ನಿವೇದಿತಾ ಪ್ರೌಢ ಶಾಲೆ ಬಸ್ರೂರು
ನಿವೇದಿತಾ ಪ್ರೌಢ ಶಾಲೆ ಬಸ್ರೂರು
ನಿವೇದಿತಾ ಪ್ರೌಢ ಶಾಲೆ ಬಸ್ರೂರು |
ನಿವೇದಿತಾ ಬಾಲಕಿಯರ ಪ್ರೌಢಶಾಲೆಯ ಪ್ರಥಮ ಶೈಕ್ಷಣಿಕ ವರ್ಷವಾದ 1968-69ರಲ್ಲಿ 8ನೇ ತರಗತಿಯನ್ನು ಮತ್ತು ಮುಂದಿನ ಎರಡು ವರ್ಷಗಳಲ್ಲಿ 9 ಮತ್ತು 10ನೇ ತರಗತಿಗಳನ್ನು ಆರಂಭಿಸಿ ಪರಿಣಾಮಕಾರಿ ಬೋಧನೆ ಮತ್ತು ತರಬೇತಿಯಿಂದ ವಿದ್ಯಾರ್ಥಿನಿಯರಲ್ಲಿ ಉತ್ತಮ ಪರಿವರ್ತನೆ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಹಿಂದೂ ಶಾಲೆಯ ವಜ್ರಮಹೋತ್ಸವ ಸಂದರ್ಭದಲ್ಲಿ ಪ್ರೌಢಶಾಲೆಗೆ ಅಗತ್ಯವಾಗಿ ಬೇಕಾಗಿದ್ದ ಕಲಾಮಂಟಪವನ್ನು 1971ರಲ್ಲಿ ಶಿಕ್ಷನಾಸಕ್ತರಾದ ಶ್ರೀ ಬಿ. ವೀರರಾಜೇಂದ್ರ ಹೆಗ್ಡೆಯವರು ಅವರ ಮಾತೃಶ್ರಿಯವರ ಹೆಸರಿನಲ್ಲಿ ಶ್ರೀಮತಿ ಚಂದಮ್ಮ ಹೆಗ್ಗಡ್ತಿ ಕಲಾಮಂಟಪವನ್ನು ಕಟ್ಟಿಸಿ ಸ್ತುತ್ಯಾರ್ಹರಾಗಿದ್ದಾರೆ.
ಪ್ರೌಢಶಾಲೆಯ ನಿರ್ವಹಣಾ ಮಂಡಳಿಯ ಮುಖ್ಯಸ್ಥರು ಬಾಲಕರಿಗೂ ನಿವೇದಿತಾ ಪ್ರೌಢ ಶಾಲೆಯಲ್ಲಿ ಕಲಿಯಲು ಅನುಕೂಲ ಮಾಡಿಕೊಡಲು ನಿರ್ಧರಿಸಿ 1980-81ನೇ ಸಾಲಿನಿಂದ ನಿವೇದಿತಾ ಪ್ರೌಢ ಶಾಲೆಯಲ್ಲಿ ಸಹ ಪ್ರೌಢ ಶಿಕ್ಷಣ ನೀಡುವ ಸದಾವಕಾಶ ಒದಗಿಸಿಕೊಟ್ಟರು.
ಶಾಲೆಯಲ್ಲಿ ಗ್ರಂಥಾಲಯ ವ್ಯವಸ್ಥೆ ಇದೆ. ವಿಜ್ಞಾನದಲ್ಲಿ ನೈಜ ಅರಿವು ಒದಗಿಸಲು ಪ್ರಯೋಗ ಶಾಲೆಯೂ ಸಹ ಇದೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಲು ವಿದ್ಯಾರ್ಥಿ ಸಂಘ ಮತ್ತು ಆಟೋಟ ಚಟುವಟಿಕೆಗಳನ್ನು ಕ್ರಿಯಾತ್ಮಕವಾಗಿ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಸರಕಾರದಿಂದ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಬೇರೆ ಬೇರೆ ರೀತಿಯ ಅನುಕೂಲತೆಗಳನ್ನು ಮಾಡಿಕೊಡಲಾಗಿದೆ.
ನಿವೇದಿತಾ ಶಾಲೆಯು ಉತ್ತಮ ಕಟ್ಟಡ ಹೊಂದಿದ್ದು ಪ್ರಶಾಂತ ವಾವಾವರಣದಲ್ಲಿ ನೆಲೆಯಾಗಿದೆ. ಹಿಂದೂ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆ ಜಂಟಿಯಾಗಿ ಸುಮಾರು 5 ಎಕರೆ ಶಾಲಾ ನಿವೇಶನ ಹೊಂದಿವೆ. ಮುಖ್ಯೋಪಾಧ್ಯಾಯರು, ಅಧ್ಯಾಪಕರ ಸೇವಾ ಮನೋಭಾವ ಮತ್ತು ಮಾರ್ಗದರ್ಶನ ವಿದ್ಯಾರ್ಥಿಗಳಿಗೆ ಉತ್ತಮ ಸಹಕಾರ ನೀಡುವಲ್ಲಿ ಸಹಾಯಕವಾಗಿದೆ.
70-80ರ ದಶಕದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಸರಾಸರಿ 62.9% ಇದ್ದು, 1989-90ರಲ್ಲಿ 85% ಫಲಿತಾಂಶ ಪಡೆದಿದೆ. 1984-85ರಲ್ಲಿ ಸವಿತಾ ಕಾರಂತ್ 28ನೇ ರಾಂಕ್ ಮತ್ತು 1985-86ರಲ್ಲಿ ಲಕ್ಷ್ಮಿ ನಾರಾಯಣ ಪೈ 12ನೇ ರಾಂಕ್ ಗಳಿಸಿರುತ್ತಾರೆ. ನಿವೇದಿತಾ ಪ್ರೌಢ ಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಶ್ರೀ ಎಂ. ವೀರಣ್ಣ ಶೆಟ್ಟಿಯವರಿಗೆ ಅವರ ನಿಸ್ವಾರ್ಥ ಸೇವೆ, ಸಂಸ್ಥೆಯನ್ನು ಕಟ್ಟಿಬೆಳೆಸುವಲ್ಲಿ ತೋರಿರುವ ಶ್ರಮ ಸಾಧನೆ, ವಿದ್ಯಾರ್ಥಿ ಕ್ಷೇಮ ಪಾಲನೆ ಮತ್ತು ಪರಿಪೂರ್ಣ ಹಾಗೂ ಪರಿಣಾಮಕಾರಿ ಬೋಧನೆಗಳಿಗಾಗಿ ಕರ್ನಾಟಕ ಸರ್ಕಾರ ಪ್ರತಿಭಾವಂತ ಶಿಕ್ಷಕರಿಗೆ ನೀಡುವ ರಾಜ್ಯಪ್ರಶಸ್ತಿಯನ್ನು 1993-94ನೇ ಶೈಕ್ಷಣಿಕ ವರ್ಷದಲ್ಲಿ ನೀಡಿ ಗೌರವಿಸಿದೆ.
ಆಧಾರ: ಎನ್. ಪಿ. ರುದ್ರಸ್ವಾಮಿ ಅವರ ಲೇಖನ.
ಚಿತ್ರ: ಶಿವರಾಜ್ ಶೆಟ್ಟಿ.