Header Ads

ಬಸ್ರೂರಿನ ಇತಿಹಾಸ- ಭಾಗ 4



ಬಸ್ರೂರಿನ ಇತಿಹಾಸ- ಭಾಗ 4


          ಬಾರಸಲೋರೇ, ಬಸ್ರೂರು (ಕೆಲವೇ ಸಂದರ್ಭಗಳಲ್ಲಿ ಹೊಸ ಪಟ್ಟಣ ಮತ್ತು ಬಸರೂರು) ಎಂದು ಕರೆಯಲ್ಪಡುವ ರೇವು ಕರಾವಳಿ ಕರ್ನಾಟಕದ ಮಧ್ಯಸ್ಥಳದಲ್ಲಿದೆ. ಈ ರೆವೀನ ಮುಖ್ಯ ವೈಶಿಷ್ಟ್ಯವೇನೆಂದರೆ, ಇಲ್ಲಿನ ನಾಗರಿಕತೆ ಹಳ್ಳಿ ಮತ್ತು ನಗರಗಳ ಮಿಶ್ರಣ. 12ನೆಯ ಶತಮಾನದಿಂದ ಈ ಪಟ್ಟಣಕ್ಕೆ ವಿದೇಶೀ ಸಾಗರೋತ್ತರ ಸಂಪರ್ಕವಿತ್ತು. ಇಲ್ಲಿ ರಫ್ತಾಗುತ್ತಿದ್ದ ತೆಂಗಿನಕಾಯಿ, ತಾಳೆಮರ, ಲವಂಗ, ದಾಲಚೀನಿ ಮತ್ತು ಅಕ್ಕಿ ಪಡೆಯಲು ಅರಬರು ಆಸಕ್ತರಾಗಿದ್ದಾರೆಂದು ಕೆಲವು ದಾಖಲೆಗಳು ತಿಳಿಸುತ್ತವೆ(ಮಹಮ್ಮದ್ ಹುಸೇನ್ ನೈನಾರ "Arab Geographers' Knowledge of South India"). ಚೀನಾದಿಂದ ಪಾತ್ರೆಗಳು ಮತ್ತು ಸಿಲ್ಕಿನ ವಸ್ತ್ರಗಳಿಗೆ ಮನ್ನಣೆ ಇದ್ದು, ಇಲ್ಲಿಂದ ಉತ್ತಮ ರೀತಿಯ ಕಬ್ಬುಗಳನ್ನು ಚೀನೀಯರು ಪಡೆದುಕೊಳ್ಳುತ್ತಿದ್ದರು. ಈ ರೆವೀನ ಇತಿಹಾಸ, 16ನೇ ಶತಮಾನದ ನಂತರ ಕೆಲವು ಪ್ರಮುಖ ಬದಲಾವಣೆ ಆದದ್ದು ಈ ಲೇಖನದಲ್ಲಿ ತಿಳಿಸುವ ಪ್ರಯತ್ನ ಮಾಡಲಾಗಿದೆ. ಈ ಬದಲಾವಣೆ ಯಾವುದೆಂದರೆ ಬಸ್ರೂರು ಬಂದರಿನ ರಚನೆಯಲ್ಲಾದ ಮಾರ್ಪಾಡು, ಕೆಳದಿ ನಾಯಕರ ಆಳ್ವಿಕೆಯಲ್ಲಿ ಇಲ್ಲಿ ನಡೆದ ರಾಜಕೀಯ, ಧಾರ್ಮಿಕ, ಆರ್ಥಿಕ ಘಟನೆಗಳು, ಯುರೋಪಿನ ವರ್ತಕರ ಆಗಮನ ಮತ್ತು ಇವರ ವ್ಯಾಪಾರ ಕ್ರಮ, ಇದರಿಂದಾಗಿ ಸ್ಥಳೀಯ ವ್ಯಾಪಾರದಲ್ಲಾದ ಪರಿಣಾಮ ಮತ್ತು ಶಿವಾಜಿಯ ಬಸ್ರೂರು ನೌಕಾದಾಳಿ ಮತ್ತು ಇವುಗಳ ಅದ್ಭುತ ಪರಿಣಾಮಗಳು. ಇವುಗಳನ್ನು ತಿಳಿಯಲು ಹೆಚ್ಚು ಸಹಾಯವಾಗುವ ಆಕರಗಳು ವಿದೇಶಿಯರದ್ದಾಗಿವೆ. ಪೋರ್ಚುಗೀಸ್ ಬರಹಗಾರರಾದ ಬ್ಯಾರೋಸ, ಕುತೋ, ಆಂಥೋನಿ ಬೋಕೆರಲ್ಯೂಜ ಮತ್ತು ಪೆರೀಯ ಸೆಲಿಜಾ ಬಸ್ರೂರಿನ ಆಗುಹೋಗುಗಳನ್ನು ವಿಮರ್ಶಾತ್ಮಕವಾಗಿ ತಿಳಿಸಿದ್ದಾರೆ. ಆಂಗ್ಲ ಮತ್ತು ಡಚ್ಚ ದಾಖಲೆಗಳು ಬಸ್ರೂರಿನಲ್ಲಾದ ಕೆಲವು ಘಟನೆಗಳನ್ನು ತಿಳಿಸುತ್ತವೆ.

