Header Ads

ಬಸ್ರೂರಿನ ಇತಿಹಾಸ -ಭಾಗ 3



ಬಸ್ರೂರಿನ ಇತಿಹಾಸ -ಭಾಗ 3


        1510ರಲ್ಲಿ ಕುರುಗೋಡಿನ ಸೋಮಣ್ಣ ನಾಯಕ ರಾಜ್ಯಪಾಲನಾಗಿದ್ದಾಗ ಪಡುವಕೇರಿಯ ಮಹಾದೇವರಿಗೆ ದತ್ತಿಯೊಂದನ್ನು ನೀಡಿದ್ದ. 1519ರಲ್ಲಿ ಕೃಷ್ಣದೇವರಾಯನ ಆಳ್ವಿಕೆಯಲ್ಲಿ ರತ್ನಪ್ಪ ಒಡೆಯನ ಮಗ ವಿಜಯಪ್ಪ ಒಡೆಯನು ರಾಜ್ಯಪಾಲನಾಗಿದ್ದಾಗ ಪಡುವಕೇರಿಯ ಸೆಟ್ಟಿಕಾರ ಜೋಕಿ ಸೆಟ್ಟಿಯ ಮಗಳು, ನಾರಣ ಸೆಟ್ಟಿಯ ಹೆಂಡತಿ ತಿರುಮಕ ಸೆಟ್ಟತಿ ಮಠವನ್ನು ಕಟ್ಟಿಸಿ ದತ್ತಿ ನೀಡಿದ್ದಳು. ಇದೇ ವರ್ಷ ಬರೆಸಲಾದ ಕೃಷ್ಣದೇವರಾಯನ ಇನ್ನೊಂದು ಶಾಸನ ಬಸ್ರೂರು ನೀರಿನ ಟ್ಯಾಂಕಿಯ ಬಳಿ ದೊರೆತಿತ್ತು. ಅದರಲ್ಲಿ ದೊರೆವ ವಿವರದಂತೆ ಆಗ ಬಸ್ರೂರಿನಲ್ಲಿ ಅಗ್ರಹಾರವೊಂದನ್ನು ಸ್ಥಾಪಿಸಿ, ಬೇರೆ ಬೇರೆ ಕಡೆಯಿಂದ ಬ್ರಾಹ್ಮಣರನ್ನು ಕರೆತಂದು ಅವರಿಗೆ ಮನೆಗಳನ್ನು ಕಟ್ಟಿಸಿಕೊಟ್ಟು, ವೃತ್ತಿ(ಆದಾಯ)ಯ ವ್ಯವಸ್ಥೆ ಮಾಡಿ ಅವರು ಇಲ್ಲಿ ನೆಲೆ ನಿಲ್ಲುವಂತೆ ಮಾಡಿದ್ದು ಬಸ್ರೂರಿನಲ್ಲಿ ಧರ್ಮ ಮತ್ತು ಶಿಕ್ಷಣದ ಪ್ರಗತಿಗೆ ನೆರವಾಯಿತೆನ್ನಬೇಕು.


Basrur


        ಕೃಷ್ಣದೇವರಾಯನ ಆಳ್ವಿಕೆಯಲ್ಲಿ 1525ರಲ್ಲಿ ವಿಠರಸ ಒಡೆಯ ರಾಜ್ಯಪಾಲನಾಗಿದ್ದಾಗ ಚೆನ್ನವರದ ನಾರಣ ಮುನಿಲ ಮತ್ತು ಕುಪ್ಪಣ್ಣ ಸೆಟ್ಟಿ ಸೇರಿ ಲಕ್ಷ್ಮೀನಾರಾಯಣ ದೇವರ ಮಠವನ್ನು ಕಟ್ಟಿಸಿ ದತ್ತಿ ನೀಡಿದ್ದರು. ತೋಟವನ್ನೂ ಸಹ ಆರುವಾರ(ಅಡವು) ಮಾಡುತ್ತಿದ್ದುದನ್ನು ಈ ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ. ಸಂತಾನವಿಲ್ಲದವರು ತಮ್ಮ ಹಣ ಬಂಗಾರವನ್ನೆಲ್ಲ ಮಠ ಕಟ್ಟಲು ವಿನಿಯೋಗಿಸಿದ ಉದಾಹರಣೆಯೂ ಬಸ್ರೂರಿನಲ್ಲಿ ದೊರೆಯುತ್ತದೆ.

