Header Ads

ನಡೆದಷ್ಟೂ ನಾಡು: ಹಂಪಿ ಟು ಬಸ್ರೂರು ಭಾಗ-2


ನಡೆದಷ್ಟೂ ನಾಡು: ಹಂಪಿ ಟು ಬಸ್ರೂರು  ಭಾಗ-2


       ವಿಲಾಸ ಕೇರಿಯ ಹೊಳೆದಡಕ್ಕೆ ಬಂದೆ. ಸಾಮಾನ್ಯವಾಗಿ ವ್ಯಾಪಾರಿ ಕೇಂದ್ರಗಳು ವಿಲಾಸದ ತಾಣಗಳೂ ಆಗುತ್ತವೆ. ವಿಜಯನಗರದ ಸೂಳೆಬಜಾರು ಸಿರಿವಂತ ಗಣಿಕೆಯರ ಜಾಗವಾಗಿತ್ತು. ಉತ್ತರ ಕರ್ನಾಟಕದ ವ್ಯಾಪಾರಿ ಪಟ್ಟಣವಾದ ಲಕ್ಷ್ಮೇಶ್ವರವೂ ಸಾನಿಗಳಿಗೆ ಖ್ಯಾತವಾಗಿತ್ತು. ತಂಬಾಕು ವ್ಯಾಪಾರ ಕೇಂದ್ರವಾದ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯು ವಿಲಾಸಿನಿಯರಿಗೂ, 'ತಮಾಶಾ' ಎಂಬ ಕಲಾಪ್ರಕಾರಕ್ಕೂ ಹೆಸರಾಗಿತ್ತು ಎಂದು ಜಾನಪದ ವಿದ್ವಾಂಸರಾದ ಮುದೇನೂರ ಸಂಗಣ್ಣನವರು ಹೇಳುತ್ತಿದ್ದರು. ಬಸ್ರೂರಿಗೆ ಬಂದಿಳಿಯುತ್ತಿದ್ದ ವಣಿಕರು ಮತ್ತು ನಾವಿಕರು, ಹಡಗು ಸರಕು ತುಂಬಿಕೊಂಡು ಹೊರಡುವ ತನಕ ಈ ಕೇರಿಯಲ್ಲಿ ನಡೆಸುತ್ತಿದ್ದ ವಿಲಾಸದ ಬಗ್ಗೆ ಕಾರಂತರು, ತಮ್ಮ ಕಾದಂಬರಿಯ ಮೊದಲ ಭಾಗದಲ್ಲಿ ಚಾರಿತ್ರಿಕ ವಿಶ್ಲೇಷಣೆ ಮಾಡುತ್ತಾರೆ. ವಿಶೇಷವೆಂದರೆ, ಈ ವಿಲಾಸವು ಗಣ್ಯರಿಗೆ ಮಾತ್ರ ಮೀಸಲಾಗಿತ್ತು. ಪ್ರಾಚೀನ ಕಾವ್ಯಗಳ ಅಷ್ಟಾದಶ ವರ್ಣನೆಗಳಲ್ಲಿ ಬರುವ ವೇಶ್ಯಾವಾಟಿಕೆಯ ವರ್ಣನೆಯಲ್ಲಿ, ರಾಜಕುಮಾರರು ಇಂತಹ ಕೇರಿಗಳಲ್ಲಿ ವಿಹರಿಸುವ ಚಿತ್ರಗಳಿವೆಯಷ್ಟೆ. ಮಂಜುಳೆಯ ಮನೆಗೆ ಬರುವವರು ಕೂಡ ಸಾಮಾನ್ಯರಲ್ಲ. ಸಿರಿವಂತರು. ಆದರೆ ಇಲ್ಲಿನ ವಿಲಾಸದಲ್ಲಿ ಕೇವಲ ಮೈಸುಖ ಮಾತ್ರ ಇರಲಿಲ್ಲ; ಮನಸ್ಸನ್ನು ಅರಳಿಸುವ ಶ್ರೇಷ್ಠವಾದ ಸಂಗೀತ ನೃತ್ಯವೂ ಕೂಡ ಇರುತ್ತಿತ್ತು. ಮಂಜುಳೆ ಕೇವಲ ಗಣಿಕೆಯಲ್ಲ. ಅವಳಿಗೆ ಕಲೆಯ ಲೋಕವೂ ಇದೆ. ಇದೇ ಗಣಿಕೆಯರ ಲೋಕದಿಂದ- ಲಖನೌದ ಉಮ್ರೋವ್‌ಜಾನಳಿಂದ ಹಿಡಿದು ಬೆಂಗಳೂರು ನಾಗರತ್ಮಮ್ಮನವರ ತನಕ- ಭಾರತದ ದೊಡ್ಡದೊಡ್ಡ ಗಾಯಕರು ನರ್ತಕರು ಮೂಡಿಬಂದರು. ಆದರೆ ವ್ಯಾಪಾರ ಮತ್ತು ವಿಲಾಸದ ಊರುಗಳು, ಸರಕುಗಳ ಜತೆ ಅನೇಕ ರೋಗಗಳನ್ನೂ ಆಮದು ಮಾಡಿಕೊಳ್ಳಬೇಕಾಗುತ್ತವೆ ಎಂಬ ಕಹಿಸತ್ಯವನ್ನು ಹೇಳಲು ಕಾರಂತರು ಮರೆಯುವುದಿಲ್ಲ.
Rahamat Tarikere at Basrur
Rahamat Tarikere


