ಪ್ರವಾಸಿಗರ ತಾಣ-ಬಸ್ರೂರು ನಗರ ನೋಡಬನ್ನಿ Part 1
ಬಸ್ರೂರು ಒಂದು ನಗರವೇ?
ಬಸ್ರೂರು ನಗರವೆಂದು ಕೇಳಿದಾಕ್ಷಣ ಯಾರಿಗೂ ಆಶ್ಚರ್ಯವೆನಿಸದೇ ಇರದು. ಆದರೆ ಆಶ್ಚರ್ಯ ಪಡಬೇಕಾಗಿಲ್ಲ. ಹೌದು, ಇದೊಂದು ನಗರವೇ ಆಗಿತ್ತು ಎನ್ನುವುದಕ್ಕೆ ಸಾಕಷ್ಟು ಪುರಾವೆಗಳಿವೆ. ಅವಶೇಷಗಳು ಉಳಿದುಕೊಂಡಿದೆ. ಐತಿಹಾಸಿಕ ನಗರಗಳು ಹೇಗಿದ್ದವು ಎಂಬ ವರ್ಣನೆಗನುಸಾರವಾಗಿಯೇ ಬಸ್ರೂರು ನಗರವೂ ಇದೆ. ಇಲ್ಲಿ ಏಳು ಕೇರಿಗಳಿವೆ; ಏಳು ಕೆರೆಗಳಿವೆ, ಇಪ್ಪತ್ತೇಳು ದೇವಸ್ತಾನಗಳು, ನಲ್ವತ್ತು ದೈವದ ಗುಡಿಗಳು, ನಾಲ್ಕು ಗರಡಿಮನೆಗಳು, ಎರಡು ಮಸೀದಿಗಳು ಹಾಗೂ ಎರಡು ಕ್ರೈಸ್ತ ಪ್ರಾರ್ಥನಾ ಮಂದಿರಗಳಿವೆ; ಎರಡು ಮಠಗಳಿವೆ, ಎರಡು ಅಗ್ರಹಾರಗಳು, ಐದು ಮಾಧ್ಯಮಿಕ ಶಾಲೆಗಳು, ಎರಡು ಪ್ರೌಢಶಾಲೆಗಳು ಹಾಗೂ ಒಂದು ಪ್ರಥಮ ದರ್ಜೆಯ ಕಾಲೇಜು ಇದೆ. ಅಂಚೆ ಕಛೇರಿ, ರಾಷ್ಟ್ರೀಕ್ರತ ಬ್ಯಾಂಕು, ಸಹಕಾರಿ ಸಂಘ, ಟೆಲಿಫೋನ್ ಎಕ್ಸ್‌ಚೇಂಜ್, ಆಸ್ಪತ್ರೆಗಳು, ಪಂಚಾಯತ್ ಕಚೇರಿ, ಈಶ್ವರೀಯ ವಿಶ್ವವಿದ್ಯಾಲಯ ಕೇಂದ್ರ, ಭೀಮಸಂಘ, ಬಳಕೆದಾರರ ವೇದಿಕೆ ಎಲ್ಲವೂ ಇದೆ. ಕೇವಲ ೬ ಕೈಲಾಮೀಟರ್ ಸುತ್ತಳತೆಯ ಈ ಊರಿನಲ್ಲಿ ಇಷ್ಟೆಲ್ಲ ಇವೆಯೆಂದರೆ ಇದೊಂದು ನಗರವಲ್ಲದೆ ಇನ್ನೇನು?ಐತಿಹಾಸಿಕ ಹಿನ್ನೆಲೆ:
ಈ ನಗರ ಐತಿಹಾಸಿಕ ಪ್ರಸಿದ್ಧಿ ಪಡೆದಿದೆಯೆಂದು ಇಲ್ಲಿ ಈಗ ಕಾಣಸಿಗುವ ಸುಮಾರು ೫೦ಕ್ಕೂ ಹೆಚ್ಚಿನ ಶಾಸನಗಳಿಂದ ತಿಳಿದು ಬರುತ್ತದೆ. ಶಾಸನ ಕಲ್ಲುಗಳು ಇಲ್ಲಿನ ದೇವಸ್ಥಾನಗಳ ಪ್ರಕಾರಗಳಲ್ಲೋ, ಮುಖ್ಯ ಘಟನೆ ನಡೆದ ಸ್ಥಳದಲ್ಲೋ ಅಥವಾ ಬೀದಿಯಲ್ಲೋ ನೆಟ್ಟ ಸ್ಥಿತಿಯಲ್ಲಿಯೇ ಕಾಣಬಹುದು. ಕೆಲವು ಶಾಸನಗಳು ಬಟ್ಟೆ ಒಗೆಯುವ ಕಲ್ಲುಗಳಾಗಿ ಅಥವಾ ಮನೆ ಮೆಟ್ಟಿಲುಗಳಾಗಿ ಉಪಯೋಗಿಸಲ್ಪಡುತ್ತಿದ್ದರೆ ಕೆಲವು ಕಲ್ಲುಗಳು ಪೂಜಿಸಲ್ಪಡುತ್ತಿರುವುದನ್ನು ಇಲ್ಲಿ ಕಾಣಬಹುದು. ಶಾಸನ ಕಲ್ಲುಗಳು ದುರುಪಯೋಗವಾಗುತ್ತಿರುವುದನ್ನು ಕಂಡಾಗ ಮನ ನೋಯುವುದು ಸಹಜ.ಹೊರಗಿನವರಿಗೆ ಪುರಪ್ರವೇಶ ಮಾಡಲು ನಾಲ್ಕು ಬಾಗಿಲುಗಳಿದ್ದವೆಂದು ಹೇಳುತ್ತಾರೆ. ನೆಲಮಾರ್ಗದಿಂದ ಬರುವವರಿಗೆ ಎರಡು ಬಾಗಿಲುಗಳು ಜಲಮಾರ್ಗದಿಂದ ಬರುವವರಿಗೆ ಎರಡು ಬಾಗಿಲುಗಳು. ಜಲಮಾರ್ಗವಾಗಿ ಬರುವ ದ್ವಾರಗಳ ಕುರುಹನ್ನು ಈಗಲೂ ಕಾಣಬಹುದು. ಆದರೆ ನೆಲಮಾರ್ಗದ ಕೋಟೆ ಬಾಗಿಲುಗಳ ಕುರುಹುಗಳು ಕಂಡುಬರುವುದಿಲ್ಲ. ಇಲ್ಲಿ ಹೊರಕೋಟೆ ಮತ್ತು ಒಲಕೊಟೆ ಎಂಬ ಎರಡು ಮಣ್ಣಿನಿಂದ ನಿರ್ಮಿಸಿದ ಕೋಟೆ ಇದ್ದಿತೆಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಈ ನಗರದ ಸುರಕ್ಷತೆಗಾಗಿಯೇ ಇಂತಹ ಎರಡೆರಡು ಕೋಟೆಯನ್ನು ಕಟ್ಟಿಸಿರಬಹುದೆಂದು ಉಹಿಸಬಹುದಾಗಿದೆ. ನಗರಕ್ಕೆ ಅಪಾಯದ ಸೂಚನೆ ಕಂಡುಬಂದಾಗ ನಾಲ್ಕೂ ಬಾಗಿಲುಗಳನ್ನು ಭದ್ರಪಡಿಸುತ್ತಿದ್ದರಂತೆ.
ತುಳುನಾಡಿನ ಆಳುಪ ದೊರೆಗಳು, ವಿಜಯನಗರದ ರಾಜವಂಶಸ್ಥರು, ಇಕ್ಕೇರಿಯ ನಾಯಕರು, ತೋಳಹಾರರು ಮುಂತಾದವರು ಈ ನಗರವನ್ನು ಆಳುತ್ತಿದ್ದರೆಂದು ಇಲ್ಲಿನ ಶಾಸನಗಳು ಹೇಳುತ್ತಿವೆ. ಡಚ್ಚರು, ಪೋರ್ಚುಗೀಸರು, ಅರಬರು ಮುಂತಾದವರು ಈ ಊರನ್ನು ವ್ಯಾಪಾರ ಕೇಂದ್ರವಾಗಿ ಮಾಡಿಕೊಂಡಿದ್ದರು ಎನ್ನುವುದಕ್ಕೂ ಇಲ್ಲಿ ಪ್ರತ್ಯಕ್ಷ ಪುರಾವೆಗಳಿವೆ.
