Header Ads

ನಡೆದಷ್ಟೂ ನಾಡು: ಹಂಪಿ ಟು ಬಸ್ರೂರು ಭಾಗ-1


ನಡೆದಷ್ಟೂ ನಾಡು: ಹಂಪಿ ಟು ಬಸ್ರೂರು  ಭಾಗ-1


         ಬಸ್ರೂರು, ಕುಂದಾಪುರ ತಾಲ್ಲೂಕಿನ ಒಂದು ಊರು. ಪ್ರಾಚೀನ ಕರ್ನಾಟಕದ ರೇವು ಪಟ್ಟಣಗಳಲ್ಲಿ ಒಂದು. ಇಲ್ಲಿಗೆ ರೋಮ್, ಚೀನಾ, ಗ್ರೀಸ್, ಯೆಮನ್, ಪೋರ್ಚುಗಲ್, ಇಂಗ್ಲೆಂಡ್, ಡೆನ್ಮಾರ್ಕ್‌ಗಳಿಂದ ಹಡಗುಗಳು ಬಂದು, ತಂಗಿ, ವ್ಯಾಪಾರ ಮಾಡಿಕೊಂಡು ಹೋಗುತ್ತಿದ್ದವು. ಇದರಂತೆಯೇ ಬಿಜಾಪುರ, ಗೇರುಸೊಪ್ಪೆ, ಭಟ್ಕಳ, ಬಾರ್ಕೂರು, ಹೊನ್ನಾವರ, ಐಹೊಳೆ, ಹಂಪಿ ಕೂಡ ಜಾಗತೀಕರಣಗೊಂಡ ವಣಿಕ ಪಟ್ಟಣಗಳಾಗಿದ್ದವು. ವ್ಯಾಪಾರ ಸಂಸ್ಕೃತಿ ಜಗತ್ತಿನ ಪುಟ್ಟ ಊರನ್ನೂ ವಿಶ್ವಾತ್ಮಕಮಾಡಬಲ್ಲದು. ಹೀಗೆ ಜಾಗತೀಕರಣಗೊಂಡಿದ್ದ ಬಸ್ರೂರಿಗೆ ಹೋಗಬೇಕೆಂದು ಬಹು ದಿನಗಳಿಂದ ಹವಣಿಸಿದ್ದೆ. ನಾಥಪಂಥ ಅಧ್ಯಯನ ಮಾಡುತ್ತ ಬಸ್ರೂರಿಗೆ ಹಿಂದೆ ಹೋಗಿ, ಅಲ್ಲಿನ ದೇವೀಗುಡಿಯನ್ನು ನೋಡಿದ್ದುಂಟು. ಆದರೆ ಬಸ್ರೂರಿನ ಹೊಳೆಯನ್ನಾಗಲಿ ರೇವುಪಟ್ಟಣದ ಕುರುಹುಗಳನ್ನು ಆಗಲೀ ನೋಡಲಾಗಿರಲಿಲ್ಲ. ಈಚೆಗೆ ಹೋಗಿಬಂದೆ.

