ಬಸ್ರೂರಿನ ಇತಿಹಾಸ- ಭಾಗ 5
ಬಸ್ರೂರಿನ ಇತಿಹಾಸ- ಭಾಗ 5
ಕೆಳದಿ ನಾಯಕರು-ಬಸ್ರೂರು:
ದಕ್ಷಿಣ ಕನ್ನಡ ಕೆಳದಿ ನಾಯಕರ ಆಡಳಿತವನ್ನು ತಿಳಿಸಿವ ಮೊದಲ ಶಾಸನವು ಬಸ್ರೂರಿನಲ್ಲಿ ಸಿಕ್ಕಿದೆ. ಇದು ಸಣ್ಣ ಕೆರೆ ಕಟ್ಟೆಯಲ್ಲಿದ್ದು ಇದು ಶಕ ವರ್ಷ 1476 ಆನಂದ ಸಂವತ್ಸರ ಕಾರ್ತಿಕ ಒಂದು(= 27-10-1554). ಇದರಂತೆ ಕೆಳದಿ ಸದಾಶಿವ ನಾಯಕನು ತುಳುರಾಜ್ಯವನ್ನು ಮಾಡಿಕೊಂಡನು. ಇದು ವೀರ ಪ್ರತಾಪ ಸದಾಶಿವ ಮಹಾರಾಯನ ಆಳ್ವಿಕೆಯಲ್ಲಿ ನಡೆಯಿತು. ಸದಾಶಿವ ನಾಯಕನು ಈ ಕೆಲಸವನ್ನು ವಿಜಯನಗರದ ಸದಾಶಿವರಾಯನ ನಿರೂಪದಂತೆ ನಡೆಸಿದನು. ಸದಾಶಿವ ನಾಯಕನು ಸ್ವಶಕ್ತಿಯಿಂದ ತುಳುರಾಜ್ಯವನ್ನು ಗೆದ್ದು, ಇದಕ್ಕೆ ವಿಜಯನಗರದ ಚಕ್ರವರ್ತಿ ಮನ್ನಿಸಿದನೆಂದು ಈ ಶಾಸನ ಅಧ್ಯಯನದಿಂದ ತಿಳಿದು ಬರುತ್ತದೆ. ಕ್ರಿ. ಶ. 1607ರವರೆಗೆ ಕೆಳದಿ ನಾಯಕರು ಬಸ್ರೂರಿನ ಆಗು ಹೋಗುಗಳ ಬಗ್ಗೆ ಭಾಗಿಯಾಗಿದ್ದರು. ಇವರು ಬಾರ್ಕೂರಿನಲ್ಲಿದ್ದ ವಿಜಯನಗರದ ಪ್ರತಿನಿಧಿಗಳ ಮೇಲ್ವಿಚಾರಣೆ ನಡೆಸುತ್ತಿದ್ದರೆಂದು ಇಲ್ಲಿ ಮತ್ತು ಅಕ್ಕ ಪಕ್ಕದ ಊರುಗಳಲ್ಲಿರುವ ಶಾಸನಗಳ ಅಧ್ಯಯನದಿಂದ ವ್ಯಕ್ತವಾಗುತ್ತದೆ. ಇಷ್ಟಲ್ಲದೆ ಇವರು ಸ್ಥಳೀಯ ಅರಸುಮನೆತನಗಳಾದ ಹೊನ್ನೆಕಂಬಳಿ ಮತ್ತು ತೋಳಾಹಾರರೊಂದಿಗೆ ಒಂದು ರೀತಿಯ ರಾಜಕೀಯ ಹೊಂದಾಣಿಕೆ ಮಾಡಿಕೊಂಡಿದ್ದರೆಂಬುದನ್ನು ಸೂರಾಲು ಮತ್ತು ಹಟ್ಟಿಯಂಗಡಿಯ ಶಾಸನಗಳು ಪುಷ್ಟೀಕರಿಸುತ್ತವೆ. ಇವರ ಕಾಲದಲ್ಲಿ ನಡೆದ ಪ್ರಮುಖ ಘಟನೆಗಳೆಂದರೆ- ಪೋರ್ಚುಗೀಸರ ವ್ಯಾಪಾರ ಮತ್ತು ಆದಿಲ್ ಶಾಹಿಯವರ ತಾತ್ಕಾಲಿಕ ಆಕ್ರಮಣ. ಆದರೆ ಇವುಗಳಿಂದ ಕೆಳದಿ ನಾಯಕರ ವರ್ಚಸ್ಸು ಕಡಿಮೆಯಾಗಲಿಲ್ಲ.
