Header Ads

ಕುಂದಾಪುರ ಕನ್ನಡದ ಸಿನೆಮಾ "ಗರ್‍ಗರ್‍ಮಂಡ್ಲ" ಶೀಘ್ರ ತೆರೆಗೆ...

ಕುಂದಾಪುರ: ಕುಂದಾಪ್ರ ಕನ್ನಡದ ಹಾಡಿನ ಮೂಲಕ ಮನೆಮಾತಾಗಿದ್ದ ಪಣ್ಕ ಮಕ್ಕಳ್ ತಂಡ ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಕುಂದಾಪ್ರ ಕನ್ನಡದಲ್ಲಿಯೇ ಸಿನೆಮಾವೊಂದನ್ನು ತೆರೆಯ ಮೇಲೆ ತರುತ್ತಿದೆ. ಒಟ್ನಾಗ್ ನಾವ್ಯಾರಿಗೂ ಕಮೀ ಇಲ್ಲ ಅಂದೇಳಿ ಕುಂದಾಪ್ರದ ಪಣ್ಕ್ ಮಕ್ಳ್ ಹೇಳೂಕ್ ಹೊರಟಿರ್. ಸಾಮಾಜಿಕವಾಗಿ ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಕುಂದಾಪುರ ಸಾಕಷ್ಟು ಹೆಸರು ಮಾಡಿದ್ದರೂ ಕೂಡ ಜನರ ನಡುವಿನ ಭಾಷಾಭಿಮಾನದಲ್ಲಿ ಅದೆನೋ ಕೊರತೆ ಕಾಣಿಸುತ್ತಿದೆ. ಕುಂದಾಪುರದವರಿಗೆ ಭಾಷೆಯ ಬಗ್ಗೆ ಕೀಳರಿಮೆ, ಅಸಡ್ಡೆ ಸಹಜವೆಂಬಂತೆ ಬೇರೂರುತ್ತಿದೆ. ಜನರಲ್ಲಿನ ಈ ಮನೋಭಾವ ದೂರವಾಗಬೇಕು, ಭಾಷಾಭಿಮಾನ ಬೆಳೆಯಬೇಕು ಎಂಬ ಸದುದ್ದೇಶದಿಂದ ಕುಂದಾಪ್ರ ಕನ್ನಡದಲ್ಲಿಯೇ ಕಮರ್ಶಿಯಲ್ ಸಿನೆಮಾವೊಂದನ್ನು  ತರಲು ಪಣ್ಕ್ ಮಕ್ಕಳ್ ತಂಡ ಸಿದ್ದತೆ ನಡೆಸಿದ್ದು ಬಿಡುಗಡೆಯ ಹಂತ ತಲುಪಿದೆ. 


Basrur

          ಪಣ್ಕ್ ಮಕ್ಕಳ್ ಮೂವಿಸ್ ಹಾಗೂ ಇನ್‌ಫೈನೆಟ್ ಪಿಚ್ಚರ್ಸ ಪ್ರಸ್ತುತ ಪಡಿಸುತ್ತಿರುವ ಸಿನೆಮಾವನ್ನು ಸಂಗೀತ ನಿರ್ದೇಶಕರಾದ ರವಿ ಬಸ್ರೂರು ನಿರ್ದೇಶಿಸಿ, ನಿರ್ಮಿಸುತ್ತಿದ್ದಾರೆ. ಪ್ರಸ್ತುತ ಕಾಲಘಟ್ಟದಲ್ಲಿ ತನ್ನ ಸುತ್ತಮುತ್ತ ಘಟಿಸುವ ಕಟು ವಾಸ್ತವಗಳು ಹಾಗೂ ಅದನ್ನು ಸಹಜ ಸಂಗತಿ ಎಂಬಂತೆ ಸಾಮಾನ್ಯನೊಬ್ಬ ಗ್ರಹಿಸುವ  ಪರಿ ಮತ್ತು ಅದರಿಂದಾಗಬಹುದಾದ ಪರಿಣಾಮಗಳ ಸುತ್ತ ಕಥೆ ಹೆಣೆಯಲಾಗಿದ್ದು ಚಿತ್ರದ ಮೂಲಕ ಇಂತಹ ಘಟನೆಗಳನ್ನು ಖಂಡಿಸುವ ಪ್ರಯತ್ನ ಮಾಡಲಾಗಿದೆ. ಸಿನೆಮಾದಲ್ಲಿ ಒಟ್ಟು ನಾಲ್ಕು ಹಾಡುಗಳಿವೆ. ಹೊಸ ಮುಖಗಳಾದ ಆದರ್ಶ ಮತ್ತು ಶಮಿತಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರೇ, ಓಂ ಗುರು, ವಿಜಯ್ ಬಸ್ರೂರು, ಉದಯ್ ಬಸ್ರೂರು, ಸತೀಶ್ ಬಸ್ರೂರು, ರಘು ಪಾಂಡೇಶ್ವರ, ಸೌಮ್ಯ, ಮಂಜು, ಚಂದ್ರಶೇಖರ ಮುಂತಾದವರು ಸಿನೆಮಾದಲ್ಲಿ ನಟಿಸಿದ್ದಾರೆ.. ಉಗ್ರಂ ಸಿನೆಮಾ ನಿರ್ದೇಶಕ  ಪ್ರಶಾಂತ್ ನೀಲ್ ಸಿನೆಮಾ ಹಂಚಿಕೆಯ ಹೊಣೆ ಹೊತ್ತಿದ್ದು ಮೇ ನಲ್ಲಿ ನಿನೆಮಾ ಬಿಡುಗಡೆಗೊಳ್ಳಲಿದೆ.