        ಬಸ್ರೂರು ಆಕರ್ಷಣೆಗೆ ಎರಡು ಕಾರಣಗಳಿದ್ದವು. ಮೊದಲನೆಯದು, ಕಾರಂತರ 'ಮೈಮನಗಳ ಸುಳಿಯಲ್ಲಿ' ಕಾದಂಬರಿ. ಇದರ ನಾಯಕಿ ಮಂಜುಳೆ, ಕಾರಂತರು ಕಟೆದಿರುವ ಅಪೂರ್ವ ಪಾತ್ರಗಳಲ್ಲಿ ಒಂದು. ಬಸ್ರೂರಿನ ದೇವದಾಸಿಯೂ ಗಣ್ಯವೇಶ್ಯೆಯೂ ಆಗಿದ್ದ ಈಕೆ, ಪ್ರತಿಭಾವಂತ ಗಾಯಕಿ. ಸೂಕ್ಷ್ಮಜ್ಞೆ. ಘನತೆಯ ವ್ಯಕ್ತಿತ್ವದವಳು. ಎರಡನೇ ಕಾರಣ, ನನ್ನ ವಾಸದ ಪರಿಸರದಲ್ಲಿರುವ ಹಂಪಿ (ವಿಜಯನಗರ) ಕೂಡ ವಿದೇಶಿ ವ್ಯಾಪಾರಸ್ಥರು ಬಂದುಹೋಗುತ್ತಿದ್ದ ಅಂತರರಾಷ್ಟ್ರೀಯವಾದ ವ್ಯಾಪಾರಿ ಪಟ್ಟಣವಾಗಿದ್ದು, ಬಸ್ರೂರಿನ ಜತೆ ಆಶ್ಚರ್ಯಕರ ಸಾಮ್ಯವನ್ನು ಹೊಂದಿದ್ದುದು. ಉದಾಹರಣೆಗೆ, ಎರಡೂ ಹೊಳೆಬದಿ ಊರುಗಳು; ಎರಡಕ್ಕೂ ಪೋರ್ಚುಗೀಸ್ ಮತ್ತು ಅರಬ್ ವ್ಯಾಪಾರಿಗಳ ಜತೆ ಸಂಪರ್ಕವಿತ್ತು; ಎರಡೂ ಗುಡಿ, ಬಸದಿ, ಮಸೀದಿಗಳುಳ್ಳ ಬಹುಧರ್ಮೀಯ ತಾಣಗಳು; ಎರಡೂ ಪಟ್ಟಣಗಳ ಪ್ರಧಾನ ದೈವ ಶಿವ; ಎರಡೂ ಕಡೆ ಗಣ್ಯ ವೇಶ್ಯೆಯರ ಸಮುದಾಯವಿತ್ತು; ಎರಡೂ ತಮ್ಮ ತಲೆಯ ಮೇಲೆ ಚರಿತ್ರೆಯ ಭಾರವನ್ನು ಹೊತ್ತು ಬಾಳುತ್ತಿವೆ.

Rahamat Tarikere at Basrur
Rahamat Tarikere
       ಹಾಗೆ ಕಂಡರೆ, ಬಸ್ರೂರು ವಿಜಯನಗರ ಆಳಿಕೆಯಲಿದ್ದ ಪಟ್ಟಣವೇ. ಹಂಪಿಯಿಂದ ಬಸ್ರೂರಿಗೆ ನೇರ ವ್ಯಾಪಾರಿಪಥವಿತ್ತು. ಅಲ್ಲಿಂದ ಇಲ್ಲಿಗೆ ಸಂಗೀತಗಾರರು ಬಂದುಹೋಗಿರಬೇಕು. ಯಾಕೆಂದರೆ, ಬಸ್ರೂರಿನ ದೇವದಾಸಿಯರ ಪದಗಳಲ್ಲಿ ತೆಲುಗು ರಚನೆಗಳಿವೆ; ತುಂಗಭದ್ರೆಯ ಪ್ರಸ್ತಾಪವಿದೆ. ಮುಂದೆ ಬ್ರಿಟೀಶರ ಕಾಲದಲ್ಲಿ ಎರಡೂ ಊರುಗಳು ಮದರಾಸು ಪ್ರೆಸಿಡೆನ್ಸಿಯ ಆಳಿಕೆಗೆ ಒಳಪಟ್ಟವು. ಇಲ್ಲಿದ್ದ ಜನಪ್ರಿಯ ಬ್ರಿಟೀಶ್ ಅಧಿಕಾರಿ ಥಾಮಸ್ ಮನ್ರೊ ಬಳ್ಳಾರಿಗೂ ಕಲೆಕ್ಟರನಾಗಿ ಬಂದನು. ಹಂಪಿಗೂ ಬಸ್ರೂರಿಗೂ 400 ಕಿ.ಮೀ ಅಂತರ; ಆದರೆ ಅವನ್ನು ಕಟ್ಟಿರುವ ಚರಿತ್ರೆ ಸಂಸ್ಕೃತಿ ಭಾಷೆ ಆಡಳಿತತೆ ಎಳೆಗಳಲ್ಲಿ ಸಮಾನತೆಯಿದೆ. ಫರಕೆಂದರೆ ಹಂಪಿ, ತನ್ನ ಗತದ ಪಾಳನ್ನು ಬಿಂಬಿಸುತ್ತ ವರ್ತಮಾನದಲ್ಲಿ ವಿದೇಶಿ ಪ್ರವಾಸಿಗರ ನೆಚ್ಚಿನ ತಾಣವಾಗಿ ರೂಪಾಂತರಗೊಂಡರೆ ಬಸ್ರೂರು ವಿಸ್ಮೃತಿಗೆ ಸಂದ ಊರಾಗಿಯೇ ಉಳಿಯಿತು.

       ಬಸ್ರೂರನ್ನು ಜಾಗತಿಕ ಖ್ಯಾತಿಯ ರೇವನ್ನಾಗಿಸಿದ 'ಕೀರ್ತಿ' ವಾರಾಹಿಗೆ ಸಲ್ಲಬೇಕೋ ಏನೋ? ಪಶ್ಚಿಮ ಘಟ್ಟಗಳಲ್ಲಿ ಹುಟ್ಟುವ ಈ ಹೊಳೆ, ಘಟ್ಟವಿಳಿದು, ದಟ್ಟವಾದ ಕಾಡುಗಳಲ್ಲಿ ಅಲೆದಾಡಿ, ವಿಶಾಲ ಸಮತಟ್ಟು ಪ್ರದೇಶದಲ್ಲಿ ಹರಿಯುತ್ತ, ಅನೇಕ ಕುದುರುಗಳನ್ನು ನಿರ್ಮಿಸಿ, ಬಸ್ರೂರಿನ ಬಡಗು ಮೈಯನ್ನು ಸವರಿಕೊಂಡು, ಗಂಗೊಳ್ಳಿಯ ಬಳಿ ಅರಬ್ಬಿ ಕಡಲು ಸೇರುತ್ತದೆ. ಅದು ಕಡಲನ್ನು ಸೇರುವ ಅಳಿವೆಬಾಗಿಲಿನ ಮೂಲಕ ನಾವೆಗಳು ಒಳಪ್ರವೇಶಿಸಿ ಬಸ್ರೂರಿಗೆ ಬರುತ್ತಿದ್ದವು. ಬಸ್ರೂರಿನಂತೆಯೇ ಹೊಳೆಕಡಲುಗಳ ಈ ಸಂಗಮವಿರುವ ಕಾರಣದಿಂದಲೇ ರೇವುಪಟ್ಟಣವಾದ ಇನ್ನೊಂದು ಊರೆಂದರೆ, ಶರಾವತಿ ದಡದ ಗೇರುಸೊಪ್ಪೆ. ಭಾರತದಲ್ಲಿ ಅತಿಹೆಚ್ಚು ರೇವುಪಟ್ಟಣಗಳನ್ನು ಸೃಷ್ಟಿಸಿದ ಹೊಳೆಯೆಂದರೆ, ಬಂಗಾಳದ ಹೂಗ್ಲಿಯೇ ಇರಬೇಕು. ಸಣ್ಣ ಹಳ್ಳಿಯಾಗಿದ್ದ ಕಾಳಿಘಾಟ್, ಕೊಲ್ಕತ್ತಾ ನಗರವಾಗಿ, ಭಾರತದ ರಾಜಧಾನಿಯಾಗಿ ಬೆಳೆಯಲು ಸಾಧ್ಯವಾಗಿದ್ದು ಈ ಹೂಗ್ಲಿಯ ದೆಸೆಯಿಂದ. ಬಂಗಾಳಕೊಲ್ಲಿಗೆ ಬರುತ್ತಿದ್ದ ಬ್ರಿಟೀಶರ ಡಚ್ಚರ ಪೋರ್ಚುಗೀಸರ ನಾವೆಗಳು, ಹೂಗ್ಲಿಯ ಮೂಲಕ ನುಸುಳಿ, ಪ್ಲಾಸಿ ಮುರ್ಶಿದಾಬಾದ್ ತನಕ ಒಳನಾಡಿನೊಳಗೆ ಹೋಗಿ ವ್ಯಾಪಾರ ನಡೆಸುತ್ತಿದ್ದವು. ಮುಂದೆ ಬ್ರಿಟೀಶ್ ವ್ಯಾಪಾರಿ ಸಂಘವಾದ 'ಈಸ್ಟ್ ಇಂಡಿಯಾ ಕಂಪನಿ', ಪ್ಲಾಸಿ ಕದನದಲ್ಲಿ ಫ್ರೆಂಚರನ್ನು ಸೋಲಿಸಿ ತನ್ನ ಏಕಸ್ವಾಮ್ಯ ಸಾಧಿಸಿದ್ದು, ತನ್ನ ಸರಕುಕೋಠಿಗಳ ರಕ್ಷಣೆಗೆ ಸೈನ್ಯ ಕಟ್ಟಿದ್ದು, ಆ ಸೈನ್ಯದ ಮೂಲಕ ಸ್ಥಳೀಯ ರಾಜರನ್ನು ಸೋಲಿಸುತ್ತಲೊ ಗೆಲ್ಲಿಸುತ್ತಲೊ ಇಡೀ ದೇಶವನ್ನೇ ವಶಪಡಿಸಿಕೊಂಡಿದ್ದು, ಕೊಲ್ಕತ್ತೆಯನ್ನು ರಾಜಧಾನಿ ಮಾಡಿಕೊಂಡು ಶತಮಾನಗಳ ಕಾಲ ಆಳಿದ್ದು- ಎಲ್ಲವೂ ಇತಿಹಾಸ.