        ವಿಲಾಸಕೇರಿಯ ಬಂದರುಗಟ್ಟೆ ದಡಕುಸಿಯದೆ ಗಟ್ಟಿಮುಟ್ಟಾಗಿದೆ. ಪಾವಟಿಗೆಯ ಕಲ್ಲಚಪ್ಪಡಿಗಳು ಮಾತ್ರ ಜರುಗಿ ಹೋಗಿವೆ. ಹಿಂದೆ ಹೊಳೆ ಆಳವಾಗಿ ಹರಿಯುತ್ತಿರಬೇಕು. ಈಗ ಅದರ ತಲೆಯ ಮೇಲೆ ಅಣೆ ಕಟ್ಟಲಾಗಿದೆ; ದಡದ ಆಸುಪಾಸಿನ ಕಾಡನ್ನು ಕಡಿತಲೆ ಮಾಡಿ ಸಾಗುವಳಿ ಮಾಡಲಾಗಿದೆ. ಹೀಗಾಗಿ ಮಣ್ಣು ಜರಿದು, ಹೊಳೆ ಹೂಳುತುಂಬಿ ದಿಕ್ಕೆಟ್ಟು ಹರಿಯುತ್ತ, ನಡುವೆ ಹೊಸ ಕುದುರುಗಳನ್ನು ನಿರ್ಮಿಸಿದೆ. ಕೆಲವು ಕುದುರುಗಳಲ್ಲಿ ರೆಸಾರ್ಟುಗಳು ಆರಂಭವಾಗಿವೆ. ಹೊಳೆಯಲ್ಲಿ ಮೀನುಗಾರಿಕೆಗೆ ಬದಲು, ತಳದಲ್ಲಿರುವ ಹೊಯಿಗೆಯನ್ನು ಎತ್ತಿ ದೂರದ ನಗರಗಳಿಗೆ ಕಳಿಸುವ ಹೊಸ ದಂಧೆ ಶುರುವಾಗಿದೆ. ಕಾಲ ಬದಲಾದಂತೆ, ಬಸ್ರೂರಿನ ವಿಲಾಸ ಮತ್ತು ವ್ಯಾಪಾರದ ಪರಿಯೂ ಬದಲಾಗಿದೆ.

        ವ್ಯಾಪಾರಿ ಚಟುವಟಿಕೆಗಳಿಂದ ಶೇಖರವಾಗುವ ಸಂಪತ್ತು ಕಲಾಕಾರರಿಗೆ ಆಶ್ರಯ ಕಲ್ಪಿಸುವಂತೆ, ಧಾರ್ಮಿಕ ಚಟುವಟಿಕೆಗಳಿಗೂ ಪ್ರೇರಣೆ ಒದಗಿಸುತ್ತದೆ. ಬಸ್ರೂರಿನ ಜತೆ ವ್ಯಾಪಾರ ಸಂಬಂಧವಿದ್ದ ಹಂಪಿ, ಲಕ್ಷ್ಮೇಶ್ವರ, ಐಹೊಳೆಗಳು ಗುಡಿಗಳು ತುಂಬಿದ ಊರುಗಳೂ ಆಗಿವೆ; ಹಂಪಿಯ ಪ್ರಮುಖ ಗುಡಿಗಳ ಮುಂದೆ ಕಡ್ಡಾಯವಾಗಿ `ಬಜಾರು~ಗಳಿರುವುದು ಗಮನಾರ್ಹ. ಬಸ್ರೂರಿನ ಪ್ರಸಿದ್ಧ ನಖರೇಶ್ವರ ಗುಡಿಯನ್ನು (ನಖರ=ವ್ಯಾಪಾರಿ ಸಂಘ) ಇಲ್ಲಿದ್ದ ಶೈವ ವ್ಯಾಪಾರಿಗಳು ಕಟ್ಟಿಸಿದರು. ಇಲ್ಲಿದ್ದ ಪ್ರಾಚೀನ ಮಸೀದಿಯನ್ನು `ಹಂಜಮಾನ~ (ಅರಬ್ ವ್ಯಾಪಾರಿಗಳ ಸಂಘ) ನಿರ್ಮಿಸಿದ್ದು. ಇಲ್ಲಿನ ಪ್ರಾಚೀನ ಚರ್ಚು ಕೂಡ ಯೂರೋಪಿನ ನಾವಿಕರು ಹಾಗೂ ವ್ಯಾಪಾರಿಗಳಿಗಾಗಿ ಕಟ್ಟಿದ್ದೆಂದು ತೋರುತ್ತದೆ.

         ಎಲ್ಲ ವ್ಯಾಪಾರ ವಹಿವಾಟು ನಿರ್ವಹಿಸುವುದಕ್ಕೆ ರಾಜಕೀಯ ಅಧಿಕಾರ ಹುಟ್ಟಿಕೊಳ್ಳುತ್ತದೆ. ಈ ವ್ಯಾಪಾರ ಮತ್ತು ಅಧಿಕಾರಗಳಲ್ಲಿ ಸದಾ ಇರುವ ಅನಿಶ್ಚಿತತೆ ಮತ್ತು ಅಭದ್ರತೆಯಿಂದ ಪಾರಾಗಲು ವರ್ತಕರಿಗೂ ಅಧಿಕಾರಸ್ಥರಿಗೂ ಅದೃಶ್ಯ ಶಕ್ತಿಯೊಂದರ ನಂಬಿಕೆಯ ಆಸರೆ ಬೇಕಾಗುತ್ತಿರಬೇಕು. ಇದನ್ನು ವರ್ತಮಾನ ಕರ್ನಾಟಕದಲ್ಲಿ ಅಧಿಕಾರಸ್ಥರು ಮಾಡುತ್ತಿರುವ `ಧಾರ್ಮಿಕ~ ಚಟುವಟಿಕೆಗಳಲ್ಲೂ ೀಡಬಹುದು. ಬಳ್ಳಾರಿ ಸೀಮೆಯಲ್ಲಿ ಗಣಿದಂಧೆಯ ಜತೆಯಲ್ಲೇ ಧಾರ್ಮಿಕ ಕಾರ್ಯಕ್ರಮಗಳಲ್ಲೂ ವಿಚಿತ್ರ ಹೆಚ್ಚಳವಾಯಿತು; ಕರಾವಳಿಯಲ್ಲಿ ವ್ಯಾಪಾರಿ ಚಟುವಟಿಕೆ ಹಾಗೂ ಸಂಪತ್ತಿನ ಆಗಮನದ ಜತೆಜತೆಗೇ ಎಲ್ಲ ಸಮುದಾಯಗಳಲ್ಲಿ `ಧಾರ್ಮಿಕ~ ಚಟುವಟಿಕೆಗಳು ಸಹ ಹೆಚ್ಚಳಗೊಂಡಿವೆ.

         ವ್ಯಾಪಾರ, ಸಂಪತ್ತು, ವಿಲಾಸ, ಅಧಿಕಾರ, `ಧಾರ್ಮಿಕ~ ಚಟುವಟಿಕೆ- ಇದೊಂದು ವರ್ತುಲ. ಈ ವರ್ತುಲದಲ್ಲಿ ಪೈಪೋಟಿ ಇರುವುದರಿಂದ ಯುದ್ಧಗಳೂ ಸೇರುತ್ತವೆ. ಹೂಗ್ಲಿದಡದಲ್ಲಿ ಬ್ರಿಟೀಶರಿಗೂ ಫ್ರೆಂಚರಿಗೂ ಕದನವಾಗಿದ್ದು ವ್ಯಾಪಾರಿ ಹಿತಾಸಕ್ತಿಯಿಂದಲೇ. ವ್ಯಾಪಾರಿ ಊರುಗಳು ಸಂಪತ್ತಿನ ತಾಣವಾಗುತ್ತಿದ್ದ ಹಾಗೆ, ಅವುಗಳ ಮೇಲೆ ಕಬಜಾ ಸಾಧಿಸಲು ಆಕ್ರಮಣಕಾರರೂ ಹುಟ್ಟುತ್ತಾರೆ. ಬಸ್ರೂರನ್ನು ವಶಪಡಿಸಿಕೊಂಡು, ಇಲ್ಲಿನ ವಾಣಿಜ್ಯ ವಹಿವಾಟಿನ ಮೇಲೆ ಹಿಡಿತ ಸಾಧಿಸಲು, ಪೋರ್ಚುಗೀಸರು, ಬ್ರಿಟೀಶರು, ವಿಜಯನಗರದವರು, ಕೆಳದಿಯವರು, ಶಿವಾಜಿ ಮತ್ತು ಹೈದರಾಲಿ ಮುರಿದುಕೊಂಡುಬಿದ್ದರು. ಇವರಲ್ಲಿ ಬಸ್ರೂರಿನ ಪಾಲಿಗೆ ಯಾರು ದೇಶಿಗರು, ಯಾರು ವಿದೇಶಿಗರು?