       ಮೊದಲ ಬಾರಿಗೆ ಕನ್ನಡದ ಉಗ್ರಂ ಸಿನೆಮಾಕ್ಕೆ ಸಂಗೀತ ನಿರ್ದೇಶನ ಮಾಡಿ ಗಾಂಧಿನಗರದಲ್ಲಿ ಸದ್ದು ಮಾಡಿರುವ ರವಿ ಬಸ್ರೂರು ಭಾಷಾಭಿಮಾನದಿಂದ ಮೊದಲ ಭಾರಿಗೆ ಕುಂದಾಪ್ರ ಕನ್ನಡದ ಸಿನೆಮಾ ನಿರ್ದೇಶನ ಮಾಡುತ್ತಿದ್ದಾರೆ. ಆರಂಭದ ದಿನಗಳಿಂದಲೂ ವಿಡಿಯೋಗ್ರಫಿ, ಸಿನೆಮಾಟೋಗ್ರಫಿಯ ಬಗೆಗೆ ಆಸಕ್ತಿ ಹೊಂದಿದ್ದ ರವಿ ತನ್ನ ಹುಟ್ಟೂರಾದ ಬಸ್ರೂರಿನಲ್ಲಿ ತನ್ನ ವಿದ್ಯಾಭ್ಯಾಸ ಮುಗಿಸಿ ಗಾಂಧಿನಗರದೆಡೆಗೆ ಹೊರಳಿದವರು. 14 ವರ್ಷಗಳ ಹಿಂದೆ ಮ್ಯೂಸಿಕ್ ಪ್ರೋಗ್ರಾಂಮರ್ ಆಗಿ ವೃತ್ತಿ ಬದುಕು ಆರಂಭಿಸಿದ ರವಿ ಈ ತನಕ  ಹಲವಾರು ಚಿತ್ರಗಳಲ್ಲಿ ದುಡಿದಿದ್ದಾರೆ. ಕನ್ನಡದ ಲಕ್ಕಿ, ದ್ಯಾವ್ರೇ ಸಿನೆಮಾಕ್ಕೆ ಹಾಡಿದ್ದಾರೆ ಮತ್ತು  ಪ್ರಜ್ವಲ್ ದೇವರಾಜ್ ಅಭಿನಯದ ಮೃಗಶಿರ  ಚಿತ್ರಕ್ಕೂ ಸಂಗೀತ ನೀಡಿದ್ದಾರೆ. ಕುಂದಾಪ್ರ ಕನ್ನಡಲ್ಲಿ ಹಾಡುಗಳನ್ನು ಹೊರತಂದು ಸೈ ಎನಿಸಿಕೊಂಡದ್ದು ಮಾತ್ರವಲ್ಲ ಸಿನೆಮಾ ಲೋಕದಲ್ಲಿ ಬೆರೆತು ಅನುಭವ ಪಡೆದು, ಅದಕ್ಕೆ ಸಂಬಂಧಿಸಿದ ಕೋರ್ಸುಗಳನ್ನು ಮಾಡಿ ಗರ್ ಗರ್ ಮಂಡ್ಲ  ನಿರ್ದೇಶನಕ್ಕೆ ಇಳಿದಿದ್ದಾರೆ. 