       ಮುಖ್ಯ ಸಂಗತಿಯೆಂದರೆ, ಬ್ರಿಟೀಶರ ಆಳಿಕೆಯ ಫಲವಾಗಿ ನಮ್ಮ ದೇಶದ ಶಿಕ್ಷಣ, ಭಾಷೆ, ಉದ್ಯಮ, ಸಂಸ್ಕೃತಿ, ಸಾಹಿತ್ಯ, ಧರ್ಮಗಳಲ್ಲಿ ಮತ್ತು ನಮ್ಮ ಆಲೋಚನಾ ಕ್ರಮಗಳಲ್ಲಿ ಸಂಭವಿಸಿದ ಪಲ್ಲಟಗಳು. ಈ ಪಲ್ಲಟಗಳ ಫಲವಾಗಿ 'ವಿದೇಶಿತನ'ವು ನಮ್ಮ ಬಾಳಿನ ಒಳಗೆ ಆಳವಾಗಿ ಪ್ರವೇಶಿಸಿ ನಮ್ಮದೇ ಆಗಿ ನೆಲೆಸಿಬಿಟ್ಟಿತು. ಟ್ಯಾಗೋರ್, ವಿವೇಕಾನಂದ, ಮೋಹನರಾಯ್, ಕುವೆಂಪು, ಅಂಬೇಡ್ಕರ್ ಎಲ್ಲರೂ ಈ ಮಹಾಪಲ್ಲಟದ ಫಲಗಳೇ. ಮಂಜುಳೆ ಬಸ್ರೂರಿನಾಕೆ ಇರಬಹುದು. ಅವಳ ಕಥೆಯನ್ನು ಹಿಡಿದಿಟ್ಟಿರುವ ಕಾದಂಬರಿ ಪ್ರಕಾರ ಯೂರೋಪಿನದು. ಇದೇ ಕುಂದಾಪುರ ಸೀಮೆಯ ಕಾರಂತರು ಪಾಶ್ಚಿಮಾತ್ಯ ದೇಶಗಳನ್ನು 'ಅಪೂರ್ವ ಪಶ್ಚಿಮ' ಎಂದು ನಂಬಿದವರು. ಇದೇ ಸೀಮೆಯಿಂದ ಬಂದ ಕವಿಯೂ, ಆಂಗ್ಲ ಪ್ರಾಧ್ಯಾಪಕರೂ ಆಗಿದ್ದ ಗೋಪಾಲಕೃಷ್ಣ ಅಡಿಗರಿಗೆ, ದೇಶೀ ಸತ್ವವನ್ನು ಆರ್ತವಾಗಿ ಹುಡುಕಲು ಪ್ರೇರಿಸಿದ್ದು ಈ 'ಪಡುವಣದ ಗಾಳಿ'ಯೇ. ವಸಾಹತುಶಾಹಿ ಆಳಿಕೆಯ ಪರಿಣಾಮ ನಮ್ಮ ಬಾಳಿನಲ್ಲಿ ನೆಲೆಸಿರುವ ಪರಿಯನ್ನು ಅರಸುತ್ತ ಹೋದರೆ, ಅದರ ಮೂಲವು ಯೂರೋಪಿನ ವಣಿಕ ನಾವೆಗಳನ್ನು ಒಳಬಿಟ್ಟುಕೊಂಡ ಅಳಿವೆಬಾಗಿಲುಗಳಿಗೂ ಹೊಳೆಗಳಿಗೂ ಹೇಗೋ ಬಂದು ನಿಂತುಬಿಡುತ್ತದೆ.