        1528ರಲ್ಲಿ ಸೋಮಣ್ಣ ಸೆಟ್ಟಿಯ ಮಗ ಶಂಕರ ಸೆಟ್ಟಿ ಮಹಾಲಿಂಗೇಶ್ವರ ದೇವಾಲಯದ ಹತ್ತಿರ ಮಠ ಕಟ್ಟಿಸಿದಾಗ ರಾಜ್ಯಪಾಲನಾಗಿದ್ದವನು ಅರಗದ ಅಳಿಯ ತಿಮ್ಮಣ್ಣ ಒಡೆಯ. ಕೊಟೆಕೇರಿಯ ಉಲ್ಲೇಖ, ಶೃಂಗೇರಿ ಮಠದ ಭೂಮಿಯ ಪ್ರಸ್ತಾಪ, ಸಾಲಕ್ಕಾಗಿ ಭೂಮಿಯನ್ನು ಒಮ್ಮೆ ಆರುವಾರ ಮಾಡಿದ ಮೇಲೆ ಪುನಃ ಅಂತರಾರುವಾರ ಮಾಡುವ ಕ್ರಮ, ಭೂ ವ್ಯವಹಾರದಲ್ಲಿ ಜನನಿ ಮತ್ತು ಮಧ್ಯಸ್ಥ ಇವರ ಪಾತ್ರ ಮುಂತಾದ ವಿಚಾರಗಳೂ 1528ರ ದಾಖಲೆಯಲ್ಲಿ ಒಳಗೊಂಡಿವೆ.

        ಬಸ್ರೂರಿನಲ್ಲಿ ನವರಾತ್ರಿಯ ಆಚರಣೆಗೆ ಬಹಳ ಮಹತ್ವವಿದ್ದದ್ದೂ 1531ರ ಶಾಸನದಿಂದ ತಿಳಿದು ಬರುತ್ತದೆ. ದೊಡ್ಡಕೆರೆ ಕಟ್ಟೆಯ ಉತ್ತರ ದಿಕ್ಕಿನಲ್ಲಿರುವ ಶಾಸನವು, ಸದಾನಂದ ಸೆಟ್ಟಿಯು ಮಹಾಲಿಂಗ ದೇವರ ಸಮೀಪದಲ್ಲಿ ದುರ್ಗಾದೇವಿಯನ್ನು ಪ್ರತಿಷ್ಟೆ ಮಾಡಿದ ವಿಚಾರ ತಿಳಿಸುತ್ತದೆ.

        ಬಸ್ರೂರಿನ ಗುಪ್ಪೆ ಹಾಡಿ ವಿಜಯನಗರ ಕಾಲಕ್ಕಿಂತಲೂ ಬಹಳ ಹಿಂದೆಯೇ ಒಂದು ಪ್ರಮುಖ ಧಾರ್ಮಿಕ ಕೇಂದ್ರವಾಗಿತ್ತು ಎಂಬುದನ್ನೂ ಈ ಶಾಸನ ಸೂಚಿರುತ್ತದೆ. ಅಲ್ಲಿ ಗೋಪಿನಾಥ ದೇವರ ದೇವಾಲಯವಿತ್ತೆಂಬುದನ್ನೂ ಸದಾನಂದ ಒಡೆಯರ ಮಠ ಇದ್ದ ಬಗ್ಗೆಯೂ ಶಾಸನ ದೊರೆತಿತ್ತು. ಅಜ್ಜಿಯ ದೇವು ಸೆಟ್ಟಿ ಗುಪ್ಪೆಯ ಬಾಗಿಲುಗೊಟಗೆ ಜೀರ್ಣೋದ್ಧಾರಕ್ಕೆ 25 ವರಹಗದ್ಯಾಣಗಳನ್ನು ನೀಡಿದ್ದಾನೆಂದು ದೊಡ್ಡಕೆರೆ ಕಟ್ಟೆಯ ಶಾಸನ ತಿಳಿಸುತ್ತದೆ. ಇತರ ದತ್ತಿಗಳಲ್ಲಿ ಆದಿತ್ಯ ದೇವರ ಪೂಜೆ, ದುರ್ಗಾದೇವಿಗೆ ಹೋಮ, ಮುತ್ತೈದೆಯರಿಗೆ ಸೀರೆ ಹಚಡ ದಾನ ಒಳಗೊಂಡಿವೆ.