         ಜಾಗತಿಕ ವ್ಯಾಪಾರವು ಕದನ ಕ್ರೌರ್ಯ ನಾಶಗಳನ್ನು ಸೃಷ್ಟಿಸುತ್ತವೆ ನಿಜ. ಆದರೆ ಅದು ಜನಾಂಗ, ಧರ್ಮ, ಭಾಷೆ ಮತ್ತು ಸಂಸ್ಕೃತಿಗಳನ್ನು ಕೂಡಿಸಿ ಕುದಿಸುವ ಕೆಲಸವನ್ನೂ ಮಾಡುತ್ತದೆ. ಭಾರತದ ವಾಣಿಜ್ಯ ರಾಜಧಾನಿ ಮುಂಬಯಿ ಇದಕ್ಕೊಂದು ಸಾಕ್ಷಿ. ಬಿಜಾಪುರ ದೆಹಲಿಗಳಲ್ಲಿ ಪರ್ಶಿಯದ, ಹಂಪಿಯಲ್ಲಿ ಪೋರ್ಚುಗೀಸ್ ಮತ್ತು ಅರಬಸ್ಥಾನದ, ಕೊಲ್ಕತ್ತೆ ಮುಂಬಯಿಗಳಲ್ಲಿ ಯೂರೋಪಿನ ಕುರುಹುಗಳು ಎಷ್ಟೊಂದಿವೆ! ಬಸ್ರೂರಿನ ದೇವಿ ಗುಡಿಯಲ್ಲಿರುವ ಹುಲಿಯ ಪ್ರತಿಮೆ ತೋರಿಸುತ್ತ ಬಿ.ಕೆ.ಬಳೆಗಾರರು, `ಇದು ಚೀನಾದಿಂದ ಬಂದಿರಬಹುದು~ ಎಂದರು; ಇಲ್ಲಿನ ವೆಂಕಟರಮಣ ಗುಡಿಯ ಅರ್ಚಕರ ಮನೆಯ ಮೇಲಿರುವ ಪೋರ್ಚುಗೀಸ್ ಚಿಹ್ನೆಯನ್ನು ಇತಿಹಾಸಕಾರರು ಹಿಂದೆಯೇ ಗುರುತಿಸಿದ್ದಾರೆ. ವಿಜಯನಗರದ ಮಹಾನವಮಿ ದಿಬ್ಬದ ಮೇಲೆ ಅರಬ್ಬರು ಕುದುರೆ ವ್ಯಾಪಾರ ಮಾಡುತ್ತಿರುವ ಶಿಲ್ಪಗಳು ಮಾತ್ರವಲ್ಲ, ಅವರು ದಫ್ ವಾದ್ಯ ನುಡಿಸುತ್ತ ನರ್ತಿಸುತ್ತಿರುವ, ಒಂಟೆಗಳು ಖರ್ಜೂರದ ಮರವೂ ಇರುವ ಶಿಲ್ಪವೂ ಇವೆ.

