗರ ನೋಡಬನ್ನಿ- ಭಾಗ ೨.
ರಥಬೀದಿ:
ಚಿತ್ರಾ ಪೂರ್ಣಿಮೆಯ ದಿನದಂದು ನಡೆಯುವ ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವರ ರಥೋತ್ಸವದಂದು ದೇವಾಸ್ಥಾನದ ಹೊರ ಪೌಳಿಯ ಸುತ್ತಲೂ ರಥವನ್ನು ಎಳೆದುಕೊಂಡು ಹೋಗುವುದರಿಂದ ಹೊರ ಪೌಳಿಯ ಸುತ್ತಲಿನ ರಸ್ತೆಯನ್ನು ರಥಬೀದಿಯೆಂದು ಕರೆಯುತ್ತಾರೆ. ಹೀಗೆ ದೇವಸ್ಥಾನದ ಹೊರ ಪೌಳಿಯ ಸುತ್ತಲೂ ರಥವನ್ನು ಎಳೆದುಕೊಂಡು ಹೋಗುವುದರಿಂದ ಹೊರ ಪೌಳಿಯ ಸುತ್ತಲಿನ ರಸ್ತೆಯನ್ನು ರಥಬೀದಿಯೆಂದು ಕರೆಯುತ್ತಾರೆ. ಹೀಗೆ ದೇವಸ್ಥಾನದ ಸುತ್ತ ರಥ ಎಳೆಯುವ ರೂಢಿ ಇದ್ದ ಊರುಗಳು ಅತಿ ವಿರಳ. ರಥಬೀದಿಯ ಪಶ್ಚಿಮ ದಿಕ್ಕಿನಲ್ಲಿ ಸರಕಾರಿ ಉರ್ದು ಶಾಲೆ ಇದೆ. ದಕ್ಷಿಣ, ಉತ್ತರ ಹಾಗೂ ಪೂರ್ವ ದಿಕ್ಕಿನ ಪೌಳಿಗಳಲ್ಲಿ ಅಂಗಡಿಗಳ ಸಾಲು ಇದೆ. ಈಗಿನ ಬಸ್ಸ್ಟ್ಯಾಂಡ್ ಆಗುವುದಕ್ಕೆ ಮೊದಲು ಈ ರಥಬೀಡಿಯು ದೊಡ್ಡ ವ್ಯಾಪಾರ ಕೇಂದ್ರವಾಗಿತ್ತು. ಸುತ್ತಮುತ್ತಲಿನ ಹಳ್ಳಿಗಳ ಜನರು ತಮಗೆ ಬೇಕಾಗುವ ವಸ್ತುಗಳನ್ನು ಸಾಗಟಾಗಿಯೂ, ಚಿಲ್ಲಾರೆಯಾಗಿಯೂ ಇಲ್ಲಿಂದಲೇ ಖರೀದಿಸುತ್ತಿದ್ದರು. ದೂರದ ಹಳ್ಳಿಗಳಿಂದ ದೋಣಿಗಳ ಮೂಲಕ ಹಾಗೂ ಎತ್ತಿನ ಗಾಡಿಗಳ ಮೂಲಕ ಇಲ್ಲಿಗೆ ಬರುತ್ತಿದ್ದರು. ಈಗಿನಂತೆ ಲಾರಿ, ಬಸ್ಸುಗಳ ಅನುಕೂಲತೆ ಇರಲಿಲ್ಲ. ಈಗ ಪ್ರತೀ ೫-೧೦ ನಿಮಿಷಗಳಿಗೊಂದರಂತೆ ಕುಂದಾಪುರದಿಂದ ಬಸ್ಸುಗಳು ಬಂದು ಹೋಗುತ್ತಿರುವುದರಿಂದ ಜನರು ತಮ್ಮ ವಸ್ತುಗಳ ಖರೀದಿಗಾಗಿ ಕುಂದಾಪುರಕ್ಕೇ ಹೋಗಿ ಬರುತ್ತಿದ್ದಾರೆ. ಹಾಗಾಗಿ ಬಸ್ರೂರಿನ ವ್ಯಾಪಾರ ಕೇಂದ್ರಗಳು ನೆಲಕಚ್ಚಿವೆ.ಮಸೀದಿ ರಸ್ತೆ:
ರಥಬೀದಿಯ ಪಶ್ಚಿಮ ದಿಕ್ಕಿನಿಂದ ನೇರವಾಗಿ ಆನಗಳ್ಳಿ ರಸ್ತೆಯನ್ನು ಕೂಡಿಕೊಳ್ಳುವ ರಸ್ತೆಯೇ ಮಸೀದಿ ರಸ್ತೆ. ಈ ರಸ್ತೆಯ ಇಕ್ಕೆಲಗಳಲ್ಲಿಯೂ ಮುಸ್ಲಿಂ ಕುಟುಂಬಗಳು ವಾಸಿಸುತ್ತಿವೆ. ಈ ರಸ್ತೆಯ್ಯಲ್ಲಿಯೇ ಮುಸ್ಲಿಂ ಪ್ರಾರ್ಥನಾ ಮಂದಿರ(ಮಸೀದಿ) ಇರುವುದರಿಂದ ಇದಕ್ಕೆ ಮಸೀದಿ ರಸ್ತೆ ಎಂದು ಕರೆಯುತ್ತಾರೆ. ಇಲ್ಲಿನ ಮುಸ್ಲಿಮರು ಇತರ ಜಾತಿಯವರೊಡನೆ ಒಳ್ಳೆಯ ಸಂಪರ್ಕ ಇಟ್ಟುಕೊಂಡಿದ್ದಾರೆ. ಈ ತನಕ ಇಲ್ಲಿ ಯಾವುದೇ ರೀತಿಯ ಮತೀಯ ಸಂಘರ್ಷಗಳು ನಡೆದ ಉದಾಹರಣೆ ಇಲ್ಲ. ಹಿಂದೆ ಈ ರಸ್ತೆಯು ಆನಗಳ್ಳಿ ಮೂಲಕ ಹೊಳೆದಾಟಿ ಕುಂದಾಪುರಕ್ಕೆ ಹೋಗುವ ಕಾಲುದಾರಿಯಾಗಿತ್ತು.ಮೇಲಗ್ರಹಾರ:
ದೇವರಕೆರೆಯ ಪೂರ್ವ ದಿಕ್ಕಿನಲ್ಲಿ ತಿರುಮಲ ವೆಂಕಟರಮಣ ದೇವಸ್ತಾನದ ಎಡಗಡೆಯಿಂದ ನೀರು ಟ್ಯಾಂಕಿಯ ತನಕ ಇರುವ ಭಾಗವನ್ನು ಮೇಲಗ್ರಹಾರ ಎನ್ನುತ್ತಾರೆ. ಇಲ್ಲಿ ಪೂರ್ವಾಭಿಮುಖವಾಗಿರುವ ಎರಡು ದೇವರ ಮೂರ್ತಿಗಳಿರುವ ಗುಡಿಯೊಂದಿದೆ. ಪಟ್ಟಾಭಿ ರಾಮಚಂದ್ರ ಹಾಗೂ ಚನ್ನಕೇಶವ ದೇವರ ಮೂರ್ತಿಗಳು ಇಲ್ಲಿವೆ.ಗುಪ್ಪೆ ರಸ್ತೆ:
ನೀರು ಟ್ಯಾಂಕಿಯ ಪಕ್ಕದಿಂದಲೇ ದಕ್ಷಿಣಾಭಿಮುಖವಾಗಿ ಹೋಗುವ ಮಣ್ಣು ರಸ್ತೆಯೇ ಗುಪ್ಪೆ ರಸ್ತೆ. ಈ ರಸ್ತೆ ಸುಮಾರು ಇನ್ನೂರು ಮೀಟರ್ ತನಕ ಇದೆ. ಹಿಂದೆ ಇದ್ದ, ಈಗ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿರುವ ಬಸ್ರೂರು ಕೋಟೆಯ ಅವಶೇಷಗಳನ್ನು ಇಲ್ಲಿ ಕಾಣಬಹುದು. ಈ ಕೋಟೆಯ ಗೋಡೆಗೆ ತಾಗಿಕೊಂಡೇ ಒಳಗಡೆ ಒಂದು ಗುಪ್ಪೆ ಸದಾನಂದ ದೇವಸ್ತಾನದ ಭಗ್ನಾವಶೇಷಗಳು ಉಳಿದುಕೊಂಡಿವೆ. ಈ ವಠಾರದಲ್ಲಿ ಅಲ್ಲಲ್ಲಿ ಕಲ್ಲಿನ ಗುಪ್ಪೆಗಳು ಕಾಣಸಿಗುತ್ತದೆ. ಆದಿವಾಸಿಗಳ ಸಮಾಧಿಯಂತೆ ಇವುಗಳು ಕಂಡುಬರುತ್ತವೆ. ದೇವಸ್ತಾನದ ಸುತ್ತಮುತ್ತ ಸುಮಾರು ಎರಡೂವರೆ ಅಡಿ ಎತ್ತರದ, ಹದಿನೈದು ಅಡಿ ಚಚ್ಚೌಕದ ಸಭಾವೇಡಿಕೆಗಳಂತೆ ಕಂಡುಬರುವ ಜಗಲಿಗಳಿವೆ. ದೇವಸ್ತಾನದ ಶೀಲಾಕಂಬಗಳು ತುಂಡಾಗಿ ಚದುರಿ ಬಿದ್ದಿವೆ. ದೇವಸ್ತಾನದ ಹೊರಬದಿಯಲ್ಲಿ ಹೈಡ್ ತುಂಡಾಗಿ ಬಿದ್ದಿದ್ದ ಮಹಾಸತಿಯ ಶಿಲಪ್ರತಿಮೆಯೊಂದನ್ನು ಈಗ ಶ್ರೀ ಶಾರದಾ ಕಾಲೇಜಿನ ಅಂಗಳದಲ್ಲಿ ಕಾಣಬಹುದು. ಕುಸುರಿ ಕೆಲಸದ ಶಿಲಾಸ್ಥಂಭದ ಬಿಡಿಭಾಗಗಳನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಈಗಲೂ ಕಾಣಬಹುದು. ಈಗ ಮೂಡುಕೇರಿ ಆದಿನಾಥೇಶ್ವರ ದೇವಸ್ಥಾನದಲ್ಲಿರುವ ನಾಂದಿ ವಿಗ್ರಹ ಇಲ್ಲಿಂದಲೇ ತಂದದ್ದು ಎಂದು ಹೇಳಲಾಗುತ್ತದೆ. ಆದರೆ ಇಲ್ಲಿದ್ದ ದೇವಸ್ತಾನದ ಹೆಸರೇನು, ದೇವರ ಮೂರ್ತಿ ಯಾವುದು, ಇಲ್ಲಿ ಮಠ ಇತ್ತೇ ಎನ್ನುವ ವಿಚಾರಗಳು ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.ತುಂಡುತುಂಡಾಗಿ ಬಿದ್ದ ಅವಶೇಷಗಳನ್ನು ನೋಡುವಾಗ ಶತ್ರುಗಳಿಂದ ಆಕ್ರಮಣಕ್ಕೆ ಒಳಗಾಗಿ ಈ ದೇವಸ್ಥಾನ ನಾಶವಾಗಿರಬಹುದು ಎಂಬ ಸಂಶಯ ಬರುತ್ತದೆ. ಕೋಟೆಯ ಗೋಡೆಗೆ ತಾಗಿಕೊಂಡೇ ಇದ್ದುದರಿಂದ ಶತ್ರುಗಳ ಆಕ್ರಮಣಕ್ಕೆ ಈ ದೇವಸ್ಥಾನ ಮೊದಲು ಬಲಿಯಾಗಿರಬಹುದು. ಇಲ್ಲಿ ಸದಾನಂದ ದೇವಸ್ಥಾನವಿದ್ದಿತ್ತೆಂದು ಕೆಲವರು ಹೇಳಿದರೆ, ಗೋಪಿನಾಥನ ಗುಡಿಯೆಂದು ಕೆಲವರು ಹೇಳುತ್ತಾರೆ. ಯಾವುದಕ್ಕೂ ಸ್ಪಷ್ಟ ದಾಖಲೆಗಳಿಲ್ಲ. ಈ ಸ್ಥಳಗಳಲ್ಲಿ ಉತ್ಖನನ ನಡೆಸಿ, ಸಂಶೋಧನೆ ಮಾಡಿದಲ್ಲಿ ಬಸ್ರೂರಿಗೆ ಸಂಬಂಧಪಡುವ ಇತಿಹಾಸದ ಪ್ರಮುಖ ಅಂಶಗಳು ಬೆಳಕಿಗೆ ಬರಬಹುದು.