        ಕ್ರಿ. ಶ. 1533ರಲ್ಲಿ ಅಚ್ಯುತರಾಯನ ಆಳ್ವಿಕೆಯಲ್ಲಿ ಸುಂಕಣ್ಣ ನಾಯಕ ಬಾರ್ಕೂರಿನ ರಾಜ್ಯಪಾಲನಾಗಿ ನೇಮಕಗೊಂಡಿದ್ದ. ಆದರೆ ಅವನು ಕೊಂಡಪ್ಪ ಒಡೆಯನನ್ನು ಬಾರ್ಕೂರಿನ ಆಡಳಿತ ನಡೆಸಲು ನೇಮಿಸಿದ್ದ. ಆಗ ಸುಂಕಣ್ಣ ನಾಯಕನು ಪಡುವ ಕೇರಿಯ ತಿರುಮಲ ದೇವರಿಗೆ ಅಮೃತಪಡಿ ಮತ್ತು ನಂದಾದೀಪಕ್ಕಾಗಿ ಹಟ್ಟಿಕುದುರು ಗ್ರಾಮವನ್ನು ದಾನವಾಗಿ ನೀಡಿ ಪಟ್ಟೆ ಬರೆಸಿ ಕೊಡಲು ಕೊಂಡಪ್ಪ ಒಡೆಯನಿಗೆ ಆಜ್ಞೆ ಮಾಡಿದ. ಅಂತೆಯೇ ಕೊಂಡಪ್ಪ ಒಡೆಯ ದಾನಪಟ್ಟೆ ಮಾಡಿಸಿಕೊಟ್ಟ. ಅಚ್ಯುತರಾಯನ ಆಳ್ವಿಕೆಯ ಇನ್ನೊಂದು ಶಾಸನವೂ ಬಸ್ರೂರಿನಲ್ಲಿ ದೊರೆತಿದ್ದು, ಅದರಲ್ಲಿಯೂ ಸುಂಕಣ್ಣ ನಾಯಕ ಬಾರ್ಕೂರು ರಾಜ್ಯಕ್ಕೆ ಕೊಂಡಪ್ಪ ಒಡೆಯನನ್ನು ನೇಮಿಸಿದ್ದರ ಉಲ್ಲೇಖವಿದೆ. ಅರಮನೆಯ ಭಂಡಾರ ಸ್ಥಳ ಕಂದಾವರದ ಒಳಗೆ ಬಡಾಕೆರೆಯಲ್ಲಿ ಕೆಲವು ಬ್ರಾಹ್ಮಣರಿಗೆ 'ವೃತ್ತಿ'ಯಾಗಿ 12 ವರಹ ದಾನ ಮಾಡಿದ ವಿವರವನ್ನು ಈ ಶಾಸನ ಒಳಗೊಂಡಿದೆ.

        1546 ಅಕ್ಟೋಬರ್ 25ರಂದು ವಿಜಯನಗರದ ದೊರೆ ಸದಾಶಿವರಾಯನು ಆಳುತ್ತಿದ್ದಾಗ ಬಾರ್ಕೂರು ರಾಜ್ಯದ ಆಡಳಿತ ಅಚ್ಚ ಒಡೆಯನ ಕೈಯಲ್ಲಿದ್ದಾಗ ಬರೆಸಿದ ಶಾಸನವೊಂದು ಹಲವರ ಕೆರೆಯ ದಕ್ಷಿಣ ದಿಕ್ಕಿನಲ್ಲಿದೆ. ಈ ಶಾಸನವು ಸಂತಾನ ಶಂಕರಲಿಂಗ ಸೆಟ್ಟಿ ಮಠ ಕಟ್ಟಿಸಿ ಅದರಲ್ಲಿ ವಿಠಲ ದೇವರ ಪೂಜೆಗೆ, ಮತ್ತಿತರ ವೆಚ್ಚಕ್ಕೆ ಹಿಂದೆ ದತ್ತಿ ನೀಡಿದ್ದ, ನಂತರ ಕುಪ್ಪಣ ಸೆಟ್ಟಿ ಕಟ್ಟಿಸಿದ ಮಠಕ್ಕೆ ಬಿಟ್ಟ ದತ್ತಿಯನ್ನೂ ಶಾಸನ ತಿಳಿಸುತ್ತದೆ. ಮಾಯಿಲ ದೇವಿ ದೇವಾಸ್ಥಾನ, ಬೊಬ್ಬರಿಯನ ತೋಟ ಮುಂತಾದ ಉಲ್ಲೇಖಗಳು ಆಗಿನ ಧಾರ್ಮಿಕ ಪರಿಸ್ಥಿತಿಯು ಅಧ್ಯಯನಕ್ಕೆ ಉಪಯುಕ್ತವಾಗಿವೆ.

        ಸದಾಶಿವರಾಯನ ಆಳ್ವಿಕೆಯ ಇನ್ನೊಂದು ದಾಖಲೆ 1548ರಲ್ಲಿ ಬೆಮ್ಮಚ ಸೆಟ್ಟಿಯು, ಹಿಂದೆ ಕಲ್ಲು ಸೆಟ್ಟಿ ಕಟ್ಟಿಸಿದ್ದ ಮಠವನ್ನು ಜೀರ್ಣೋದ್ಧಾರ ಮಾಡಿಸಿ ದತ್ತಿ ನೀಡಿದ್ದನ್ನು ತಿಳಿಸುತ್ತದೆ. ಈ ಧರ್ಮವನ್ನು ನಡೆಸುವ ಜವಾಬ್ದಾರಿಯನ್ನು ಪಡುವಕೇರಿಯ ಹಲರು ಸೆಟ್ಟಿಕಾರರಿಗೆ ವಹಿಸಲಾಗಿದೆ.

        ಕ್ರಿ. ಶ. 1554 ಅಕ್ಟೋಬರ್ 27ರಂದು ಬರೆಸಿದ ಬಸ್ರೂರು ಸಣ್ಣ ಕೆರೆಕಟ್ಟೆಯ ಶಾಸನವು ವಿಜಯನಗರದ ದೊರೆ ಸದಾಶಿವರಾಯನು ಬಾರ್ಕೂರು ರಾಜ್ಯವನ್ನು ಕೆಳದಿ ಸದಾಶಿವ ನಾಯಕನಿಗೆ ವಹಿಸಿದ್ದಾಗಿ ತಿಳಿಸುತ್ತದೆ. ಇದರಿಂದ ಬಸ್ರೂರು ಕೆಳದಿ ನಾಯಕರ ಆಡಳಿತಕ್ಕೆ ಒಳಪಟ್ಟಿತು. ವಿಜಯನಗರದ ಆಳ್ವಿಕೆ ಮುಂದುವರಿಯಿತಾದರೂ ಇಲ್ಲಿನ ರಾಜ್ಯಪಾಲರ ನೇಮಕ ಮತ್ತು ಆಡಳಿತದ ಜವಾಬ್ದಾರಿ ಕೆಳದಿ ನಾಯಕರದ್ದಾಗಿತ್ತು.