ಕ್ರಿ. ಶ. 1606ರ ನಂತರ ಕೆಳದಿ ವೆಂಕಟಪ್ಪ ನಾಯಕನು ಕೆಳದಿ ನಾಯಕರ ಪ್ರತ್ಯಕ್ಷ ಆಡಳಿತವನ್ನು ಸ್ಥಾಪಿಸಿದನು. ಇಲ್ಲಿ ಮಹಾಲಿಂಗದೇವರ ಪೂಜೆ ಲೋಪವಾಗದಂತೆ ನಿಯಮಗಳನ್ನು ಸ್ಥಾಪಿಸಿದನು. ಇವನ ಆಳ್ವಿಕೆಯು ಬಸ್ರೂರಿನಲ್ಲಿ ರಾಜಕೀಯ ಹೊಂದಾಣಿಕೆಯನ್ನು ಅಂತ್ಯ ಮಾಡಿತು. ಇಲ್ಲಿನ ವಾಣಿಜ್ಯ ಕ್ಷೇತ್ರದ ಮೇಲೆ ಹಿಡಿತವನ್ನು ಸ್ಥಾಪಿಸಿ ಪೋರ್ಚುಗೀಸರ ಚಟುವಟಿಕೆಗಳನ್ನು ಮೊಟಕುಗೊಳಿಸಿದನು. ಇದರಿಂದ ಪೋರ್ಚುಗೀಸರು ಕೆಳದಿ ವೆಂಕಟಪ್ಪನೊಡನೆ ಒಂದು ರೀತಿಯ ಮೈತ್ರಿಯಿಂದಿರಲು ಹಾರೈಸುತ್ತಿದ್ದರು. ವ್ಯಾಪಾರಕ್ಕೆ ಬಂದ ಪೋರ್ಚುಗೀಸರ ದಲ್ಲಾಳಿಗಳಿಂದ ತಗಾದೆ ಮಾಡಿ ಪಾರಿತೋಷಕಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದನು. ಇದರಿಂದ ಕರಿಮೆಣಸಿನ ಕ್ರಯ ಹೆಚ್ಚಾದುದಲ್ಲದೆ, ಪೋರ್ಚುಗೀಸರಿಗೆ ಇಲ್ಲಿ ಲಾಭದಾಯಕ ವ್ಯಾಪಾರ ನಡೆಸುವುದು ಕಷ್ಟವಾಯಿತು. ತನ್ನ ತಗಾದೆಯಂತೆ ನಡೆದುಕೊಳ್ಳದಿದ್ದರೆ ಕರಿಮೆಣಸನ್ನು ಹಡಗಿಗೆ ತುಂಬಲು ಹಾಗೂ ಸಾಗಿಸಲು ಬಿಡುತ್ತಿರಲಿಲ್ಲ. ಒಟ್ಟಿನಲ್ಲಿ ಕೆಳದಿ ವೆಂಕಟಪ್ಪನು ಬಸ್ರೂರಿನಲ್ಲಿ ಪೋರ್ಚುಗೀಸರ ವ್ಯಾಪಾರಕ್ಕೆ ಒಂದು ಅಂಕುಶವನ್ನು ಹಾಕಿದ್ದನು. ಆದರೆ ಸ್ಥಳೀಯ ವ್ಯಾಪಾರಕ್ಕೆ ಪ್ರೋತ್ಸಾಹ ನೀಡಿದ್ದನು. ಈ ವರ್ತಕರು ಗಂಗೊಳ್ಳಿಯ ವ್ಯಾಪಾರದ ಮೇಲೆ ಹಿಡಿತ ಹೊಂದಿದ್ದರು. ರಾವುತಕೇರಿ ಮತ್ತು ಮಂಡಿಕೇರಿಗಳು ಬಸ್ರೂರಿನಲ್ಲಿ ಸ್ಥಾಪಿಸಲ್ಪಟ್ಟವು. ಗೋವೆಯ ಗೌಡಸಾರಸ್ವತರ ಕಾಶಿ ಮಠ ಮತ್ತು ಗೋಕರ್ಣ ಮಠಗಲು ಸ್ಥಾಪನೆಯಾದವು.