ನಿರ್ದೇಶಕ ರವಿ ಬಸ್ರೂರ್ ಅವರೊಂದಿಗೆ ನಡೆಸಿದ ಸಂದರ್ಶನ ಇಲ್ಲಿದೆ:



* ಕುಂದಾಪ್ರ ಕನ್ನಡದಲ್ಲಿ ಕಮರ್ಶಿಯಲ್ ಚಿತ್ರ ನಿರ್ದೇಶಿಸಿದ್ದಿರಿ. ಹೇಗಿದೆ ಇದರ ಪಯಣ..
     ಇತ್ತಿಚಿನ ದಿನಗಳಲ್ಲಿ ಭಾಷೆಯ ಬಗೆಗಿನ ಹಿಡಿತವೇ ತಪ್ಪುತ್ತಿದ್ದು, ನಾವು ಯಾವ ಭಾಷೆಯನ್ನು ಮಾತನಾಡುತ್ತಿದ್ದೇವೆ ಎಂಬ ಗೊಂದಲದಲ್ಲಿದ್ದೇವೆ. ಎಷ್ಟೋ ಭಾಷೆಗಳು ಅದಾಗಲೇ ನಾಶವಾಗಿದ್ದು ಆ ಸಾಲಿನಲ್ಲಿ ನಮ್ಮ ಭಾಷೆಯೂ ಸೇರ್ಪಡೆಯಾಗುವುದು ಬೇಡ. ಭಾಷೆಯ ಉಳಿಸುವ ಪ್ರಯತ್ನದಲ್ಲಿ ನಮ್ಮದೂ ಪಾಲಿರಲಿ ಎಂಬ ದೃಷ್ಟಿಯಿಂದ ಈ ಸಿನೆಮಾ ಮಾಡುತ್ತಿದ್ದೇವೆ. ಕಮರ್ಶಿಯಲ್ ಸಿನೆಮಾವಾದರೂ ಅದು ಭಾಷಾಭಿಮಾನದಿಂದ ಮಾಡಲಾಗುತ್ತಿದೆಯೇ ಹೊರತು ಲಾಭದ ದೃಷ್ಟಿಯಿಂದ ಮಾಡಲಾಗುತ್ತಿಲ್ಲ. ಈ ತನಕ ಸಿನೆಮಾಕ್ಕೆ ಮಾಡಿದ ಖರ್ಚುನ್ನು ಸಿನೆಮಾ 100 ದಿನ ಓಡಿದರೂ ಹಿಂಪಡೆಯಲಾಗದು. ಆದರೆ ಜನರಿಗೆ ಬೇರೆ ಭಾಷೆಯ ಸಿನೆಮಾ ನೋಡುವ ಹಾಗೆ ನಮ್ಮ ಭಾಷೆಯಲ್ಲೂ ಸಿನೆಮಾ ನೋಡಬಹುದು ಎಂದೆನಿಸಬೇಕು. ಇದನ್ನು ನಾವು ಹಾಡಿನ ಸಾಬೀತುಪಡಿಸಿದ ಹಾಗೆ ಸಿನೆಮಾದಲ್ಲೂ ತೊರಿಸುತ್ತೇವೆ.

* ಚಿತ್ರದಲ್ಲಿ ಯಾರ್ಯಾರು ಅಭಿನಯಿಸಿದ್ದಾರೆ? ಚಿತ್ರರಂಗದಲ್ಲಿ ಪ್ರಖ್ಯಾತರಾದವರು ಇದ್ದಾರೆಯೇ?
     ಎಲ್ಲರೂ ಕುಂದಾಪುರಿಗರೇ. ನಮ್ಮ ಸಿನೆಮಾಕ್ಕೆ ಹೊರಗಿನವರನ್ನು ಕರೆಸುವ ಅಗತ್ಯವೇ ಕಾಣಲಿಲ್ಲ. ಇಲ್ಲಿನವರ ಪ್ರತಿಭೆಗಳನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಈ ಕಲಾವಿದರು ಯಾವ ಇಂಡಸ್ಟ್ರಿಗೆ ಹೋಗಿಯಾದರೂ ಕೆಲಸ ಮಾಡಬಲ್ಲರು. ಇವರಗೆ ತರಬೇತಿ ನಿಡಲು 6 ತಿಂಗಳು ಹೆಚ್ಚಿಗೆ ವ್ಯಯಿಸಬೇಕಾಯಿತು ಎನ್ನುವುದು ಬಿಟ್ಟರೆ ಎಲ್ಲರೂ ಉತ್ತಮವಾಗಿ ಅಭಿನಯಿಸಿದ್ದಾರೆ.