Basrur


ಬಸ್ರೂರಿನ ರೆವೀನ ಇತಿಹಾಸ:
        ಕ್ರಿ. ಶ. 12ನೇ ಶತಮಾನದಲ್ಲಿ ಈ ರೇವು ಹೊಸ ಪಟ್ಟಣವೆಂದು ಹೆಸರು ಪಡೆದು ಕ್ರಮೇಣ ಬಸರೂರು ಎಂದು ಶಾಸನಗಳಲ್ಲಿ ಕರೆಯಲ್ಪಟ್ಟಿತ್ತು. ಇಲ್ಲಿಯೇ ಸಿಕ್ಕಿದ ಒಂದು ಶಾಸನದಂತೆ (ಶ. ವ. 1387, ಕ್ರಿ. ಶ 1465) ಬಸ್ರೂರಿನಲ್ಲಿ ಅಳಿವೆ ಇದ್ದು, ಇಲ್ಲಿ ಸರಕುಗಳು ಹೋಗಿ ಬರುತ್ತಿದ್ದು, ಭಾರೀ ಪ್ರಮಾಣದ ಸುಂಕ ವಸೂಲಿಯಾಗುತ್ತಿತ್ತು. ಇಲ್ಲಿನ ವ್ಯಾಪಾರಿಗಳು ಸೆಟ್ಟರು(ಶೆಟ್ಟಿಗಳು) ಮತ್ತು ಹಂಜಮಾನರು. ಇವರು ವ್ಯಾಪಾರದಲ್ಲಿ ಸಹಭಾಗಿಗಳಾಗಿದ್ದರು. ಈ ದಾಖಲೆಯಿಂದ ತಿಳಿದು ಬರುವುದೆಂದರೆ ಹಡಗುಗಳು ನೇರವಾಗಿ ಬಸ್ರೂರು ಅಳಿವೆ ಬಾಗಿಲಿಗೆ ಬರುತ್ತಿದ್ದವು. ಅಳಿವೆ ಬಹಳ ಅಗಲವಾಗಿದ್ದು ತೆಂಗಿನ ಮರಗಳಿಂದ ಆವೃತವಾಗಿತ್ತು. ಅರಬರು, ಮಾಪಿಳ್ಳೆಯವರು, ದ್ವೀಪವಾಸಿಗಳು ಮತ್ತು ಮಲಯಾಳಿಗಳು ಪಾಯಿದೋಣಿ, ಮಂಜಿ, ಪಟ್ಟಲ್ ಮಾರಗಳ ಮುಖಾಂತರ ಇಲ್ಲಿ ವ್ಯಾಪಾರ ನಡೆಸುತ್ತಿದ್ದರು. 16ನೇ ಶತಮಾನದ ಮೊದಲ ದಶಕದಲ್ಲಿ ಬಸ್ರೂರು ಹಲವಾರು ರೀತಿ ಮತ್ತು ತರಗಳ ಅಕ್ಕಿ ವ್ಯಾಪಾರ ರಫ್ತು ಮಾಡುವ ರೇವು ಆಗಿತ್ತು. ಬತ್ತವನ್ನು ಕುಟ್ಟಿ, ಕೇರಿ, ಬತ್ತದ ಹುಲ್ಲಿನಲ್ಲಿ 'ಘನೆಗಾ' ಎಂಬ ಮೂಡೆಕಟ್ಟಿ ಮಲಬಾರಿಗೆ ಕಳುಹಿಸುತ್ತಿದ್ದರು. ಕಣ್ಣಾನೂರು, ಕಲ್ಲಿಕೋಟೆ, ಒಮಜ್ ಮತ್ತು