ಭೌಗೋಳಿಕ ಪರಿಚಯ:
ಬಸ್ರೂರು ಗ್ರಾಮ ನಕ್ಷೆಯಲ್ಲಿ ಕಾಣಿಸಿದ ಕೋಟೆಯ ಪ್ರದೇಶದ ಉತ್ಟ್ರ ದಿಕ್ಕಿನಲ್ಲಿ ಹರಿಯುತ್ತಿರುವ ವಾರಾಹಿ ನದಿ ಇಡೀ ಗ್ರಾಮವನ್ನೇ ಸೀಳಿಕೊಂಡು ಸಮುದ್ರಾಭಿಮುಖಿಯಾಗಿದೆ. ಪೂರ್ವದಿಂದ ಪಶ್ಚಿಮಕ್ಕೆ ಹರಿಯುವ ಈ ನದಿ ಬಸ್ರೂರು ನಗರಕ್ಕೆ ರಕ್ಷಣೆಯಾಗಿದೆ. ಇದೆ ನದಿಯ ಇನ್ನೊಂದು ಸೀಳು ಹಟ್ಟಿಕುದ್ರು ಎಂಬ ನಡುಗುಡ್ಡೆಯನ್ನು ಸುತ್ತುವರಿದು ಹರಿಯುತ್ತಿದೆ. ವಿಹಾರಾರ್ಥವಾಗಿ ಇಲ್ಲಿಗೆ ಬಂದವರು ಈ ನದಿಯಲ್ಲಿ ದೋಣಿ ಪ್ರಯಾಣ ಮಾಡದಿದ್ದರೆ ಅವರ ಪ್ರವಾಸ ವ್ಯರ್ಥ. ತಂಪಾಗಿ ಬೀಸುವ ಗಾಳಿ, ನೀರವ ವಾತಾವರಣ, ಸತ್ತಾಮುತ್ತಲಿನ ಹಸಿರು ರಾಶಿ, ಕಣ್ಣು ಹಾಯಿಸುವಷ್ಟು ದೂರದ ತನಕವೂ ಫಲಭರಿತ ತೆಂಗಿನ ಮರಗಳ ಸಾಲು- ಇವೆಲ್ಲ ಕವಿಗಳಿಗೆ, ವಿಹಾರಿಗಳಿಗೆ ಮರೆಯಲಾಗದ ಅನುಭವ ನೀಡುತ್ತದೆ. ಕೋಟೆಯ ಹೊರ ಆವರಣದಲ್ಲಿ ಎತ್ತರವಾದ ಬೆಟ್ಟ ಗುಡ್ಡಗಳಿವೆ.(ಹಿಂದೆ ದೊಡ್ಡ ಕಾಡುಗಳೂ ಇದ್ದವು). ಶತ್ರುಗಳು ಸುಲಭವಾಗಿ ಈ ನಗರ ಪ್ರವೇಶಿಸಬಾರದೆಂಬ ಉದ್ದೇಶದಿಂದ, ಪ್ರಾಕ್ರತಿಕ ರಕ್ಷಣೆ ಇರುವ ಈ ಊರನ್ನು ನಗರ ನಿರ್ಮಾಣಕ್ಕಾಗಿ ಆರಿಸಿಕೊಂಡಿರಬಹುದು. ವಾರಾಹಿ ನದಿಯ ಉತ್ತರಕ್ಕೆ ಹಟ್ಟಿಯಂಗಡಿ, ಈಶಾನ್ಯಕ್ಕೆ ಗುಲ್ವಾಡಿ ಇದ್ದರೆ, ಪೂರ್ವದ ಬಳ್ಕೂರು, ಆಘ್ನೆಯದ ಜಪ್ತಿ, ದಕ್ಷಿಣದ ಉಳ್ಳೂರು ಕಂದಾವರ, ಪಶ್ಚಿಮದ ಆನಗಳ್ಳಿ ಗ್ರಾಮಗಳು ಹಿಂದೆ ಬಸ್ರೂರು ವರ್ಗಾವಣೆಗೆ ಸೇರಿದ್ದವು.ಇದು ಅವಳಿ ನಗರವಾಗಿತ್ತೇ?
