Header Ads

ಹಿಂದೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಬಸ್ರೂರು


ಬಸ್ರೂರು ಹಿಂದೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ

        ಬಸ್ರೂರು ಹಿಂದೂ ಶಾಲೆಯು 17-06-1908ರಲ್ಲೇ ಹಟ್ಟಿಯಂಗಡಿ ದಿವಂಗತ ಶ್ರೀನಿವಾಸ್ ಕಾಮತ್ ಮತ್ತು ಬಸ್ರೂರು ದಿವಂಗತ ಸುಬ್ಬಯ್ಯ ಶೆಟ್ಟರ ಪರಿಶ್ರಮದಿಂದ ವಿದ್ಯಾಭಿಮಾನಿಗಳ ಪ್ರೋತ್ಸಾಹ ಸಹಕಾರದಿಂದ ಆರಂಭವಾಯಿತು. ಬಸ್ರೂರು ಶಿಕ್ಷಣ ಇತಿಹಾಸದಲ್ಲಿ 1908ನೇ ಇಸವಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ್ದು. ಕಾರಣ 1908ರಲ್ಲಿ ಆರಂಭವಾದ ಹಿಂದೂ ಶಾಲೆ ಬೆಳೆದು ಅಭಿವೃದ್ಧಿ ಹೊಂದಿ ಭವಿಷ್ಯದಲ್ಲಿ ವಿವಿಧ ಹಂತಗಳ ಶಿಕ್ಷಣವನ್ನೊದಗಿಸುವ ಸಂಸ್ಥೆಗಳ ಹುಟ್ಟಿಗೆ ನೆಲೆಯಾಗಿ ನಿಂತದ್ದು. ಹಿಂದೂ ಶಾಲೆಯು ಸರಕಾರದ ಮಂಜೂರಾತಿಯನ್ನು 16-4-1911ರಲ್ಲಿ ಪಡೆಯಿತು.

ಹಿಂದೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಬಸ್ರೂರು | Hindoo School Basrur
ಹಿಂದೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಬಸ್ರೂರು | Hindoo School Basrur

        ಹಿಂದೂ ಶಾಲೆಯು ಆರಂಭವಾದ ವರ್ಷಗಳಲ್ಲಿಯೇ ಅಧ್ಯಾಪಕರ ಪರಿಪೂರ್ಣ ಬೋಧನೆ, ಸತತ ಪರಿಶ್ರಮ ಹಾಗೂ ಆಡಳಿತ ಮಂಡಳಿಯವರ ಪ್ರೋತ್ಸಾಹದಿಂದ ವಿದ್ಯಾಧಿಕಾರಿಗಳಿಂದಲೂ, ಸಾರ್ವಜನಿಕರಿಂದಲೂ ಪ್ರಶಂಸಿಸಲ್ಪಟ್ಟಿತು. 1917ರಲ್ಲಿ ಈ ಶಾಲೆಯ ಮೇಲ್ವಿಚಾರಣೆ ನಡೆಸಿದ ವಿದ್ಯಾಧಿಕಾರಿ ಶ್ರೀ ಕೆ. ರಾಮರಾವ್ ಅವರು, "ನನ್ನ ವ್ಯಾಪ್ತಿಯಲ್ಲಿರುವ ಶಾಲೆಗಳಲ್ಲಿ ಬಸ್ರೂರು ಹಿಂದೂ ಶಾಲೆ ಎರಡನೇ ಅತ್ಯುತ್ತಮ ಶಾಲೆ" ಎಂದು ಪ್ರಶಂಸಿಸಿರುವರು. ಶಾಲೆಯ ಪ್ರಗತಿಯನ್ನು ಮೆಚ್ಚಿ 3-12-1918ರಲ್ಲಿ ಈ ಶಾಲೆಯನ್ನು ಸಂಪೂರ್ಣ ಹಿರಿಯ ಪ್ರಾಥಮಿಕ ಶಾಲೆಯಾಗಿ ಮೇಲ್ ದರ್ಜೆಗೇರಿಸಲು ವಿದ್ಯಾ ಇಲಾಖೆಯು ಮಂಜೂರಾತಿಯನ್ನು ಕೊಟ್ಟಿತು.