ಏಡನ್ಗಳಿಗೆ ಈ ರೇವಿನಿಂದ ಅಕ್ಕಿಯನ್ನು ತೆಗೆದುಕೊಂಡು ಹೋಗುತ್ತಿದ್ದರು. ಮಲಬಾರಿಗಳು ತಾಮ್ರ, ತೆಂಗಿನಕಾಯಿ, ಬೆಲ್ಲ, ಕೊಬ್ಬರಿ, ಎಣ್ಣೆಗಳನ್ನು ಇಲ್ಲಿ ತಂದು ಮಾರುತ್ತಿದ್ದರು. ಓಮಜ್ ಮತ್ತು ಏಡನ್ಗಳಿಂದ ವ್ಯಾಪಾರಸ್ಥರು ಅಕ್ಕಿ ವ್ಯಾಪಾರಕ್ಕೆ ಇಲ್ಲಿ ತಮ್ಮ ಮಾಚುವೆಗಳಲ್ಲಿ ಬರುತ್ತಿದ್ದರು. 16ನೇ ಶತಮಾನದ ಅಂತ್ಯದವರೆಗಿನ ದಾಖಲೆಗಳು ಬಸ್ರೂರು ಬಂದರಿನ ರಚನೆಯು ಸಾಗರೋತ್ತರ ವ್ಯಾಪಾರಕ್ಕೆ ಅನುಕೂಲ ಮಾಡಿಕೊಟ್ಟಿತ್ತು. ಇಲ್ಲಿನ ನದಿ ಮುಖಜ ಭೂಮಿ, ಮಲಬಾರಿನಿಂದ ಬರುವ ದೋಣಿ, ಮಂಜಿ ಮತ್ತು ಹಾಯ್ ಹಡಗುಗಳಿಗೆ ಬಹಳ ಅನುಕೂಲ ಮಾಡಿಕೊಟ್ಟಿತ್ತು. ಇಷ್ಟಲ್ಲದೆ ಇಲ್ಲಿನ ವ್ಯಾಪಾರಿಗಳು ಹೆಚ್ಚು ಕಡಿಮೆ ಸ್ವತಂತ್ರವಾಗಿದ್ದು ಬಸ್ರೂರಿನ ಆಡಳಿತ ನಡೆಸುತ್ತಿದ್ದರು. ವಾರ್ಷಿಕವಾಗಿ ನಿರ್ದಿಷ್ಟ ಹಣವನ್ನು ವಿಜಯನಗರದ ಅರಸರಿಗೆ ಕೊಟ್ಟು, ವಾಣಿಜ್ಯ ಮತ್ತು ವ್ಯಾಪಾರ ನಡೆಸುವಲ್ಲಿ ಸ್ವತಂತ್ರರಾಗಿದ್ದರು. ಹಡಗುಗಳು ನಿರಾತಂಕವಾಗಿ ಬಸ್ರೂರು ರೆವಿಗೆ ಬಂದು ತಲುಪುತ್ತಿದ್ದವು. ಇಲ್ಲಿಯ ವರ್ತಕರಿಗೆ ಹತ್ತಿರವಿರುವ ಗಂಗೊಳ್ಳಿ ಪರ್ಯಾಯದ್ವೀಪದ ಮೇಲೆ ಹಿಡಿತವಿತ್ತು. ಕ್ರಮೇಣ ಇಲ್ಲಿ ಕರಿಮೆಣಸು ವ್ಯಾಪಾರವು ವೃದ್ಧಿಗೊಂಡಿತು. ಇದನ್ನು ಪಡೆಯಲು ಪೋರ್ಚುಗೀಸರು ಹೆಚ್ಚೆಚ್ಚು ತವಕಿಸುತ್ತಿದ್ದಾರೆಂದು ಇವರ ದಾಖಲೆಗಳಿಂದ ತಿಳಿದು ಬರುತ್ತದೆ. ಈ ಬಂದರುಗಳಲ್ಲಿ ಘಟ್ಟದ ಅಂಚಿನಲ್ಲಿದ್ದ ಹೊನ್ನೆ ಕಂಬಳಿಯರಸರು ಮತ್ತು ಸೂರಾಲಿನ ತೊಳಹಾರರು ವಿದೇಶಿ ವ್ಯಾಪಾರಗಳನ್ನು ನಡೆಸಿಕೊಳ್ಳುತ್ತಿದ್ದರು. ಈ ಬಂದರುಗಳಲ್ಲಿ ಒಮಜ್ನಿಂದ ಕುದುರೆ ಆಮದಾಗುತ್ತಿತ್ತು. ಅಕ್ಕಿ, ಕರಿಮೆಣಸು, ತೆಂಗಿನಕಾಯಿ, ಕಬ್ಬುಗಳು ಇಲ್ಲಿಂದ ರಫ್ತಾಗುತ್ತಿತ್ತು. ಫ್ರೆಂಚ್ ಪ್ರವಾಸಿಗ ಪಿರಾರ್ಡ್(.)ನ ವರದಿಯಂತೆ(ಕ್ರಿ. ಶ. 1600ರಲ್ಲಿ ಮಲಬಾರ್ ಕರಾವಳಿಗೆ ಬಂದವ) ಬಸರೂರು ವ್ಯಾಪಾರ ಮಾಲ್ಡೀವ್ ದ್ವೀಪಗಳವರೆಗೆ ಹಬ್ಬಿತ್ತು. ಈ ದ್ವೀಪಗಳಿಗೆ ವ್ಯಾಪಾರ ನಡೆಸಲು ಹೊನ್ನಾವರ, ಬಸ್ರೂರು, ಬಾರ್ಕೂರು ಕಡೆಗಳಿಂದ ಬಹಳ ಜನ ವರ್ತಕರು ಹೋಗುತ್ತಿದ್ದರು. ಆದರೆ ಕ್ರಿ. ಶ. 1600ರ ನಂತರ ಈ ರೇವು ತನ್ನ ನೈಜ ಸ್ವರೂಪವನ್ನು ಕಳೆದುಕೊಳ್ಳುತ್ತಾ ಬಂದುದನ್ನು ಸಮಕಾಲೀನ ವಿದೇಶೀ ದಾಖಲೆಗಳ ಅಧ್ಯಯನವು ತಿಳಿಸುತ್ತದೆ. ಕ್ರಿ. ಶ. 1623ರ ಕಾಲದಲ್ಲಿ ಬಂದ ಇಟೆಲಿ ಪ್ರವಾಸಿಗ ಡೆಲ್ಲಾವೆಲ್ಲಿಯ ವರದಿಯಂತೆ ಬಸರೂರು ಬಂದರು(ಪೋರ್ಚುಗೀಸರ ವಶವಿದ್ದುದು) ಬಹಳ ಸಣ್ಣದು. ಇದನ್ನು ಹೆಚ್ಚು ಕಡಿಮೆ ನಕ್ಷತ್ರದಾಕಾರದಲ್ಲಿ ಕಟ್ಟಲಾಗಿದೆ. ನದಿ ಮುಖಜಭೂಮಿ ಹೆಚ್ಚು ವಿಷಾಲವಾಗಿರದೆ ಹಲವಾರು ಶಾಖೆಗಳಾಗಿ ಒಡೆದುದರಿಂದ ಅಲ್ಲಲ್ಲಿ ಮಧ್ಯೆ ಫಲವತ್ತಾದ ಕುದುರುಗಳು ಉಂಟಾಗಿವೆ.