         ಬಸ್ರೂರು- ಗುಡಿ ಚರ್ಚು ಮಸಜೀದು ಬಸದಿಯೇ ಮೊದಲಾಗಿ ವಿವಿಧ ಧರ್ಮದ ಕುರುಹುಗಳನ್ನು, ಕಲೆಯ ಪಳೆಯುಳಿಕೆ, ಪಾಳುಬಿದ್ದ ಕೆರೆ, ಇಲ್ಲವಾಗಿರುವ ಕೋಟೆಗಳನ್ನು, ಮೈತುಂಬ ತಳೆದು ಬದುಕುತ್ತಿದೆ. ಅದಕ್ಕೀಗ ಗತವೈಭವದ ಸಂಭ್ರಮವೂ ಇಲ್ಲ; ಪತನದ ನೋವೂ ಇಲ್ಲ. ಹಂಪಿಯಂತೆ ಅದು ಚರಿತ್ರೆಯ ಸ್ಮೃತಿಗಳ ಭಾರವನ್ನು ಹೊತ್ತುಕೊಂಡು ಬದುಕುತ್ತಿಲ್ಲ; ಹೊಸ ಅನುಭವಗಳಲ್ಲಿ ಹೊಸ ಮೈಪಡೆಯುತ್ತ ಬದುಕುತ್ತಿದೆ. ಇದನ್ನೆಲ್ಲ ಸಾಕ್ಷೀರೂಪದಲ್ಲಿ ನೋಡುತ್ತ ಹೊಳೆ ಮೌನವಾಗಿ ಹರಿಯುತ್ತಿದೆ.

         ತಿರುಗಾಟದ ಕೊನೆಗೆ ಹೊಳೆ ಹಾದು ಎದುರು ಕಾಣುವ ಕುದುರಿಗೆ ಹೋಗಬೇಕೆನಿಸಿತು. ಮಂಡಿಬಾಗಿಲ ಬಳಿ ಬಂದರೆ ದಾಟಿಸಲು ದೋಣಿ ಸಜ್ಜಾಗಿಟ್ಟುಕೊಂಡು, ಒಬ್ಬ ಮಹಿಳೆ ನಿಂತಿದ್ದರು. ಆಕೆಯ ಹೆಸರು ವೆಂಕಮ್ಮ ಖಾರ್ವಿ. ಕೊಂಕಣಿ ಬೆಸ್ತರಾಕೆ. ವಯಸ್ಸಾದರೂ ತನ್ನ ಕಾಯಕ ಬಿಟ್ಟಿಲ್ಲ. ಮೊಗದಲ್ಲಿ ತಾಯ್ತನ ತುಂಬಿದ ಆಕೆಗೆ ಬಸ್ರೂರಿನ ಇತಿಹಾಸದ ಯಾವ ಸ್ಮೃತಿಯ ಗರಜೂ ಇರಲಿಲ್ಲ. ಆದರೆ ಹೊಯಿಗೆ ತೆಗೆಯುವುದರಿಂದ ಮೀನುಗಾರಿಕೆಗೆ ಕಷ್ಟವಾಗುತ್ತಿದೆಯೆಂದೂ, ದಡಗಳು ಕುಸಿದು ಹೊಳೆ ಊರೊಳಗೆ ನುಗ್ಗಬಹುದು ಎಂದೂ ಆತಂಕ ವ್ಯಕ್ತಮಾಡಿದರು. ದುಡಿವ ಜನ ಹರಿವ ಹೊಳೆಯಂತೆ. ಚರಿತ್ರೆಯ ಭಾರವನ್ನು ಹೊತ್ತು ಬಾಳುವುದಿಲ್ಲ. ವರ್ತಮಾನದ ತಲ್ಲಣಗಳೇ ಅವರಿಗೆ ಹಾಸಿ ಹೊದೆಯುವಷ್ಟು. ಬಸ್ರೂರಿನ ಗತ ಚರಿತ್ರೆಗೆ ಮರುಳಾಗಿ ಬಂದ ನನ್ನ ವ್ಯಸನವನ್ನು ವೆಂಕಮ್ಮನ ವರ್ತಮಾನದ ತಳಮಳವು ಅಣಕಿಸಿದಂತಾಯಿತು.
(ಬಸ್ರೂರು ತಿರುಗಾಟದಲ್ಲಿ ಜತೆಗೆ ಬಂದ ಜಯಪ್ರಕಾಶ ಶೆಟ್ಟಿ, ದಿನೇಶ ಹೆಗ್ಡೆ ಅವರಿಗೂ, ಚರ್ಚೆ ಮಾಡಿದ ಕನರಾಡಿ ವಾದಿರಾಜ ಭಟ್ಟ, ಬಿ.ಕೆ.ಬಳಿಗಾರ ಅವರಿಗೂ ಕೃತಜ್ಞತೆಗಳು)



- ರಹಮತ್ ತರೀಕೆರೆ

ಕೃಪೆ: http://pvhome.yodasoft.com/

Theme images by sndr. Powered by Blogger.