ಹಟ್ಟಿಕುದ್ರು:
ಬಸ್ರೂರಿನ ಮಂಡಿಬಾಗಿಲು ಕಡವಿನ ಮೂಲಕ ಹೊಳೆ ದಾಟಿದರೆ, ನೀವು ಹತ್ಟಿಕುದ್ರಿಗೆ ಬರುತ್ತೀರಿ. ಬಸ್ರೂರು ಗ್ರಾಮದ ವಿಸ್ತೀರ್ಣದ ಕಾಲಾಂಶ ವಿಸ್ತೀರ್ಣ ಹೊಂದಿದ ಈ ಕುದುರು ತೆಂಗಿನ ತೋಟಗಳಿಂದಲೇ ಎಂದು ಹೇಳಿದರೆ ತಪ್ಪೇನಿಲ್ಲ. ಇಲ್ಲಿ ಹೆಚ್ಚಿನವರು ಕೃಷಿಕರು. ತಮ್ಮ ಗದ್ದೆಗಳಲ್ಲಿ ಭಟ್ಟ, ಕಬ್ಬು, ತರಕಾರಿ ಹಾಗೂ ದ್ವಿದಳ ಧಾನ್ಯಗಳನ್ನು ಬೆಳೆಸುತ್ತಾರೆ. ಏನನ್ನು ಬೆಳೆಸಲಿಕ್ಕೂ ಇಲ್ಲಿ ನೀರಿನ ಕೊರತೆ ಇಲ್ಲ. ಈ ಕುದುರು ಬೆಲ್ಲ ತಯಾರಿಕೆಗೆ ಹೆಸರುವಾಸಿಯಾಗಿತ್ತು. ಹೆಚ್ಚಿನವರು ತಮ್ಮ ಗದ್ದೆಗಳಲ್ಲಿ ಕಬ್ಬು ಬೆಳೆಸಿ ಅಲ್ಲಿಯೇ ಗಾಣ ಹೂಡಿ ಬೆಲ್ಲ ತಯಾರಿಸಿ ಡಬ್ಬಿಗಳಲ್ಲಿ ತುಂಬಿಸಿ ಮಾರಾಟ ಮಾಡುತ್ತಿದ್ದರು. ಹತ್ಟಿಕುದುರು ಬೆಲ್ಲಕ್ಕೆ ದೂರದ ಊರುಗಳಿಂದಲೂ ಬೇಡಿಕೆ ಇದ್ದಿತ್ತು. ಆದರೆ ಈಗ ಆ ಉದ್ಯಮ ನಶಿಸಿ ಹೋಗಿದೆ. ಬೆಲ್ಲದ ಉದ್ಯಮ ನಶಿಸಿ ಹೋಗಲು ಸಕ್ಕರೆ ಕಾರ್ಖಾನೆ ಕಾರಣವಾಗಿದೆ. ಹಿಂದೆ ಇಲ್ಲಿ ತೆಂಗಿನ ಬೆಲ್ಲವನ್ನೂ ತಯಾರಿಸಿ ಮಾರುತ್ತಿದ್ದರು. ಆಗ ಆ ಉದ್ಯಮವೂ ನಶಿಸಿದೆ.ಇಲ್ಲಿ ಎರಡು ದೇವಸ್ತಾನಗಳಿವೆ. ಗಣಪತಿ ದೇವಸ್ತಾನ ಮತ್ತು ಜಟ್ಟಿಗ ದೇವಸ್ತಾನ. ಒಂದು ಗರದಿಯನ್ನೊಳಗೊಂಡು ಕೆಲವು ದೈವದ ಗುಡಿಗಳಿವೆ. ಸುತ್ತಲೂ ಒಮ್ಮೊಮ್ಮೆ ನೆರೆನೀರು ಉಕ್ಕೇರಿದಾಗ ಸುತ್ತಲೂ ಹರಿಯುವ ನದಿಯಿಂದ ಹತ್ಟಿಕುದುರಿಗೆ ಗಂಡಾಂತರ ಒದಗುವುದೂ ಇದೆ. ಆಗ ಇಲ್ಲಿಯ ಜನರು ಹೊಳೆದಾಟಿ ಬಸ್ರೂರಿಗೆ ಬಂದು ಆಶ್ರಯ ಪಡೆಯಬೇಕಾಗುತ್ತದೆ.