        ಆಳುಪರು ಮತ್ತು ವಿಜಯನಗರದ ಅರಸರ ಶಾಸನಗಳು ಮತ್ತಿತರ ಚಾರಿತ್ರಿಕ ದಾಖಲೆಗಳನ್ನು ಪರಿಶೀಲಿಸಿದಾಗ ಬಸ್ರೂರು ಕರಾವಳಿ ಕರ್ನಾಟಕದ ಒಂದು ಪ್ರಮುಖ ನಗರವಾಗಿ ಬೆಳೆದಿತ್ತೆಂಬುದು ಸ್ಪಷ್ಟವಾಗುತ್ತದೆ. 12ನೆಯ ಶತಮಾನದ ಸಮಯ ಪುನರ್ನಿರ್ಮಾಣಗೊಂಡ ಈ ನಗರ ಆಗ ಹೆಚ್ಚು ವಿಸ್ತಾರಗೊಂಡಿರಬಹುದು. ಬಾರ್ಕೂರಿನಂತೆ ಇಲ್ಲಿಯೂ ಕೇರಿ ವ್ಯವಸ್ಥೆ ಇದ್ದಿತ್ತು. ಪ್ರತೀ ಕೇರಿಗೂ ಅದರದ್ದೇ ಆದ ಕಟ್ಟಳೆಗಳಿದ್ದವು. ಪ್ರತಿಯೊಂದು ಕೇರಿಯಲ್ಲೂ ಒಂದು ಪ್ರಧಾನ ದೇವಸ್ಥಾನ ಮತ್ತು ಇನ್ನಿತರ ದೇವಾಲಯಗಳು, ಮಠಗಳು ಇದ್ದು ಆಡಳಿತದ ಕ್ಲಿಷ್ಟ ಸಮಸ್ಯೆಯ ನ್ಯಾಯ ತೀರ್ಮಾನದಂತಹ ಸಂದರ್ಭಗಳಲ್ಲಿ ದೇವಾಲಯಗಳ, ಮಠಗಳ ಮುಖ್ಯಸ್ಥರು ಪಾಲ್ಗೊಳ್ಳುತ್ತಿದ್ದರು. ಈ ದೇವಾಲಯ, ಬಸದಿ, ಪಳ್ಳಿ ಇತ್ಯಾದಿ ಧಾರ್ಮಿಕ ಕೇಂದ್ರಗಳ 'ಪೂರ್ವ ಮರ್ಯಾದೆ' ಅಥವಾ ಮೊದಲಿನಿಂದಲೂ ನಡೆದುಕೊಂಡು ಬಂದ ರೀತಿನೀತಿಗಳ ರಕ್ಷಣೆಯ ಜವಾಬ್ದಾರಿ ಆಡಳಿತದ್ದಾಗಿತ್ತು.

Basrur
       ಪ್ರತೀ ಕೇರಿಗೂ ಆಡಳಿತದಲ್ಲಿ ಭಾಗಿಯಾಗುವ ಪ್ರತಿನಿಧಿಗಳಿದ್ದರು, ಇವರೇ 'ಹಲರು'. 'ಸೆಟ್ಟಿಕಾರ', 'ನಖರ', 'ಹಂಜಮಾನ' ಮುಂತಾದ ವ್ಯಾಪಾರೀ ಸಂಘಗಳು ತುಂಬಾ ಪ್ರಭಾವಿಗಳು ಆಗಿದ್ದು ಪೌರಾಡಳಿತದಲ್ಲಿ ಇವರು ಪ್ರಮುಖ ಪಾತ್ರ ವಹಿಸುತ್ತಿದ್ದರು. ಆರ್ಥಿಕ ಪ್ರಾಬಲ್ಯ ಹೊಂದಿದ ವ್ಯಾಪಾರಿಗಳು ಮತ್ತು ಭೂ ಒಡೆತನ ಹೊಂದಿದ ವರ್ಗ ಸಮಾಜದಲ್ಲಿ ಪ್ರತಿಷ್ಟಿತರಾಗಿದ್ದು ಅವರು ಇಲ್ಲಿ ಮಠ ದೇವಾಲಯಗಳ ನಿರ್ಮಾಣ ಕೈಗೊಂಡು ದಾನ-ದತ್ತಿ ನೀಡಿ ಬಸ್ರೂರಿನ ಒಟ್ಟು ಪ್ರಗತಿಗೆ ಮಹತ್ವದ ಕಾಣಿಕೆ ನೀಡಿದರು.