*  ಸಿನೆಮಾದಲ್ಲಿ ಎಷ್ಟು ಹಾಡುಗಳಿವೆ?
  ಸಿನೆಮಾದಲ್ಲಿ ಒಂದು ಟೈಟಲ್ ಸಾಂಗ್ ಸೇರಿದಂತೆ ಒಟ್ಟು ನಾಲ್ಕು ಹಾಡುಗಳಿತ್ತವೆ. ಗರ್ ಗರ್ ಮಂಡ್ಲ ಈಗಾಗಲೇ ಬಿಡುಗಡೆಗೊಂಡಿದ್ದು ಆಲ್ಬಂನಲ್ಲಿ ಒಟ್ಟು 9 ಹಾಡುಗಳಿವೆ. ಸಿನೆಮಾಕ್ಕೆ 4 ಹಾಡುಗಳನ್ನು ಮಾತ್ರ ಬಳಸಿಕೊಳ್ಳಲಾಗುತ್ತಿದೆ. ಆಲ್ಬಂ ನ ಒಂದು ಹಾಡಿಗೆ ಯೋಗರಾಜ್ ಭಟ್ ಹಾಗೂ ಉಳಿದವುಗಳಿಗೆ ಪಣ್ಕ ಮಕ್ಕಳ್ ತಂಡ ಸಾಹಿತ್ಯವನ್ನು ನೀಡಿದ್ದಾರೆ.

* ಒಟ್ಟು ಎಷ್ಡು ಚಿತ್ರಮಂದಿರಗಳಲ್ಲಿ ಸಿನೆಮಾ ಬಿಡುಗಡೆಗೊಳ್ಳಲಿದೆ?
     ಕುಂದಾಪ್ರ ಕನ್ನಡ ಹೆಚ್ಚು ಮಾತನಾಡುವ ವ್ಯಾಪ್ತಿಯ ಮೂರು ಚಿತ್ರಮಂದಿರಗಳಿಗಷ್ಟೇ ಪ್ರಾಮುಖ್ಯತೆ ನೀಡಲಾಗುತ್ತಿದೆ. ಬೈಂದೂರು, ಕುಂದಾಪುರ ಮತ್ತು ಸಂತೆಕಟ್ಟೆಯ ಚಿತ್ರಮಂದಿಗಳಲ್ಲಿ ಸಿನೆಮಾ ಬಿಡುಗಡೆಗೊಳ್ಳುತ್ತಿದೆ. ಇನ್‌ಫೈನೆಟ್ ಪಿಕ್ಟರ್ಸ್‌  ನಮ್ಮ ಸಿನೆಮಾದ ಹಂಚಿಕೆಯ ಹೊಣೆ ಹೊತ್ತಿದ್ದು ಮುಂಬೈ ಕರ್ನಾಟಕ ಡಿಸ್ಟಿಬ್ಯೂಷನ್ಸ್ ನೊಂದಿಗೂ ಕೂಡ ಅಲ್ಲಿನ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಸಂಬಂಧ ಮಾತುಕತೆ ನಡೆಯುತ್ತಿದೆ.

* ಕುಂದಾಪ್ರ ಕನ್ನಡ ಸಿನೆಮಾದ ಪೋಸ್ಟರ್, ಪ್ರಚಾರವನ್ನು ನೋಡುತ್ತಿರುವ ಜನರ ಪ್ರತಿಕ್ರಿಯೆ ಹೇಗಿದೆ?
       ನಮ್ಮಿಂದ ಜನರಿಗೆ ಭಾರಿ ನಿರೀಕ್ಷೆ ಇದೆ. ಸಿನೆಮಾ ನೋಡಿದವರಿಗೆ ಆ ನಿರೀಕ್ಷೆ ಮಾತ್ರ ಹಾಳಾಗದು. ಹೇಗೆ ತಾವಾಡುವ ಭಾಷೆಯ ಹಾಡು ಕೇಳಿ ಜನ ಖಷಿ ಪಟ್ಟಿದ್ದರೂ ಅದೇ ತರಹ ಸಿನೆಮಾ ನೋಡಿಯೂ ಜನ ಖುಷಿ ಪಡಲಿದ್ದಾರೆ. 