        ಗೆಳೆಯರ ಜತೆಗೂಡಿ ಬಸ್ರೂರ ತಿರುಗಾಟ ಆರಂಭಿಸಿದೆ. ಇದಕ್ಕೆ ಬಸ್ರೂರಿನ ಮೇಲೆ ಶಾರದಾ ಕಾಲೇಜಿನವರು ಪ್ರಕಟಿಸಿರುವ ಅಪರೂಪದ ಪುಸ್ತಕವೂ ಅದರಲ್ಲಿರುವ ನಕಾಶೆಯೂ ಚೆನ್ನಾಗಿ ನೆರವಾದವು. ವಿಶೇಷವೆನಿಸಿದ್ದು ಇಲ್ಲಿರುವ ರಾಹುತಕೇರಿ, ಮಂಡಿಕೇರಿ, ವಿಲಾಸಕೇರಿ ಎಂಬ ಹೆಸರಿನ ಬೀದಿಗಳು. ಇವು ಕುದುರೆಸೈನ್ಯ, ಸರಕುಕೋಠಿ ಮತ್ತು ವಿಲಾಸಿನಿಯರಿದ್ದ ತಾಣಗಳು. ಕೊನೆಯ ಎರಡು ಕೇರಿಗಳಂತೂ ಹೊಳೆದಡದಿಂದಲೇ ಆರಂಭವಾಗುತ್ತವೆ. ನಾವೆಗಳು ಸರಕಿಳಿಸುವ ಮಂಡಿಕೇರಿಯ ತುದಿಗೆ ನಿಂತು, ಶತಮಾನಗಳ ಹಿಂದೆ ಹೊಳೆದಡದ ಮೇಲೆ ಜರುಗುತ್ತಿದ್ದ ಚಟುವಟಿಕೆಗಳನ್ನು ಕಲ್ಪಿಸಿಕೊಂಡೆ. ಹಂಪಿಯಲ್ಲಿರುವಾಗಲೂ ಪ್ರವಾಸಿಗರು ಚಿತ್ರಿಸಿರುವ ಗತವೈಭವವನ್ನು ಮನಸ್ಸು ಕಲ್ಪಿಸಿಕೊಳ್ಳುತ್ತದೆ. ನಮ್ಮ ಪಟ್ಟಣಗಳನ್ನು, ರಾಜಾತಿಥ್ಯ ಪಡೆದ ವಿದೇಶಿ ಪ್ರವಾಸಿಗರೂ ಆಸ್ಥಾನ ಕವಿಗಳೂ ಹುಮ್ಮಸ್ಸಿನಲ್ಲಿ ವೈಭವೀಕರಿಸಿ ವರ್ಣನೆ ಮಾಡಿದ್ದಾರೆ. ಆದರೆ ಅಲ್ಲಿನ ಜನಸಾಮಾನ್ಯರ ಪ್ರತಿಕ್ರಿಯೆಯ ರೂಪವಾದ ಸ್ಥಳೀಯ ಜಾನಪದ ಮಾತ್ರ, ಈ ವಿಷಯದಲ್ಲಿ ಕಠೋರ ಮೌನ ತಾಳಿದೆ ಅಥವಾ ಅದು ಬೇರೊಂದೇ ಕಥೆಯನ್ನು ಅರುಹುತ್ತದೆ. ಇದೊಂದು ಮಾರ್ಮಿಕವಾದ ವೈರುಧ್ಯ.