ಬಸ್ರೂರು ಹಿಂದೆ ಅವಳಿ ನಗರ(ಟ್ವಿನ್ ಸಿಟೀಸ್) ಆಗಿತ್ತು ಎಂದು ಕೆಲವು ಧಾರ್ಮಿಕ ಇತಿಹಾಸಕಾರರು ಅಭಿಪ್ರಾಯ ಪಡುತ್ತಾರೆ. ಭೂಪಟದಲ್ಲಿ ತೋರುವ ಕೋಟೆಯ ಹೊರಗೆ ಪೂರ್ವ ದಿಕ್ಕಿನ ಭಾಗ ಮೂಡುಕೇರಿಯ ಭಾಗವಾಗಿದ್ದು ಇದು ಒಂದು ನಗರವೆಂದೂ, ಕೋಟೆಯ ಒಳಗೆ ಇರುವ ನಗರವಿ ಇನ್ನೊಂದು ನಗರವೆಂದೂ ಹೇಳುತ್ತಾರೆ. ಕೋಟೆಯ ಪೂರ್ವದಿಕ್ಕಿನ ಗೋಡೆಯೇ ಇವೆರಡೂ ನಗರಗಳನ್ನು ಪ್ರತ್ಯೇಕಿಸುವ ಗಡಿಯಾಗಿತ್ತು. ಇಂತಹ ಅವಳಿ ನಗರಗಳ ನಿರ್ಮಾಣ ಏಕಾಯಿತು, ಹೇಗಾಯಿತು, ಇದರ ಹಿನ್ನೆಲೇಯೆನು ಎಂಬುದನ್ನು ಶಾಸನಗಳಿಂದ ತಿಳಿಯಬಹುದು. ಆದರೆ ಈಗ ಇರುವ ನಗರ ರಚನೆಯನ್ನು ಆಧಾರವಾಗಿಟ್ಟುಕೊಂಡು ಹೇಳಬೇಕಾದರೆ ಎರಡೂ ನಗರಗಳಲ್ಲಿ ಒಂದು ಸಾಮ್ಯ ಕಂಡುಬರುತ್ತದೆ. ಮೂಡುಕೇರಿಯೆಂಬ ನಗರದಲ್ಲಿ ಆದಿನಾಥೇಶ್ವರ (ಅಗಸ್ತ್ಯೇಶ್ವರ) ಎಂಬ ಶಿವಾಲಯವಿದ್ದರೆ ಪಡುಕೇರಿಯಲ್ಲಿ ಮಹಾಲಿಂಗೇಶ್ವರ ಎಂಬ ಶಿವಾಲಯ, ಮೂಡುಕೇರಿಯಲ್ಲೊಂದು ತಿರುಮಲ ವೆಂಕಟರಮಣ, ಪಡುಕೇರಿಯಲ್ಲೊಂದು ತಿರುಮಲ ವೆಂಕಟರಮಣ, ಮೂಡುಕೇರಿಯಲ್ಲೊಂದು ರಾಮಚಂದ್ರ, ಪಡುಕೇರಿಯಲ್ಲೊಂದು ರಾಮಚಂದ್ರ, ಮೂಡುಕೇರಿಯಲ್ಲೊಂದು ಗರಡಿ, ಪಡುಕೇರಿಯಲ್ಲೊಂದು ಗರಡಿ, ಮೂಡುಕೇರಿಯಲ್ಲೊಂದು ಅಗ್ರಹಾರವಿದ್ದಂತೆ ಪಡುಕೇರಿಯಲ್ಲೂ ಅಗ್ರಹಾರವಿದೆ. ಆದರೆ ಶ್ರೀದೇವಿ ಅಮ್ಮನವರ ಗುಡಿ ಪಾಡುಕೇರಿಯಲ್ಲಿ ಮಾತ್ರ ಇದೆ. ಈ ದೇವಸ್ಥಾನಕ್ಕೆ ಹರಕೆ ಒಪ್ಪಿಸುವ ಒಂದು ವಿವಾದದಲ್ಲಿ ಮೇಲಿನ ಎರಡು ಕೇರಿಯವಕರೊಳಗೆ ನಡೆದ ಹೊಡೆದಾಟದಲ್ಲಿ ಒಂದೆರಡು ತಲೆಗಳು ಉರುಳಿವೆ ಎಂಬ ಪ್ರತೀತಿ ಇದೆ. ಆಮೇಲೆ ಅವರೊಳಗೆ ನಡೆದ ಒಪ್ಪಂದದ ಫಲವಾಗಿ ದೇವಿ ದೇವಸ್ಥಾನಕ್ಕೆ ಹರಕೆ ಒಪ್ಪಿಸಲು ಆತಂಕವಾಗದ ರೀತಿಯಲ್ಲಿ ಬೇರೊಂದು ರಸ್ತೆಯನ್ನು ನಿರ್ಮಿಸಿಕೊಡಲಾಗಿದೆ ಎಂದು ಪ್ರತೀತಿ ಇದೆ.ಆದರೆ ಈಗ ಹಾಗಿಲ್ಲ. ಮೂಡುಕೇರಿ, ಪಡುಕೇರಿಗಳನ್ನು ಒಂದುಗೂಡಿಸುವ ಒಂದೆರಡು ರಸ್ತೆಗಳಿವೆ. ಯಾವ ಭಿನ್ನಾಭಿಪ್ರಾಯಗಲಿಲ್ಲದೆ ಎಲ್ಲರೂ ಸಾಮರಸ್ಯದಿಂದ ಬಾಳುತ್ತಿದ್ದಾರೆ. ಕಾಶೀಮಠದ ಬಲಬದಿಯಲ್ಲಿ ರಸ್ತೆಯ ಪಶ್ಚಿಮಕ್ಕೆ ತಿರುಗಿಕೊಂಡು ಮೇಲ್ಕೇರಿಯ ರಸ್ತೆಗೆ, ಬಸ್ ಸ್ಟಾಂಡಿನ ಸಮೀಪ, ಕೂಡಿಕೊಂಡಿದೆ. ಈ ರಸ್ತೆಯ ಬಲಬದಿಯಲ್ಲಿ ಬಹಳ ಎತ್ತರವಾದ ಗುಡ್ಡ ಒಂದರ ಮೇಲೆ ಎರಡು ಶಿಕ್ಷಣ ಸಂಸ್ಥೆಗಳಿವೆ. ಅವುಗಳೇ ಹಿಂದೂ ಹಿರಿಯ ಪ್ರಾಥಮಿಕ ಶಾಲೆ ಮತ್ತು ನಿವೇದಿತಾ ಪ್ರೌಢಶಾಲೆ. ಈ ಶಿಕ್ಷಣ ಸಂಸ್ಥೆಗಳಿರುವ ಗುಡ್ಡಕ್ಕೆ 'ಮೇಲ್ ಕಛೇರಿ ಗುಡ್ಡ' ಎಂದು ಹಿಂದೆ ಕರೆಯಲ್ಪಡುತ್ತಿತ್ತು. ಬಹುಶಃ ಬ್ರಿಟಿಷರ ಕಾಲದಲ್ಲಿ ಉನ್ನತ ಅಧಿಕಾರಿಯೊಬ್ಬರ ಕಛೇರಿ ಇದಾಗಿರಬಹುದು. ಅದೇ ಗುಡ್ಡದ ಕೆಳಗೆ ಸುಮಾರು ೧೫೦ ಮೀಟರ್ ದೂರದಲ್ಲಿ ರಸ್ತೆಬದಿಯಲ್ಲಿಯೇ ಸುಮಾರು ೧೮ನೇ ಶತಮಾನದ ಬಾವಿಯೊಂದಿದೆ. ಇದಕ್ಕೆ ಮನ್ರೋಬಾವಿಯೆಂದು ಹೆಸರು. ಇಷ್ಟು ಅಗಲದ ಹಾಗೂ ಸುಂದರವಾಗಿ ಕಲ್ಲು ಕಟ್ಟಿದ ಬಾವಿ ಆಗಿನ ಕಾಲದಲ್ಲಿ ಈ ಊರಲ್ಲಿ ಎಲ್ಲೂ ಇರಲಿಲ್ಲ. ಬ್ರಿಟಿಷರ ಆಡಳಿತಾಧಿಕಾರಿಯಾಗಿದ್ದ ಮನ್ರೋ ದೊರೆಯೇ ಇದನ್ನು ಕಟ್ಟಿಸಿರಬಹುದು. ಮನ್ರೋ ಬಾವಿಯ ಹತ್ತಿರವೇ ಬಾಸೆಲ್ ಮಿಶನ್ ಪ್ರಾಥಮಿಕ(ಬಿ.