Basrur


         ಈ ಬಾರ್ಸೆಲೋರನ್ನು ಮೇಲು ಮತ್ತು ಕೆಳ ಬಾರ್ಸೆಲೊರ ಎಂದು ಕರೆಯುತ್ತಾರೆ. ಕ್ರಿ. ಶ. 1630ರ ದಶಕದಲ್ಲಿ ಬಸ್ರೂರು ಬಂದರು ಶಿಥಿಲವಾಗುತ್ತಿರುವುದನ್ನು ಕೆಲವು ಪೋರ್ಚುಗೀಸ್ ಮತ್ತು ಸ್ಥಳೀಯ ದಾಖಲೆಗಳು ತಿಳಿಸುತ್ತವೆ. ಉದಾಹರಣೆಗೆ ಕ್ರಿ. ಶ. 1634ರಲ್ಲಿ ವೈಸರಾಯನ ಸಲಹಾಸಮಿತಿಯ ವರದಿಯಂತೆ ದೊಡ್ಡ ಹಾಗೂ ಭಾರವಾದ ಯುದ್ಧ ಹಡಗುಗಳು ಇಳಿತದ ಸಮಯದಲ್ಲಿ ಈ ಬಂದರುಗಳಿಗೆ ಹೋಗಲು ಆಗುತ್ತಿರಲಿಲ್ಲ. ಸಣ್ಣ ಸಣ್ಣ ತೀವ್ರ ವೇಗವುಳ್ಳ ಹಡಗುಗಳ ಮೂಲಕವೇ ಇಲ್ಲಿನ ಕೋಟೆಗೆ ಕಷ್ಟದಿಂದ ತಲುಪಬಹುದಿತ್ತು. (ಈ ಕೋಟೆ ಬಸ್ರೂರಿನ ಅಳಿವೆ ಭಾಗದಲ್ಲಿದೆ. ಈಗ ಇದು ಕುಂದಾಪುರದಲ್ಲಿದೆ.) ಇಷ್ಟಲ್ಲದೆ ನದಿಯ ತಳವು ಹೊಯ್ಗೆಯಿಂದ ತುಂಬಿರುತ್ತಿತ್ತು. ನದಿಯ ಬಾಯಿಯಿಂದ ಈ ರೇವು ದೂರ ಸರಿಯುತ್ತಾ ಇದ್ದುದರಿಂದ ಇಲ್ಲಿ ಹಲವು ತೊಡಕುಗಳಿದ್ದವು. ಕ್ರಿ. ಶ 1652ರ ಮೇ ತಿಂಗಳಲ್ಲಿ ಗಂಗೊಳ್ಳಿಯ ಸಮೀಪ ಭೀಕರ ಬಿರುಗಾಳಿ ಎದ್ದು ಪೋರ್ಚುಗೀಸರ ನೌಕಾದಳಗಳು  ನಾಶವಾದುದಲ್ಲದೆ, ಬಸ್ರೂರಿನ ವ್ಯಾಪಾರಕ್ಕೆ ಭಂಗವನ್ನುಂಟುಮಾಡಿತು. ಒಟ್ಟಿನಲ್ಲಿ 14 ಯುದ್ಧ ಹಡಗುಗಳು, ಜನರನ್ನು ಮತ್ತು ಸರಕುಗಳನ್ನು ಸಾಗಿಸುತ್ತಿದ್ದ 140 ಹಡಗುಗಳು ಈ ಅಳಿವೆಯ ತಳಕ್ಕೆ ಸೇರಿದವು. 7 ಇಷ್ಟಲ್ಲದೆ 1652ರ ಜೂನ್ 14ರಂದು ಇನ್ನೊಂದು ಬಿರುಗಾಳಿ ಬೀಸಿ ಇಲ್ಲಿ ವ್ಯಾಪಾರ ಮಾಡಲು ಅಸಾಧ್ಯ ಸ್ಥಿತಿಯನ್ನುಂಟುಮಾಡಿತು. ಕ್ರಿ. ಶ. 1662ರ ಶಾಸನವು (ಗಂಗೊಳ್ಳಿ ಮಲ್ಯರ ಮಠದ ಎದುರು ಇದೆ) ಗಂಗೊಳ್ಳಿ ನದಿ ಹರಿಯುವ ಪ್ರದೇಶದಲ್ಲಿ ನದಿ ಉಕ್ಕಿದ್ದು, ಹೊಯ್ಗೆ ಹಾದದ್ದು, ಕೃಷಿ ಭೂಮಿ ಕಾಡು ಆದದ್ದು - ಇನ್ನಿತರ ನಷ್ಟಗಳನ್ನು ಉಲ್ಲೇಖಿಸಿದೆ. ಕ್ರಿ. ಶ. 1740ರ ದಶಕಕ್ಕೆ ಸರಿ ಹೊಂದುವ ಹಲ್ಸನಾಡು ಕಡತಗಳಲ್ಲಿ ಬಸ್ರೂರು, ಆನಗಳ್ಳಿ, ಬರೆಗುಂಡಿಗಳಲ್ಲಿ ನದಿ ಉಕ್ಕಿ ಹರಿದ ನಷ್ಟವನ್ನು ಉಲ್ಲೇಖಿಸಿರುವುದನ್ನು ಕಾಣಬಹುದು. ಹೀಗೆ ನದಿ ಉಕ್ಕಿದ್ದು ಬಸ್ರೂರು ರೇವನ್ನು ನಾಶಪಡಿಸಿರಬೇಕು. ಕ್ರಿ. ಶ 1750ರ ಪೋರ್ಚುಗೀಸ್ ದಾಖಲೆ ಬಸ್ರೂರು ಕೋಟೆ ಮತ್ತು ಬಂದರು ನಾಶವಾದುದನ್ನು ತಿಳಿಸುತ್ತದೆ. ಒಟ್ಟಿನಲ್ಲಿ ಕ್ರಿ. ಶ. 1750ರಲ್ಲಿ ಬಸ್ರೂರು ತನ್ನ ರೆವೀನ ಮಹತ್ವವನ್ನು ಕಳೆದುಕೊಂಡಿತು. ಇದರ ಪರಿಣಾಮವಾಗಿ ಬಸ್ರೂರಿನ ಸಮೀಪ ನೆಲೆಸಿದ್ದ ಗೌಡಸಾರಸ್ವತ ವರ್ತಕರು ಗಂಗೊಳ್ಳಿಯಲ್ಲಿ ನೆಲೆಸಿ, ವ್ಯಾಪಾರ ನಡೆಸತೊಡಗಿದರೆಂಬ ಉಲ್ಲೇಖಗಳು ಬೈಲೂರು ರಾಮರಾಯರ ಮನೆಯಲ್ಲಿರುವ ಕಡತಗಳಲ್ಲಿವೆ.

ಮುಂದುವರಿಯುತ್ತದೆ...







-ಶಿವರಾಜ್ ಶೆಟ್ಟಿ.

ಆಧಾರ: ಡಾ| ಬಿ. ವಸಂತ ಶೆಟ್ಟಿ, ಬ್ರಹ್ಮಾವರ ಮತ್ತು ಡಾ| ಕೆ. ಜಿ. ವಸಂತಮಾಧವ ಅವರ ಲೇಖನಗಳು. 

Theme images by sndr. Powered by Blogger.