ಕೆಳದಿ ವೆಂಕಟಪ್ಪ ನಾಯಕನ ನಂತರ ಪಟ್ಟಕ್ಕೆ ಬಂದ ಇವನ ಮೊಮ್ಮಗ ವೀರಭದ್ರನು ಪೋರ್ಚುಗೀಸರ ಪ್ರೇರಣೆಯಿಂದ ದಂಗೆಯೆದ್ದ ಬಸ್ರೂರಿನ ನಗರ ಪಾಲಿಕೆಯವರನ್ನು ಎದುರಿಸಬೇಕಾಯಿತು. ಈ ನಗರಪಾಲಿಕೆಯವರು ತಮಗೆ ಗುಪ್ತ ರೀತಿಯಲ್ಲಿ ಸಹಾಯ ಮಾಡುತ್ತಿದ್ದ ಪೋರ್ಚುಗೀಸರಿಗೆ ಗಂಗೊಳ್ಳಿಯನ್ನು ಕೊಟ್ಟರು. ಆದರೆ ಸ್ವಲ್ಪ ಸಮಯದಲ್ಲೇ ವೀರಭದ್ರನು ಈ ಸವಾಲನ್ನು ಎದುರಿಸಿ ಯಶಸ್ಸು ಪಡೆದನು. ಇವನು ಬಸ್ರೂರಿನ ಕೊಟೆಯ ಸಮೀಪ ಹೊಂದಿದ್ದ ಭೂಮಿ ಮತ್ತು ತೆಂಗಿನ ತೋಟಗಳನ್ನು ತೆಗೆದುಕೊಂಡು, ಅದಕ್ಕೆ ಪರಿಹಾರವಾಗಿ ಗಂಗೊಳ್ಳಿಯಲ್ಲಿ ಸ್ಥಳವನ್ನು ನೀಡಿದನು.
ಕೆಳದಿ ವೀರಭದ್ರನ ಆಳ್ವಿಕೆಯ ಕಾಲದಲ್ಲಿ ಬಸ್ರೂರು ವೀರಶೈವ ಸಿದ್ಧಾಂತದ ಅಧ್ಯಯನ ಕೇಂದ್ರವಾಗಿದ್ದು, ಬಸವಣ್ಣನು ಸ್ಥಾಪಿಸಿದ ಮಠ ಷಟ್ದರ್ಶನ ಅಧ್ಯಯನ ನಡೆಸಲು 74 ವರಾಹ, ಒಂದು ಹಣ ಉತ್ಪತ್ತಿಯ ಸ್ಥಳವನ್ನು ಘಟ್ಟದ ಮೇಲಿರುವ ಬಚ್ಚಳ್ಳಿ ಗ್ರಾಮದಿಂದ ಬಿಟ್ಟಿದ್ದನೆಂದು ಕ್ರಿ. ಶ. 1641ರ ಶಾಸನದಿಂದ ತಿಳಿಯುತ್ತದೆ. ಇವರ ಕಾಲದಲ್ಲಿ ನಡೆದ ಇನ್ನೊಂದು ಘಟನೆ ಇಲ್ಲಿನ ಧಾರ್ಮಿಕ ಇತಿಹಾಸದಲ್ಲಿ ಮುಖ್ಯವಾದುದು. ಬಸ್ರೂರಿನ ಜೈನ ವರ್ತಕರು ಕಪ್ಪೆಯ ಬಸವಣ್ಣನಿಗೆ ಮಠ ಕಟ್ಟಲು ಸಹಾಯ ಮಾಡಿ ಇಲ್ಲಿ ಲಿಂಗಾಯತ ಧಾರ್ಮಿಕ ಕಟ್ಟಳೆಗಳು ಸಾಂಗವಾಗಿ ಮುಂದುವರಿದುಕೊಂಡು ಬರಲು ತಮ್ಮ ಭೂಮಿಯ ಕೆಲವು ಉತ್ಪತ್ಟಿಗಳನ್ನು ಮೂಲಸಾಧಾನ ಪಟ್ಟಿಯನ್ನು ಬಿಟ್ಟುಕೊಟ್ಟರು.