       ಕೇರಿಗಳಿಗೆ ಮತ್ತು ಹಲರಿಗೆ ವಿಶೇಷ ಅಧಿಕಾರಗಳಿದ್ದವು. ಈ ಅಧಿಕಾರಗಳನ್ನು ಅವರು ಯಾವ ಸಂದರ್ಭದಲ್ಲೂ ಬಿಟ್ಟುಕೊಡಲು ತಯಾರಿರಲಿಲ್ಲ. ಇದು ಕೆಲವು ಬಾರಿ ಘರ್ಷಣೆಗೂ ಕಾರಣವಾಗುತ್ತಿತ್ತು. ಹಾಗೆ ಘರ್ಷಣೆ ಸಂಭವಿಸಿದಾಗ ಹೊರಗಿನವರ ಪ್ರವೇಶವಿಲ್ಲದೆ ಅವರೇ ಸೇರಿ ಚರ್ಚಿಸಿ ತೀರ್ಮಾನಕ್ಕೆ ಬಂದು ಸಮಸ್ಯೆಗೆ ಶಾಂತಿಯುತ ಪರಿಹಾರ ಕಂಡುಕೊಳ್ಳುತ್ತಿದ್ದುದು ಬಸ್ರೂರಿನ ವೈಶಿಷ್ಟ್ಯಗಳಲ್ಲೊಂದು.

       ಬಸ್ರೂರಿನ ಬೀದಿಗಳು ಸಾಕಷ್ಟು ಅಗಲವಾಗಿದ್ದವು. ವ್ಯಾಪಾರ ಕೇಂದ್ರವಾಗಿದ್ದುದರಿಂದ ಸ್ವದೇಶಿ, ವಿದೇಶಿ ವ್ಯಾಪಾರಿಗಳು, ಬೇರೆ ಬೇರೆ ಊರುಗಳ ಜನ ಬಂದು ಹೋಗುತ್ತಿದ್ದು, ಜನಸಂದಣಿ ಸಾಕಷ್ಟಿದ್ದಿರಬೇಕು. ಉತ್ಸವದ ಸಂದರ್ಭಗಳಲ್ಲಿ ಮೆರವಣಿಗೆಗೂ ಅಗಲವಾದ ಮಾರ್ಗಗಳ ಅಥವಾ ಹೊಸ ಮಾರ್ಗಗಳ ಅಗತ್ಯ ಕಂಡು ಬಂದಾಗ ಎಲ್ಲರ ಒಪ್ಪಿಗೆಯಿಂದ ಬಹಳ ಅಗಲವಾದ ಹೊಸ ಮಾರ್ಗಗಳ ನಿರ್ಮಾಣ ಮಾಡಿದ್ದರು. ಕೋಟೆಯ ರಕ್ಷಣೆ, ಬಂದರು, ಅಗಲವಾದ ಬೀದಿಗಳು, ಬೀದಿಗಳ ಬದಿಯಲ್ಲಿ ನೆರಳು ನೀಡುವ ಸಾಲು ಮಾವಿನ ಮರಗಳು, ಸುಂದರ ದೇವಾಲಯಗಳು ಹಾಗೂ ಸದಾ ಚಟುವಟಿಕೆಯಿಂದ ತುಂಬಿದ್ದ ನಗರ ಬಸ್ರೂರು ಸ್ವಾಭಾವಿಕವಾಗಿಯೇ ಕರಾವಳಿಯ ಆಕರ್ಷಕ ನಗರಗಳಲ್ಲೊಂದಾಗಿತ್ತು.

ಮುಂದುವರಿಯುತ್ತದೆ...







-ಶಿವರಾಜ್ ಶೆಟ್ಟಿ.

ಆಧಾರ: ಡಾ| ಬಿ. ವಸಂತ ಶೆಟ್ಟಿ, ಬ್ರಹ್ಮಾವರ ಮತ್ತು ಡಾ| ಕೆ. ಜಿ. ವಸಂತಮಾಧವ ಅವರ ಲೇಖನಗಳು. 

Theme images by sndr. Powered by Blogger.