        ಹಿಂದೂ ಶಾಲೆಯ ಆಡಳಿತ ಮಂಡಳಿಯು "ದ ಬಸ್ರೂರ್ ಹಿಂದೂ ಸ್ಕೂಲ್ ಅಸೋಸಿಯೇಷನ್" ಎಂದು ಕರೆಯಲ್ಪಟ್ಟು 1934ನೇ ಇಸವಿಯಲ್ಲಿ ರಿಜಿಸ್ಟರ್ ಆಯಿತು. ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿ ಸ್ಥಳಾವಕಾಶ ಕಡಿಮೆಯಾದುದರಿಂದ ಹೊಸ ಕಟ್ಟಡ ಕಟ್ಟಲು ಬಸ್ರೂರಿನ ಪ್ರಮುಖರು ಪ್ರಯತ್ನ ಮಗ್ನರಾದರು. ಶಾಲಾ ಕಟ್ಟಡಕ್ಕೆ ಬೇಕಾದ ಸ್ಥಳವನ್ನು ಪೇಟೆಯ ಮಧ್ಯದಲ್ಲಿ ದಿವಂಗತ ವೇದಮೂರ್ತಿ ಪಾಂಡುರಂಗ ಭಟ್ಟರು ಒದಗಿಸಿ ಕೊಟ್ಟರು. ದಿವಂಗತ ಶಂಕ್ರಯ್ಯ ಶೆಟ್ಟರ ಮುಂದಾಳುತನದಲ್ಲಿ 1939ರಲ್ಲಿ ಉತ್ತಮವಾದ ಕಟ್ಟಡವನ್ನು ಕಚೇರಿ ಗುಡ್ಡೆಯಲ್ಲಿ ಕಟ್ಟಲಾಯ್ತು. 20-01-1940ರಲ್ಲಿ ಹೊಸ ಕಟ್ಟಡದ ಉದ್ಘಾಟನೆ ಮಾಡಿದರು. ಹಿಂದೂ ಶಾಲೆಯು 1908ರಿಂದ ನಿರಂತರವಾಗಿ ಅನೇಕ ಮಕ್ಕಳಿಗೆ ಅರ್ಥಪೂರ್ಣ ಅರಿವನ್ನೊದಗಿಸಿ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಲು ಬೇಕಾದ ಉತ್ತಮ ತರಬೇತಿಯನ್ನು ಕೊಟ್ಟಿರುವದರಲ್ಲಿ ಸಂಶಯವಿಲ್ಲ. ಈ ಶಾಲೆಯ ಉನ್ನತಿಗೆ ಆಡಳಿತ ವರ್ಗದವರಾದ ದಿವಂಗತ ವೆಂಕಟರಾಯರು, ದಿ. ತೇಜಪ್ಪ ಶೆಟ್ಟರು, ದಿ. ಹಿರಿಯಣ್ಣ ಶೆಟ್ಟರು ಮತ್ತು ಶಾಲಾ ಅಭಿವೃದ್ಧಿಗೆ ಪ್ರತ್ಯಕ್ಷ ಪರೋಕ್ಷ ಸೇವೆ ಸಲ್ಲಿಸಿದ ಮಹನೀಯರುಗಳು ಸ್ಮರಣಾರ್ಹರು.

        ಹಿಂದೂ ಶಾಲೆಯು ಬಸ್ರೂರಿನ ಪ್ರಗತಿಗೆ ಬೇಕಾದ ಸರ್ವ ರೀತಿಯ ತಿಳುವಳಿಕೆಯನ್ನು ಶಿಕ್ಷಣ ಪ್ರಸಾರದ ಮೂಲಕ ವಿದ್ಯಾರ್ಥಿಗಳಿಗೆ ಒದಗಿಸುತ್ತಾ ಉತ್ತಮ ಹೆಸರನ್ನು ಗಳಿಸಿ ಮುಂದುವರೆದು 1971ನೇ ಇಸವಿ ಮೇ 8, 9 ಮತ್ತು 10ನೇ ತಾರೀಕುಗಳಂದು ಮೂರು ದಿವಸಗಳ ಅವಧಿಯ ವಜ್ರಮಹೋತ್ಸವವ ಸಮಾರಂಭವನ್ನು ಸಂಭ್ರಮದಿಂದ ಆಚರಿಸಲಾಗಿದೆ.

ಹಿಂದೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಬಸ್ರೂರು | Hindoo School Basrur
ಹಿಂದೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಬಸ್ರೂರು | Hindoo School Basrur

        ಶ್ರೀ ಬಿ. ವಿ. ಆರ್. ಹೆಗ್ಡೆಯವರು ಶಾಲಾ ಮ್ಯಾನೇಜರ್ ಆಗಿ, ಶ್ರೀ ನಾಗಭೂಷಣಯ್ಯ ಮೊದಲಾದವರು ಪದವೀಧರ ಮುಖ್ಯೋಪಾಧ್ಯಾಯರಾಗಿ ಮತ್ತು ಶ್ರೀ ಬಿ. ಅಪ್ಪಣ್ಣ ಹೆಗ್ಡೆಯವರು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಶಾಲೆಯ ಪ್ರಗತಿಗಾಗಿ ಶ್ರಮಿಸಿರುವರು.

ಕೃಪೆ: ಎಂ. ಪಿ. ರುದ್ರಸ್ವಾಮಿಯವರ ಲೇಖನ.
ಸಂಗ್ರಹ: ಶಿವರಾಜ್ ಎಸ್ ಶೆಟ್ಟಿ.

Theme images by sndr. Powered by Blogger.