ಮುಂದಿನ ಕೆಳದಿ ನಾಯಕರ ಕಾಲದಲ್ಲಿ ಬಸ್ರೂರು ಡಚ್ಚ್ ಮತ್ತು ಪೋರ್ಚುಗೀಸರ ವ್ಯಾಪಾರ ಸ್ಪರ್ಧೆ, ಆದಿಲ್ ಶಾಹಿಯವರ ಆಕ್ರಮಣ ಭೀತಿ, ಶಿವಾಜಿಯ ನೌಕಾದಾಳಿ, ಮರಾಠಿ, ಆಂಗ್ಲೀಯರ ದಾಳಿಗಳನ್ನು ಎದುರಿಸಿತು. ಇವುಗಳನ್ನೆಲ್ಲ ಇವರು ತಮ್ಮದೇ ಆದ ರೀತಿಯಲ್ಲಿ ಎದುರಿಸಿ, ಇಲ್ಲಿನ ಸಾಂಸ್ಕೃತಿಕ ಸಮತೋಲನವನ್ನು ಕಾಪಾಡಿಕೊಂಡು ಬಂದರು.
ಬಸ್ರೂರಿನಲ್ಲಿ ಪೋರ್ಚುಗೀಸರು ಮತ್ತು ಡಚ್ಚರು:
ಕ್ರಿ. ಶ. 1510ರ ಸಮಯದಲ್ಲಿ ಗೋವೆಯ ಪೋರ್ಚುಗೀಸ್ ವೈಸರಾಯ್ ಆಲ್ಫಾನ್ಸೋ ಆಲ್ಬುಕರ್ಕ್ ಬಸ್ರೂರು ರೆವೀನ ಮಹತ್ವವನ್ನು ತಿಳಿದಿದ್ದನು. ಬ್ಯಾರೋನ್ ಆಂಥೋನಿಯೊ ಬೋಕೆರೊ, ಲ್ಯೂಜ್ ಕೂಟೋ ಮೊದಲಾದವರು ಈ ರೆವೀನ ನಕಾಶೆ ತಯಾರಿಸಿ, ಇದರ ವ್ಯಾಪಾರ ಮಹತ್ವವನ್ನು ಪೋರ್ಚುಗೀಸ್ ದೊರೆಗಳಿಗೆ ತಿಳಿಸಿದರು. ಕ್ರಿ. ಶ. 1525ರಲ್ಲಿ ಬಸ್ರೂರಿಗೆ ಪೋರ್ಚುಗೀಸರ ಆಗಮನವಾಯಿತು. ಇವರ ನಾವಿಕ ಸಿಯಾಮೋ ಮಿನೆಜಸ್ ಪೋರ್ಚುಗೀಸ ದೊರೆಯ ಆಜ್ಞೆಯಂತೆ ಇಲ್ಲಿಯ ವರ್ತಕರಿಂದ ಅಕ್ಕಿಯನ್ನು ಪಡೆದನು. ಇದಕ್ಕೆ ಪ್ರತಿಯಾಗಿ ಇಲ್ಲಿನ ವರ್ತಕರಿಗೆ ಸುಂಕವನ್ನು ವಿನಾಯಿತಿಗೊಳಿಸುವಂತೆ ಭರವಸೆಯನ್ನಿತ್ತನು. ಇಲ್ಲಿ ಬರುವ ಹಡಗುಗಳಿಗೆ ರಕ್ಷಣೆಯನ್ನು ನೀಡಲು ಪೋರ್ಚುಗೀಸರು ಒಪ್ಪಿಕೊಂಡರು. ಕ್ರಿ. ಶ. 1569ರವರೆಗೆ ಬಸ್ರೂರಿನಲ್ಲಿ ಪೋರ್ಚುಗೀಸರ ವ್ಯಾಪಾರ ನೆಮ್ಮದಿಯಿಂದ ನಡೆಯಿತು. ಇಲ್ಲಿಯ ವರ್ತಕರು ಪೋರ್ಚುಗೀಸರಿಗೆ ನೀಡಿದ ನಿರ್ದಿಷ್ಟ ಪ್ರಮಾಣದ ಅಕ್ಕಿಯನ್ನು ಕಪ್ಪವೆಂದು ಪೋರ್ಚುಗೀಸ್ ದಾಖಲೆಗಳು ತಿಳಿಸುತ್ತವೆ. ವ್ಯಾಪಾರವು ಅಕ್ಕಿಗೆ ಸೀಮಿತವಾಗಿತ್ತು. ಈ ರೆವಿಗೆ ಬರುವ ವಿವಿಧ ರೀತಿಯ ಹಡಗುಗಳಿಗೆ ಪೋರ್ಚುಗೀಸರು ರಕ್ಷಣೆಯನ್ನು ನೀಡುತ್ತಿದ್ದರು. ಸ್ಥಳೀಯ ವರ್ತಕರ ಸಹಕಾರವೂ ಇತ್ತು. ಕ್ರಿ. ಶ. 1569ರ ನಂತರ ಪೋರ್ಚುಗೀಸರ ವ್ಯಾಪಾರ ನೀತಿ ಬದಲಾಯಿತು. ಇವರ ವ್ಯಾಪಾರದಲ್ಲಿ ಲೂಟಿ ಮಾಡುವ ಮತ್ತು ಕೊಳ್ಳೆ ಹೊಡೆಯುವ ಉದ್ದೇಶವಿತ್ತು. ಕ್ರಿ. ಶ. 1569ರಲ್ಲಿ ಕೆಳ ಬಸ್ರೂರಿನ ಕೋಟೆಯನ್ನು ವಶಪಡಿಸಿಕೊಂಡರು(ಈಗ ಇದು ಕುಂದಾಪುರದಲ್ಲಿದೆ). ಮತ್ತು ಮೇಲ್ ಬಸ್ರೂರಿನ ಕೊಟೆಯನ್ನು ಭದ್ರಗೊಳಿಸಿದರು. ಇಲ್ಲಿಯ ವ್ಯಾಪಾರಸ್ತರನ್ನು ಹೆದರಿಸಿ, ಮೌಲ್ಯವನ್ನು ತಾವೇ ನಿರ್ಧರಿಸಿ, ಕಡಿಮೆ ದರಕ್ಕೆ ಅಕ್ಕಿಯನ್ನು ಪಡೆದುಕೊಳ್ಳುತ್ತಿದ್ದರು. ಮತ್ತೊಂದು ವರ್ಷದಲ್ಲಿ ಇಲ್ಲಿ ಸುಂಕ ಠಾಣೆಗಳನ್ನು ಸ್ಥಾಪಿಸಿ ಆಮದು ರಫ್ತುಗಳ ಸುಂಕದ ಹಣವನ್ನು ಲಾಭಗಳಿಸಿದರು. ಕ್ರಮೇಣ ವ್ಯಾಪಾರವು ಅಕ್ಕಿಗೆ ಸೀಮಿತವಾಗಿರದೆ ಕರಿಮೆಣಸು, ಇನ್ನಿತರ ಆಹಾರ ಸಾಮಗ್ರಿಗಳಿಗೂ ವಿಸ್ತರಿಸಿತು. ಇವರ ಪಾಂಗಾಸ್ (ಬೆಳ್ಳಿ) ಮತ್ತು ಪಾರ್ಡೋಸ್ (ಚಿನ್ನ) ನಾಣ್ಯಗಳು ಚಲಾವಣೆಗೆ ಬಂದವು. ಕ್ರಿ. ಶ. 1591ರ ವರದಿಯಂತೆ ಪೋರ್ಚುಗೀಸರು ಬಸ್ರೂರು ಬಂದರಿನಿಂದ ಹೇರಳ ಪ್ರಮಾಣದ ಕರಿಮೆಣಸು ಪಡೆಯುವ ಆಕಾಂಕ್ಷೆ ಹೊಂದಿದ್ದರು. ಈ ದ್ರಷ್ಟಿಯಿಂದ ಈ ಪ್ರದೇಶದ ರಾಜಕೀಯ ಶಕ್ತಿಗಳೊಂದಿಗೆ ಮೈತ್ರಿ ಹೊಂದಿರಬೇಕು ಎಂದು ತಿಳಿದಿದ್ದರು. ಇವರು ಕಟ್ಟಿದ ಕೋಟೆ ಘಟ್ಟದ ಮೇಲಿಂದ ಬರುವ ಆಹಾರ ಸರಕುಗಳನ್ನು ಸಂರಕ್ಷಿಸುವ ದ್ರಷ್ಟಿಯಲ್ಲಿ ಪುನರ್ರಚಿತವಾಯಿತು. ಇವರ ವ್ಯಾಪಾರ ದರೋಡೆ, ಜುಲುಮೆ ಮತ್ತು ಸ್ಥಳೀಯರ ಮನ ನೋಯಿಸುವ ಕ್ರಮದಿಂದ ನಡೆಯಿತು. ಕ್ರಿ. ಶ. 1583ರಲ್ಲಿ ಪೋರ್ಚುಗೀಸರು ಸಮುದ್ರ ಕಿನಾರೆಯಲ್ಲಿರುವ ಕೋದಂಡೇಶ್ವರ (ಕುಂದೇಶ್ವರ) ದೇವಾಲಯವನ್ನು ಬೆಂಕಿಯಿಟ್ಟು ಹಾಳುಗೆಡೆದರು. ಇದರಿಂದ ಸ್ಥಳೀಯ ಸೆಟ್ಟರು ಪೋರ್ಚುಗೀಸರನ್ನು ಹೊರಕ್ಕೆ ದಬ್ಬಲು ಯತ್ನಿಸಿದರು. ಇದೇ ವರ್ಷ ಬಸ್ರೂರಿನ ಪೋರ್ಚುಗೀಸ್ ಕ್ಯಾಪ್ಟನ್ ಮೆಲೋಡಿ ಸಂಪಾಯಿಯೋ ಇಲ್ಲಿನ ಸಾಂಪ್ರದಾಯಿಕ ವ್ಯಾಪಾರ ವ್ಯವಸ್ಥೆಯನ್ನು ಕೆಡಿಸಿದ್ದಲ್ಲದೆ, ಸ್ಥಳೀಯ ವರ್ತಕರಿಂದ ಬಹಳ ಕಡಿಮೆ ದರದಲ್ಲಿ ಕರಿಮೆಣಸನ್ನು ತೆಗೆದುಕೊಂಡನು. ಇನ್ನೊಂದು ಸಲ ಕ್ಯಾಪ್ಟನ್ ವೈಸರಾಯನಿಗೆ ತಿಳಿಸದೆ ಅಕ್ರಮವಾಗಿ ಬಸ್ರೂರಿನ ಮುಸ್ಲಿಂ ವರ್ತಕರಿಗೆ ಪ್ರತಿ ಕೊರ್ಜಿ ಅಕ್ಕಿಗೆ 5 ಲ್ಯಾರಿನ್ (ಪೋರ್ಚುಗೀಸ್ ನಾಣ್ಯ) ವಸೂಲಿ ಮಾಡಿದ್ದನ್ನು ಕ್ರಿ. ಶ 1591ರ ಇನ್ನೊಂದು ದಾಖಲೆ ತಿಳಿಸುವುದು ಗಮನಾರ್ಹ.
ಮುಂದುವರಿಯುತ್ತದೆ...
-ಶಿವರಾಜ್ ಶೆಟ್ಟಿ.
ಆಧಾರ: ಡಾ| ಬಿ. ವಸಂತ ಶೆಟ್ಟಿ, ಬ್ರಹ್ಮಾವರ ಮತ್ತು ಡಾ| ಕೆ. ಜಿ. ವಸಂತಮಾಧವ ಅವರ ಲೇಖನಗಳು.