* ಚಿತ್ರತಂಡ ಹೇಗಿದೆ? ಯಾರೆಲ್ಲಾ ಇದ್ದಾರೆ?
     ನಮ್ಮ ಚಿತ್ರತಂಡ ಉತ್ತಮವಾಗಿರುವುದರಿಂದ ನಾವು ಇಂದು ಸಿನೆಮಾ ರಿಲೀಸ್ ಮಾಡುತ್ತಿದ್ದೇವೆ. ಇದೊಂದು ದೊಡ್ಡ ತಂಡವಾಗಿದ್ದು ಒಂದೆರಡು ಹೆಸರುಗಳನ್ನು ಹೇಳಲು ಸಾಧ್ಯವಿಲ್ಲ. ಸುಮಾರು 100 ಜನ ಸಿನೆಮಾಕ್ಕಾಗಿಯೇ ದುಡಿದಿದ್ದಾರೆ. ಉಳಿದಂತೆ ಹೊರಗಡೆಯಿದ್ದು ತಮ್ಮ ಸಹಕಾರ ನೀಡಿದವರು ಅನೇಕರು. ಅದರಲ್ಲೂ ವಿಶೇಷವಾಗಿ ಬೇರೆ ದೇಶಗಳಲ್ಲಿ ನೆಲೆಸಿರುವ ಕುಂದಾಪುರಿಗರು ನಮ್ಮನ್ನು ಪ್ರೋತ್ಸಾಹಿಸಿದ್ದಾರೆ.  ಒಂದು ಒಳ್ಳೆಯ ಪ್ರಯತ್ನಕ್ಕೆ ಒಳ್ಳೆಯವರು ಜೋತೆ ಸೇರಿದಾಗ ಒಂದು ಒಳ್ಳೆಯ ಕೆಲಸವಾಗುತ್ತೆ ಎನ್ನುವುದಕ್ಕೆ ಪಣ್ಕ್ ಮಕ್ಕಳ್ ಸಾಕ್ಷಿ. ಮೂರು ವರ್ಷದ ಹಿಂದೆ ಈ ಪ್ರಾಜೆಕ್ಟ್ ಆರಂಭಿಸಿದಾಗ ಇಲ್ಲಿಯ ತನಕವೂ  ಒಬ್ಬೊಬ್ಬರೆ ನಮ್ಮ ತಂಡ ಸೇರುತ್ತಿದ್ದಾರೆಯೇ ಹೊರತು ದೂರ ಹೋದವರಿಲ್ಲ. 

* ಭಾಷಾಭಿಮಾನಿಯಾಗಿ ಕುಂದಾಪುರ ಮತ್ತು ಕುಂದಾಪುರ ಕನ್ನಡ ಬಗ್ಗೆ ಏನು ಹೇಳಲು ಇಷ್ಟ ಪಡುತ್ತೀರಾ?
     ನಮ್ಮೂರಿನ ನಮ್ಮ ಅನುಭವಗಳನ್ನೆಲ್ಲಾ ಎಂಥ ಚಂದ ನಮ್ ಭಾಷಿ, ಎಲ್ ಹೊರು ಸಿಕ್ಕುದಿಲ್ಲ ನಮ್ ಭಾಷಿ ಎಂಬ ಹಾಡಿನ ಮೂಲಕವೇ ವ್ಯಕ್ತಪಡಿಸಿದ್ದೇನೆ. ಎಲ್ಲಿಗೆ ಹೋಗಿ ಎಷ್ಟೇ ಬೆಳೆದರೂ ಕೂಡ ನನ್ನ ಭಾಷೆಗೆ ಮೊದಲ ಆದ್ಯತೆ. ನಮ್ಮೂರಲ್ಲಿ, ನಮ್ಮವರ ಮುಂದೆ ನಮ್ಮ ಪ್ರತಿಭೆಗಳನ್ನು ತೋರಿಸಿಕೊಳ್ಳುವುದರಷ್ಟು ಖುಷಿ ಬೆರೆಯದರಲ್ಲಿ ಇರುವುದಿಲ್ಲ.
ರವಿ ಬಸ್ರೂರು ಅವರ ಸಂಪರ್ಕ: +91 9611144666

ಸಂದರ್ಶನ: ಸುನಿಲ್ ಬೈಂದೂರು
Source: www.kundapra.com

No comments

Theme images by sndr. Powered by Blogger.