ಮಂಡಿಬಾಗಿಲಿನಿಂದ ಹೊಳೆ ದಾಟುವಾಗ ಹೊಳೆಯಲ್ಲಿ ನಿಮಗೆ ಇನ್ನೊಂದು ಅವಶೇಷ ಕಾಣಸಿಗುತ್ತದೆ. ಹೊಳೆಯ ಮಧ್ಯದಲ್ಲಿ ವೃತ್ತಾಕಾರವಾಗಿ ಕಟ್ಟಲ್ಪಟ್ಟ ಕಲ್ಲಿನ ಕತ್ತೆಯೊಂದು ಕಾಣಸಿಗುತ್ತದೆ. ಹಿಂದೆ ವ್ಯಾಪಾರಿ ಹಡಗುಗಳು ಇಲ್ಲಿಗೆ ಬರುತ್ತಿರುವಾಗ ಈ ಕಟ್ಟೆಯ ಮೇಲೆ ದ್ವೀಪಸ್ತಂಭವೊಂದು ಇದ್ದಿರಲೂಬಹುದೆಂಬ ಸಂಶಯ ಬರುತ್ತದೆ. ಹಾಗೆಯೇ ಪೋರ್ಚುಗೀಸರಿಂದ ಕತ್ಟಲ್ಪಟ್ಟಿದೆಯೆಂದು ಹೇಳಲಾಗುವ ಧಕ್ಕೆಯ ಇಕ್ಕೆಲಗಳಲ್ಲಿರುವ ದಂಡೆಗಳು ಮನಮೋಹಕವಾಗಿವೆ. ಚೌಕಾಕಾರದ ಶಿಲೆಯ ಕಲ್ಲುಗಳಿಂದ ಬಹಳ ಸುಂದರವಾಗಿ ಕಟ್ಟಲಾಗಿದೆ.
ನೆನೆವುದೆನ್ನ ಮನಂ ಬಸ್ರೂರು ಪಟ್ಟಣಂ...
