Header Ads

ವಿಚಾರ ನೆನೆಪುಗಳ ಬೆಳಕಿಂಡಿ - ಡಾ| ಕೋಟ ಶಿವರಾಮ ಕಾರಂತ

Basrurವಿಚಾರ ನೆನೆಪುಗಳ ಬೆಳಕಿಂಡಿ
ಡಾ| ಕೋಟ ಶಿವರಾಮ ಕಾರಂತ 
   
       ಬಸ್ರೂರು ನಮ್ಮ ಜಿಲ್ಲೆಯ ಪಾಲಿಗೆ ಪೂರ್ವ ಪರಂಪರೆಯ ಹಲವು ದೇವಸ್ಥಾನಗಳುಳ್ಳ ಊರು. ನದಿ ತೀರದ ಈ ಊರಲ್ಲಿ ಮೊದಲು ಹಲವಾರು ಜೈನ ದೇಗುಲಗಳಿದ್ದವು. ಹತ್ತನೇ ಶತಮಾನದ ಮೊದಲು ಈ ಪ್ರದೇಶದಲ್ಲಿ ಬೌದ್ಧ ಧರ್ಮವೂ ಹಬ್ಬಿಕೊಂಡಿತ್ತು. ಆಮೇಲೆ ಪಂಜಾಬು ಕಡೆಯಿಂದ ಬಂದ ನಾತಪಂಥೀಯ ಶ್ರದ್ಧಾಳುಗಳು, ಆ ದೇಗುಲಗಳನ್ನೇ ಹಿಂದೂ ದೇಗುಲಗಳಾಗಿ ಪರಿವರ್ತಿಸಿದರು. ಮೊದಲ ಕಾಲದ ಹಲವಾರು ದೇಗುಲಗಳು, ಮುಂದೆ ಹಿಂದೂ ಧರ್ಮದ ದೇವರ ಮಂದಿರಗಳಾದವು. ಇವನ್ನೆಲ್ಲ ಅಧ್ಯಯನ ಮಾಡಲು ಹಳೆಗಾಲದ ಯಾವತ್ತು ಶಾಸನಗಳನ್ನು ಓದಬೇಕಾದೀತು. ಈ ಪ್ರದೇಶದ ಪೂರ್ವಕತೆ ಬೇಕಿದ್ದರೆ "ಕೆಳದಿನೃಪ ವಿಜಯ" ಎಂಬ ಪುರಾತನ ಗ್ರಂಥವನ್ನು ಪರಿಶೀಲಿಸಿದರೆ ಅಂದಿನ ವಿಶಿಷ್ಟ ರೀತಿಯ ಪರಿಚಯ ದೊರಕೀತು.
      ಅದೇ ರೀತಿ ಮುಂದೆ ಈ ಊರಿಗೆ ದೂರದ ಹಡಗುಗಳು ಬರುತ್ತಿದ್ದುದರಿಂದ ಪೋರ್ಚುಗೀಸ್ ಪ್ರವಾಸಿಗರು ಬರತೊಡಗಿದರು. ಅವರನ್ನು ಓಡಿಸಿದ ಬ್ರಿಟೀಷರು ಬರತೊಡಗಿದರು. ಹೀಗಾಗಿ ಮುಂದಣ ಅವಧಿಯ ಪೋರ್ಚುಗೀಸ್ ಮತ್ತು ಈಸ್ಟ್ ಇಂಡಿಯಾ ದಾಖಲೆಗಳಲ್ಲಿ ಬುಕಾನಾನಂತ ಪ್ರವಾಸಿಗಳ ಬರಹಗಳನ್ನು ಓದಬೇಕಾದೀತು. ಅಷ್ಟು ಹಿಂದೆಯೇ ನೇಪಾಳಕ್ಕೂ ಈ ಊರಿಗೂ ಸಂಬಂಧ ಇತ್ತು. ನೇಪಾಳದ ಪಶುಪತಿನಾಥ ದೇಗುಲದ ಅರ್ಚಕರು ನಿನ್ನೆ ಮೊನ್ನೆಯ ತನಕ ಬಸ್ರೂರು ಪ್ರದೇಶದವರು. ಆದುದರಿಂದ ಇಂಥ ಕೆಲಸ ಮಾಡಲು ಬಸ್ರೂರು ಮಾತ್ರವಲ್ಲ ಕೊಲ್ಲೂರು, ಶಂಕರ ನಾರಾಯಣ, ನೇಪಾಳದ ತನಕ ನಿಮ್ಮ ಅಧ್ಯಯನ ಸಾಗಬೇಕು. ಇದು ಶಾಸನಗಳ ಮೂಲಕ ಚದುರಿ ಬಿದ್ದ ಚಾರಿತ್ರಿಕ ದಾಖಲೆಗಳ ಮೂಲಕ.
       ಕೆಳದಿ ಅರಸರ [ಪ್ರಭುತ್ವದಲ್ಲಿ ನಮ್ಮ ಶಂಕರನಾರಾಯಣ ಹಲ್ಸನಾಡು, ಕೊಳಗಿರಿ ಊರುಗಳ ಶ್ರೀಮಂತ ಮನೆತನದವರು ಆಡಳಿತದಲ್ಲಿ ರಾಯಭಾರಿಗಳಂತೆ ಈಗಿನ (ಅವಿಭಜಿತ) ದಕ್ಷಿಣ ಕನ್ನಡದ ಉತ್ತರಾರ್ಧದಲ್ಲಿ ಅಧಿಕಾರಿಗಳಾಗಿದ್ದರು. ಕೆಳದಿನೃಪ ವಿಜಯದಲ್ಲಿ ಅವರುಗಳ ಸವಿಸ್ತಾರ ಮಾಹಿತಿ ಸಿಗುತ್ತದೆ.
       ಈ ಅವಧಿಯಲ್ಲಿ ಬಸಪ್ಪ ನಾಯಕ ಮತ್ತು ಚಂದ್ರಶೇಖರ ನಾಯಕರು ಬಿದಿರೆ(ನಗರ-ಕೆಳದಿ)ಯನ್ನು ಆಳುವಾಗ ಅನೇಕ ಯಕ್ಷಗಾನ ಪ್ರಸಂಗಕರ್ತರಿದ್ದರು. ಹನುಮಾದ್ರಾಮಾಯಣವೆನ್ನುವ ಕಾವ್ಯ ರಚನೆಯಾಗಿತ್ತು.
       ಬಸ್ರೂರು ಹಿಂದೆ ವ್ಯಾಪಾರಿ ಹಡಗುಗಳು ಬಂದು ಹೋಗುವ ರೇವು ಆಗಿತ್ತು. ಕಾಲಕ್ರಮದಲ್ಲಿ ಇಲ್ಲಿನ ನದಿಗಳು ಹೊತ್ತುತಂದ ಮಣ್ಣು ಹರಡಿ ಅನೇಕ ಕುದುರುಗಳು ಆದವು. ಹಡಗುಗಳು ಗಂಗೊಳ್ಳಿಗಿಂತ ಮುಂದೆ ಬರದಾದವು.
       ೧೮೫೦ರ ಸುಮಾರಿಗೆ ನಮ್ಮ ಕರಾವಳಿ ಮಂಗಳೂರಿನಿಂದ ಹೊನ್ನಾವರದ ತನಕ ಎಷ್ಟೆಲ್ಲ ಕಾದಾಟಗಳಿಗೆ ಗುರಿಯಾಯಿತು ಎಂಬುದು ತಿಳಿಯುತ್ತದೆ. ನಮ್ಮ ಶಂಕರನಾರಾಯಣ, ಬ್ರಹ್ಮಾವರ, ಹಲಸನಾಡು, ಕೊಳಲಗಿರಿಯ ಪ್ರಬಲರಾದವರು ನಗರ ಸಂಸ್ಥಾನದ ಆಡಳಿತೆಯಲ್ಲಿ ಭಾಗವಹಿಸುತ್ತಿದ್ದ ವಿವರಗಳು ಸಿಗುತ್ತವೆ.
