Header Ads

ಗರ್ ಗರ್ ಮಂಡ್ಲ ಸೂಪರ್ ಹಿಟ್

 ಗರ್ ಗರ್ ಮಂಡ್ಲ ಸೂಪರ್ ಹಿಟ್




         ಕುಂದಾಪ್ರ ಕನ್ನಡದ ಮೊದಲ ಕಮರ್ಷಿಯಲ್ ಚಿತ್ರ ಗರ್ ಗರ್ ಮಂಡ್ಲ ನಿರೀಕ್ಷೆ ಮೀರಿ ಯಶಸ್ಸು ಗಳಿಸಿದೆ. ಉಗ್ರಂ ಚಿತ್ರದ ಸಂಗೀತ ನಿರ್ದೇಶಕ ರವಿ ಬಸ್ರೂರ್ ನಿರ್ದೇಶನದ ಈ ಚಿತ್ರಕ್ಕೆ ಜನರು ಗಾಳಿ ಮಳೆಯನ್ನು ಲೆಕ್ಕಿಸದೆ ಚಿತ್ರಮಂದಿರದತ್ತ ಮುನ್ನುಗ್ಗುತ್ತಿದ್ದಾರೆ. ಜನರನ್ನು ನಿಯಂತ್ರಿಸಲಾಗದೆ ಪೊಲೀಸರು ಲಾಠಿ ಚಾರ್ಜ್ ಕೂಡ ಮಾಡಿದ್ದರು. ಟಿಕೆಟ್ ಸಿಗದ ಅದೆಷ್ಟೋ ಜನರು ಬೇಸರಗೊಂಡರೂ, ಚಿತ್ರ ತಂಡದ ಮನವಿಗೆ ಓಗೊಟ್ಟು ಮತ್ತೆ ಚಿತ್ರ ಮಂದಿರದತ್ತ ಹೆಜ್ಜೆ ಹಾಕಿ ಚಿತ್ರ ವೀಕ್ಷಿಸುತ್ತಿದ್ದಾರೆ.  ಗರ್ ಗರ್ ಮಂಡ್ಲ ಕುಂದಾಪುರದಾದ್ಯಂತ ಜನರ ಮೆಚ್ಚುಗೆ ಗಳಿಸಿ ಮುನ್ನುಗ್ಗುತ್ತಿದೆ. ಕುಂದಾಪುರ ಹಾಗೂ ಬೈಂದೂರಿನಲ್ಲಿ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ನೀಡುತ್ತಿದ್ದು, ಎಲ್ಲೆಡೆ ಹೊಸ ಸಂಚಲನ ಮೂಡಿಸುವುದರೊಂದಿಗೆ ದಾಖಲೆ ಬರೆದಿದೆ. ಉತ್ತಮ ಕಲ್ಲೇಕ್ಷನ್ ಚಿತ್ರ ತಂಡದಲ್ಲಿ ಸಂತಸ ಮೂಡಿಸಿದೆ. ಮುಂದೆ ಇನ್ನಷ್ಟು ಚಿತ್ರಗಳನ್ನು ಮಾಡುವ ಹೊಸ ಹುರುಪು ಎದ್ದು ಕಾಣಿಸುತ್ತಿದೆ. ಚಿತ್ರದಲ್ಲಿ ಆದರ್ಶ್ ಹೆಗ್ಡೆ ಮತ್ತು ಶಮಿತ್ ಹೆಗ್ಡೆ ಅವರ ಕಾಂಬಿನೇಶನ್ ವರ್ಕೌಟ್ ಆಗಿದೆ. ರಘು ಪಾಂಡೇಶ್ವರ ಅವರ ಹಾಸ್ಯ, ರವಿ ಬಸ್ರೂರ್ ಅವರ ಸಂಗೀತ ಮತ್ತು ನಿರ್ದೇಶನ, ಕಲಾವಿದರೆಲ್ಲರ ನಟನೆ ಅದ್ಭುತವಾಗಿ ಮೂಡಿ ಬಂದಿದೆ. ಇಡೀ ತಂಡದ ಪರಿಶ್ರಮ ಇಲ್ಲಿ ಎದ್ದು ಕಾಣುತ್ತದೆ.
       ಜನರ ಪ್ರೀತಿ-ವಿಶ್ವಾಸಕ್ಕೆ ಬೆರಗಾಗಿರುವ ರವಿ ಬಸ್ರೂರ್ ಅವರ ಕಣ್ಣುಗಳು ಆನಂದ ಭಾಷ್ಪದಿಂದ ತೇವಗೊಂಡಿದೆ. ಈ ಬಗ್ಗೆ ಸ್ಥಳೀಯ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನ ಇಲ್ಲಿದೆ:




       "ಹೌದು ಚಿತ್ರ ಗೆದ್ದಿದೆ. ದಿನೇ ದಿನೇ ಜನ ಜಾತ್ರೆ ನಮ್ಮ ನಿರೀಕ್ಷೆಯನ್ನು ಮೀರಿಸಿ ನಮ್ಮಲ್ಲಿ ಹೊಸ ಚೈತನ್ಯ  ಮೂಡಿಸುತ್ತಿದೆ. ನಮ್ಮ ಪ್ರೀತಿಗಿಂತ ನೂರು ಪಟ್ಟು ಹೆಚ್ಚಿನ ಪ್ರೀತಿ ಅಭಿಮಾನಿಗಳು ತೋರಿಸಿದ್ದಾರೆ. ಈ ಊರಿನ ಹುಡುಗನಾದ ನನಗೆ ಅವರ ಮನೆ ಮಗನಂತೆ ಆಶೀರ್ವಾದ ಮಾಡಿದ್ದಾರೆ. ಎಲ್ಲರಿಗೂ ನಾನು ಜೀವಮಾನವಿಡೀ ಚಿರಋಣಿಯಾಗಿರುತ್ತೇನೆ. ಕುಂದಾಪುರದ ಮಣ್ಣು ನನಗೆ ನಿಜಕ್ಕೂ ಪವಿತ್ರ. ನನ್ನ ಸಾಧನೆಗೆ ಬೆನ್ನು ತಟ್ಟಿ ಆಶೀರ್ವಾದ ಮಾಡಿದ ಎಲ್ಲ ಮಹಾಜನತೆಗೆ ತಲೆಬಾಗಿ ನಮಸ್ಕರಿಸುತ್ತೇನೆ.
         ಚಿತ್ರ ಬಿಡುಗಡೆಗೆ ಮುನ್ನ ಇದ್ದ ಆತಂಕ, ಭಯ ಇದೀಗ ದೂರವಾಗಿದೆ. ಮುಂದೆ ಚಿತ್ರ ನಿರ್ಮಾಣಕ್ಕೆ ಉತ್ಸಾಹ ಮೂಡಿದೆ. ಮುಂದೆ ಇನ್ನೂ ಹೆಚ್ಚಿನ ಸಾಧನೆಗಾಗಿ ಪ್ರಯತ್ನಪಡುತ್ತೇನೆ. ನಿಮ್ಮೆಲ್ಲರ ಆಶೀರ್ವಾದ, ಸಲಹೆ ನಮ್ಮ ಜೊತೆಗಿರಲಿ. ಬೆಂಬಲಿಸಿದ, ಸಹಕರಿಸಿದ ಎಲ್ಲಾ ಮಿತ್ರರಿಗೆ, ಹಿತೈಷಿಗಳಿಗೆ, ಪತ್ರಿಕಾ ಮಾಧ್ಯಮದವರಿಗೂ ಥ್ಯಾಂಕ್ಸ್."


        ಒಟ್ಟಿನಲ್ಲಿ ರವಿ ಬಸ್ರೂರ್ ಮತ್ತವರ ತಂಡದ ಕುಂದಾಪ್ರ ಕನ್ನಡದ ಪ್ರೀತಿ ಮೆಚ್ಚುವಂತಹದ್ದು. ಅವರ ಅಭಿಮಾನ ಮತ್ತು ಪ್ರೀತಿ ನಮ್ಮ ಕುಂದಾಪ್ರ ಕನ್ನಡದ ಮೇಲೆ ಸದಾ ಇರಲಿ, ಮುಂದೆ ಇನ್ನಷ್ಟು ಚಿತ್ರಗಳನ್ನು ನೀಡಿ ನಮ್ಮ ಭಾಷೆಯ ಅಭಿವ್ರದ್ಧಿಗೆ ಶ್ರಮಿಸಲಿ ಎಂದು ಹಾರೈಸೋಣ.





-ಶಿವರಾಜ್ ಶೆಟ್ಟಿ.

No comments

Theme images by sndr. Powered by Blogger.