         ಬಸ್ರೂರನ್ನು ನಿಜವಾಗಿಯೂ ಜಾಗತಿಕ ವ್ಯಾಪಾರಿ ಪಟ್ಟಣವಾಗಿಸಿದ್ದು ಹೊಳೆ ಕಡಲು ವಣಿಕರು ಹಡಗುಗಳಲ್ಲ; ಸರಕುಗಳು ಮತ್ತು ಅವನ್ನು ಸೃಷ್ಟಿಸುತ್ತಿದ್ದ ಜನರು. ಬಸ್ರೂರಿನಿಂದ ಮರದ ಕೆತ್ತನೆಗಳು, ಪಂಚಲೋಹದ ರಸವನ್ನು ಎರಕಹೊಯ್ದು ಮಾಡಿದ ವಿಗ್ರಹಗಳು, ಬಟ್ಟೆ, ಅಕ್ಕಿ, ಬೆಲ್ಲ, ಮೆಣಸು, ದಾಲ್ಚಿನ್ನಿ ಮುಂತಾದವು ರಫ್ತಾಗುತ್ತಿದ್ದವು. ಇದಕ್ಕೆ ಬೇಕಾಗಿ ಬಸ್ರೂರು ಸೀಮೆಯಲ್ಲಿ ದೊಡ್ಡಸಂಖ್ಯೆಯಲ್ಲಿ ನೇಕಾರರೂ ಗುಡಿಗಾರರೂ ಇದ್ದರು. ಅಕ್ಕಿ ಬೆಳೆಯಲು ಬೇಕಾದ ತಣಿಗೆಯಂತಹ ವಿಶಾಲ ಜಮೀನು ಬಸ್ರೂರು ಸುತ್ತಮುತ್ತ ಈಗಲೂ ಇದೆ. ಇಲ್ಲಿನ ಅಕ್ಕಿ ಮಸ್ಕತ್ತಿಗೆ ಹೋಗುತ್ತಿತ್ತಂತೆ. ತಮ್ಮ ಬಾಲ್ಯದಲ್ಲಿ ಒಳ್ಳೆಯ ಅಕ್ಕಿಯನ್ನು ಮಸ್ಕತಕ್ಕಿ ಎನ್ನಲಾಗುತ್ತಿತ್ತು ಎಂದು ಊರ ಹಿರೀಕರಾದ ಶ್ರೀ ಬಿ.ಕೆ. ಬಳೆಗಾರರು ಹೇಳಿದರು. ಇದಕ್ಕೆ ಪ್ರತಿಯಾಗಿ ಬಸ್ರೂರಿಗೆ ಅರಬಸ್ತಾನದಿಂದ ಸುಗಂಧ ಕುದುರೆ ಖರ್ಜೂರಗಳೂ, ಚೀನಾದಿಂದ ರೇಷ್ಮೆ - ಪಿಂಗಾಣಿ ವಸ್ತುಗಳೂ ಆಮದಾಗುತ್ತಿದ್ದವು. ವಿಜಯನಗರದವರು ತಮಗೆ ಬೇಕಾದ ಅರಬ್ಬಿ ಕುದುರೆಗಳನ್ನು ಭಟ್ಕಳದಂತೆ ಬಸ್ರೂರಲ್ಲೂ ಇಳಿಸಿಕೊಳ್ಳುತ್ತಿದ್ದರು. ಹಂಪಿಯ ಗುಡಿ ಹಾಗೂ ಮಹಾನವಮಿ ದಿಬ್ಬದ ಗೋಡೆಗಳು, ಅರಬ್ ವ್ಯಾಪಾರಿಗಳು ದೊರೆಗೆ ಕುದುರೆಗಳನ್ನು ಪ್ರದರ್ಶಿಸುತ್ತಿರುವ, ನಡುಬಗ್ಗಿಸಿ ವಿವರಣೆ ನೀಡುತ್ತಿರುವ ನೂರಾರು ಶಿಲ್ಪಗಳಿಂದ ತುಂಬಿಹೋಗಿವೆ.
ಮುಂದುವರಿಯುತ್ತದೆ...

- ರಹಮತ್ ತರೀಕೆರೆ

ಕೃಪೆ: http://pvhome.yodasoft.com/

Theme images by sndr. Powered by Blogger.