************
      ಗಾಂಧೀಜಿ ಖಾದಿ ಉತ್ಪನ್ನವನ್ನು ಬೋಧಿಸಿದರು. ಇವರು ರಾಟೆಯಿಂದ ನೂತು ಮಾಡಿದ ನೂಲಿನಿಂದ ಮಾಡಿದ ಬಟ್ಟೆಯನ್ನು ಬಳಸಬೇಕು, ಗಿರಣಿ ಅರಿವೆಯಣ್ನಲ್ಲ ಎಂದರು. ಆ ಕಾಲಕ್ಕೆ ನಾನು ಕುಂದಾಪುರದಲ್ಲಿದ್ದು ರಾಟೆ(ಚರಕ) ಸಹಾಯದಿಂದ ನೂಲು ಮಾಡಲು ಕಳಿಸುತ್ತಿದ್ದೆ. ಅದನ್ನು ನೇಯಲು ಕುಂದಾಪುರದಲ್ಲಿ ನೇಕರರಿರಲಿಲ್ಲ. ಬಸ್ರೂರಿನಲ್ಲಿ ಆ ದಿನಗಳಲ್ಲೂ ಕೆಲವರು ಗುಳೀಮಗ್ಗದಲ್ಲಿ ಪಂಚೆ, ಸೀರೆ ನೇಯುತ್ತಿದ್ದರು. ಅವರನ್ನು ನಾನು ಪಡೆಯಲು ಅನುಕೂಲವಾದ ಗೆಳೆಯ- ಬಸ್ರೂರು ಸಂಕಯ್ಯ ಶೆಟ್ತರೆಂಬವರ ಮನೆಯ ಸೂರಪ್ಪ ಶೆಟ್ಟಿ. ಅವನು ನನ್ನ ಹೈಸ್ಕೂಲು ಸಹಪಾಟಿ. ಹೀಗಾಗಿಯೇ ಅವನ ನೆರವಿನಿಂದ  ನಾನು ಸಂಗ್ರಹಿಸಿದ ನೂಲನ್ನು ಅರಿವೇ ಮಾಡಿಸಿ ತಂದು ಮಾರುತ್ತಿದ್ದೆ.
************
      ಮೈಮನಗಳ ಸುಳಿಯಲ್ಲಿ - ಗಂಡು ಹೆಣ್ಣಿನ ನಿಕಟ ಸಂಬಂಧಗಳನ್ನು ವಿವರಿಸುವ ಒಂದು ಬರಹ. ಹೀಗಾಗಿ ಹಿಂದಣ ದಿನಗಳಲ್ಲಿ ಇಲ್ಲಿನ ವೇಶ್ಯಕುಲದವರು ನೃತ್ಯ, ನಾಟಕ, ಸಂಗೀತಾದಿಗಳನ್ನು ಕಲಿತವರಾದುದರಿಂದ ನಾಟಕ ಕಂಪೆನಿಗಳ ಪಾತ್ರವಾದರೂ, ತಾವೇ ನಾಟಕ ಕಂಪೆನಿ ನಡೆಯಿಸಿದರು. ಅಂಥವರ ಜೀವನ ಸುಖಲೋಲುಪತೆಯಿಂದ ಭಿನ್ನವಾದ ಗಣನೀಯವಾದ ನೈತಿಕ ಸಂಬಂಧವನ್ನು ಪ್ರಕಟಿಸಿದ್ದನ್ನು ಕಾಣಬಹುದು.
------------

ಆಧಾರ: ಹೆಸರಾದ ಪಟ್ಟಣ- ಬಸ್ರೂರು. ಒಂದು ಅಧ್ಯಯನ.

No comments

Theme images by sndr. Powered by Blogger.