ಎಂ) ಶಾಲೆ ಇದೆ. ಬಸ್ರೂರಿನಲ್ಲಿ ಪ್ರಾರಂಭಿಸಲಾದ ಶಾಲೆಗಳಲ್ಲಿ ಮೊಟ್ಟ ಮೊದಲ ಶಾಲೆ ಇದಾಗಿತ್ತು. ಪ್ರಾಟೆಸ್ಟೆಂಟ್ ಮಿಷನರಿಗಳು ಬಸ್ರೂರನ್ನು ಆ ಕಾಲದಲ್ಲಿ ತಮ್ಮ ಮತ ಪ್ರಚಾರ ಕೇಂದ್ರವನ್ನಾಗಿ ಮಾಡಿಕೊಂಡಿದ್ದರು. ಅವರು ಮಿಶನ್ ಶಾಲೆಗಳನ್ನು ಸ್ಥಾಪಿಸಿದರಲ್ಲದೆ, ಒಂದು ಪ್ರಾಟೆಸ್ಟೆಂಟ್ ಪ್ರಾರ್ಥನಾ ಮಂದಿರವನ್ನು ಕಟ್ಟಿಸಿದರು. ಇದಕ್ಕೆ ಎಲಿಜ಼ಬೆತ್ ದೇವಾಲಯವೆಂದು ಹೆಸರು. ಬಸ್ರೂರಿನ ಪೂರ್ವ ದಿಕ್ಕಿನಲ್ಲಿರುವ ಗುಡ್ಡದ ಮೇಲೆ ಇದನ್ನು ಕಾಣಬಹುದು. ಇದರ ಹತ್ತಿರದಲ್ಲಿಯೇ ಒಂದು ಭವ್ಯವಾದ ಬಂಗಲೆಯೂ ಇದ್ದಿತ್ತು. ಈಗ ಈ ಬಂಗಲೆಯಿದ್ದ ಜಾಗದಲ್ಲಿ ಸರಕಾರಿ ಹೈಸ್ಕೂಲ್ ಇದೆ. ಇದೆ ಪರಿಸರದಲ್ಲಿ ಸುಮಾರು ಹತ್ತಿಪ್ಪತ್ತು ಪ್ರಾಟೆಸ್ಟೆಂಟ್ ಕುಟುಂಬಗಳು ಈಗಲೂ ವಾಸಿಸುತ್ತಿವೆ.
ಮಿಶನ್ ಶಾಲೆಯ ಪಕ್ಕದಲ್ಲಿಯೇ ಪೋಸ್ಟ್ ಆಫೀಸ್, ಆಸ್ಪತ್ರೆ, ಸಹಕಾರಿ ಸಂಘ ಹಾಗೂ ಸಿಂಡಿಕೇಟ್ ಬ್ಯಾಂಕ್ ಕಛೇರಿಗಳಿವೆ. ಸಿಂಡಿಕೇಟ್ ಬ್ಯಾಂಕಿನ ಎಡಗಡೆ ಇರುವುದೇ ಶ್ರೀ ಗೋಕರ್ಣ ಪರ್ತಗಾಳಿ ಮಠ.
ಬಸ್ರೂರು ಬಸ್ ಸ್ಟಾಂಡಿನ ಉತ್ತರಕ್ಕೆ ನೇರವಾಗಿ ಬಸದಿಕೇರಿಗೆ ಹೋಗುವ ರಸ್ತೆಯೊಂದು ಕೆಲವು ವರ್ಷಗಳ ಹಿಂದೆ ನಿರ್ಮಾಣವಾಗಿದೆ. ಹಿಂದೆ ಇದು ಕಾಲುದಾರಿಯಾಗಿತ್ತು. ಈ ರಸ್ತೆಯ ಬದಿಯಲ್ಲಿಯೇ ಬಸ್ರೂರು ಪಂಚಾಯತ್ ಕಛೇರಿ ಮತ್ತು ವಿಹಾರ ಸ್ಥಳವಿದೆ.
-ಶಿವರಾಜ್ ಶೆಟ್ಟಿ.