೧೪೨೫ ಎಕರೆಯಷ್ಟು ವಿಸ್ತೀರ್ಣದ ಈ ಬಸ್ರೂರು ಬೌದ್ಧ ಧರ್ಮದ ಶಾಖೆಯಾದ ನಾಥಪಂಥದವರು, ಜೈನರು, ಹಿಂದೂಗಳಲ್ಲಿ ವೀರಶೈವಾದಿಯಾಗಿ ಎಲ್ಲ ಜಾತಿಗಳವರು, ಮುಸ್ಲಿಮರು, ಕ್ರೈಸ್ತರು ಮುಂತಾದ ಸರ್ವಧರ್ಮಗಳ, ಸರ್ವಜಾತಿಗಳ ಸಮನ್ವಯತೆ ಇರುವ ಊರಾಗಿತ್ತು. ಹಿಂದೆ ಇಲ್ಲಿ ಪರಸ್ಪರ ಜಗಳಗಳು ಸಾಕಷ್ಟು ನಡೆದಿದ್ದರೂ ಪ್ರಸಿದ್ಧ "ಬಸ್ರೂರ ಪಂಚಾಯತಿಕೆ" ಎಂಬ ಹೊಸ ರಾಜೀ ಸೂತ್ರದಿಂದ ಸಮಸ್ಯೆಗಳನ್ನು ಪರಿಹರಿಸಲಾಗುತ್ತಿತ್ತು. ಯುದ್ಧವಿದ್ಯೆಯಿಂದ ಆರಂಭಿಸಿ, ಸಂಗೀತ, ನೃತ್ಯ, ನಾಟಕ, ಶಿಲ್ಪಕಲೆ, ಚಿತ್ರಕಲೆ, ಗುಡಿಗಾರಿಕೆ ಮುಂತಾದವುಗಳಿಗೆ ಇಲ್ಲಿ ರಾಜಾಶ್ರಯವಿತ್ತು. ಇದು ರಸಿಕರನ್ನು ಆಕರ್ಷಿಸುವ ಕೇಂದ್ರವಾಗಿತ್ತು.ಅರಬ್ಬರ, ಟಿಪ್ಪು ಸುಲ್ತಾನನ, ಮರಾಠರ ಹಾಗೂ ಪೋರ್ಚುಗೀಸರ ದಾಳಿಗೆ ಸಿಕ್ಕಿ ಈ ನಗರ ಜರ್ಜರಿತಗೊಂಡಿದ್ದರೂ ಹಿಂದಿನ ವೈಭವವನ್ನು ಸಾರುವ ಕುರುಹುಗಳು ಇನ್ನೂ ಉಳಿದುಕೊಂಡಿರುವುದು ನಮ್ಮ ಭಾಗ್ಯ. ಇದ್ದ ಅವಶೇಷಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ.
ತಮಿಳರು, ತೆಲುಗರು, ಮಲಯಾಳಿಗಳು, ತುಳುವರು, ಕೊಂಕಣಿಗಳು ಹಾಗೂ ಉರ್ದು ಭಾಷೆಯವರು ಇಲ್ಲಿನ ಕನ್ನಡಿಗರೊಡನೆ ಮಧುರ ಸ್ನೇಹ ಸಂಬಂಧ, ಹೊಂದಿದ್ದಾರೆನ್ನುವುದು ಉಲ್ಲೇಖನೀಯ. ಈಗಲೂ ಆ ಹೆಗ್ಗಳಿಕೆಯನ್ನು ಕನ್ನಡಿಗರು ಕಾಯ್ದುಕೊಂಡಿದ್ದಾರೆ.
ಇಲ್ಲಿನ "ಮಂತ್ರಿಗಳ ಮನೆ" ಎಂದು ಕರೆಯಲ್ಪಡುವ ಮನೆಯೊಂದು ದೇವರ ಕೆರೆ ಮತ್ತು ಹಾಲರ ಕೆರೆಯ ಮಧ್ಯದಲ್ಲಿದೆ. ಕಾಷ್ಟ ಶಿಲ್ಪದ ಸೌಂದರ್ಯವನ್ನು ನೋಡಬೇಕಿದ್ದರೆ ಆ ಮನೆಯನ್ನು ಸಂದರ್ಶಿಸದೆ ಹೋದರೆ ದೊಡ್ಡ ನಷ್ಟವೆನಿಸೀತು. ಈ ಎಲ್ಲ ಕಾರಣಗಳಿಂದಾಗಿ ಬಸ್ರೂರನ್ನು ನೋಡಲು ಬಂದ ಪ್ರವಾಸಿಗರು ಪದೇ ಪದೇ "ನೆನೆವುದೆನ್ನ ಮನಂ ಬಸ್ರೂರು ಪಟ್ಟಣಂ" ಎಂದು ಹೇಳುತ್ತಿದ್ದರು.
-ಶಿವರಾಜ್ ಶೆಟ್ಟಿ