Header Ads

ಬಸ್ರೂರಿನ ಇತಿಹಾಸ- ಭಾಗ 6


ಬಸ್ರೂರಿನ ಇತಿಹಾಸ- ಭಾಗ 6

         ಈ ರೀತಿ ಪೋರ್ಚುಗೀಸರ ದಂಡಾವೃತ್ತಿ ವ್ಯಾಪಾರ ನೀತಿ ಕ್ರಿ. ಶ. 1600ರ ನಂತರ ಕಡಿಮೆಯಾಯಿತು. ಇದಕ್ಕೆ ಮುಖ್ಯ ಕಾರಣ ಕೆಳದಿ ನಾಯಕರ ಪ್ರಭಾವ. ಇವರು ಪೋರ್ಚುಗೀಸರ ವ್ಯಾಪಾರದಲ್ಲಿ ಹಿಡಿತವನ್ನು ತಂದರು. ಕೆಲವು ಸಂದರ್ಭಗಳಲ್ಲಿ ಸ್ಥಳೀಯ ವರ್ತಕರು ಪೋರ್ಚುಗೀಸ್ ಅಧಿಕಾರಿಗಳ ಬಲಾತ್ಕಾರವನ್ನು ಪ್ರಭಲವಾಗಿ ಎದುರಿಸಿದರು. ಉದಾಹರಣೆಗೆ ಕ್ರಿ. ಶ. 1646ರ ವರ್ಷ ಸ್ಥಳೀಯ ವರ್ತಕರು ಬಸ್ರೂರಿನ ಕ್ಯಾಪ್ಟನ್ ನಿಕ್ಸೊಟೊ ಡಿ'ಸಿಲ್ವಾನ ಅಸಭ್ಯ ಮತ್ತು ಅನಾಗರೀಕ ವರ್ತನೆಯನ್ನು ಪ್ರತಿಭಟಿಸಿ ಗೋವೆಯಲ್ಲಿರುವ ವೈಸ್‌ರಾಯನಿಗೆ ಮನವಿ ಸಲ್ಲಿಸಿದರು. ಈ ಮನವಿಯಂತೆ ವರ್ತಕರು ಕ್ಯಾಪ್ಟನ್ ಬಲಾತ್ಕಾರದ ವರ್ತನೆಯಿಂದ ತಮ್ಮ ಹಣದೊಂದಿಗೆ ಬಸ್ರೂರು ರೇವು ಬಿಟ್ಟು ಬೇರೆ ಕಡೆಗೆ ಹೋಗುವುದಾಗಿ ತಿಳಿಸಿದರು. ಈ ಮನವಿಗೆ ಸಹಿ ಹಾಕಿದವರು ನಾರಾಯಣ ಬಾಳೋ, ಶಿವ ಬಾಳೋ, ದಾಮೋ ಬಾಳೋ, ತಿಮ್ಮಯ್ಯ ಶೆಟ್ಟಿ, ಬಾಳನಾಯಕ, ಚೆನ್ನಯ್ಯ ಕಮ್ಮತಿಯ ಪತ್ನಿ ಶಾಂತಾ ಕಮ್ಮತಿ ಇತ್ಯಾದಿ. ಕೆಳದಿ ಶಿವಪ್ಪ ನಾಯಕನ ಆಳ್ವಿಕೆಯ ಕಾಲ ಮತ್ತು ಪೋರ್ಚುಗೀಸರ ಏಕಸ್ವಾಮ್ಯದ ಮನ ಬಂದ ರೀತಿಯ ವ್ಯಾಪಾರಕ್ಕೆ ಪೂರ್ಣ ತಡೆಯಾಯಿತು. ಕೆಳದಿ ನಾಯಕರ ಪ್ರಭಾವವಲ್ಲದೆ ಡಚ್ಚರ ವ್ಯಾಪಾರವು ಪೋರ್ಚುಗೀಸರ ಸ್ವಇಚ್ಚೆಗೆ ತಡೆಯುಂಟು ಮಾಡಿತು. ಕ್ರಿ. ಶ. 1662ರಲ್ಲಿ ಡಚ್ಚರು ಬಸ್ರೂರಿಗೆ ಬಂದು ವ್ಯಾಪಾರ ನಡೆಸಲು ತಮ್ಮದೇ ಆದ ಬಂಡ ಶಾಲೆ ಸ್ಥಾಪಿಸಿದರು. ಇದಕ್ಕೆ ಕೆಳದಿ ಕಿರಿಯ ವೆಂಕಟಪ್ಪ ನಾಯಕನು ಅನುಮತಿ ನೀಡಿದ್ದಾನೆಂದು ಆಂಗ್ಲ ಪತ್ರಗಳು ತಿಳಿಸುತ್ತವೆ. ಕೆಳದಿ ಭದ್ರಪ್ಪ ನಾಯಕನು ಡಚ್ಚರೊಡನೆ ವ್ಯಾಪಾರ ನಡೆಸಲು ಆತುರನಾಗಿದ್ದು ಇದನ್ನು ನಡೆಸಲು ತನ್ನ ಆಸ್ಥಾನ ವರ್ತಕ ಮಲ್ಲಪ್ಪ ಮಲ್ಯನನ್ನು ಬಸ್ರೂರಿನಲ್ಲಿರುವ ಡಚ್ಚರ ಬಳಿ ಕಳುಹಿಸಿದನು. ಇದು ಯಶಸ್ವಿಯಾಗಿ ನಡೆಯಿತು. ಇದರ ಪರಿಣಾಮವಾಗಿ ಡಚ್ಚರ ಹಡಗುಗಳಲ್ಲಿ ತುಪಾಕಿ, ಗುಂಡು ಮದ್ದು ಮತ್ತು ಇನ್ನಿತರ ಸರಕುಗಳು ಬಸ್ರೂರು ರೆವಿಗೆ ಬಂದವು. ಇದಕ್ಕೆ ಪ್ರತಿಯಾಗಿ ಕೆಳದಿ ನಾಯಕ ಇಲ್ಲಿಂದ ಅಕ್ಕಿ ಖರೀದಿಸುವ ಹಕ್ಕನ್ನು ಕೊಟ್ಟನು. ಇದರಿಂದಾಗಿ ಬಸ್ರೂರಿನಲ್ಲಿ ಡಚ್ಚ್ ಮತ್ತು ಪೋರ್ಚುಗೀಸ ವ್ಯಾಪಾರದ ತೀವ್ರ ಪೈಪೋಟಿ ನಡೆದು, ಕೊನೆಯವರು ಸೋಲುವ ಸ್ಥಿತಿಯಲ್ಲಿದ್ದರು. ಇದು ಇಲ್ಲಿಯ ವ್ಯಾಪಾರದ ಗೊಂದಲಕ್ಕೆ ಕಾರಣವಾಯಿತು. ಈ ಗೊಂದಲದ ಸಮಯವನ್ನು ನೋಡಿ ಶಿವಾಜಿಯು ಬಸ್ರೂರಿನ ಮೇಲೆ ನೌಕಾದಾಳಿ ಕೈಗೊಂಡನು.
ಬಸ್ರೂರಿಗೆ ಬರುತ್ತಿದ್ದ ಹಡಗು | Barur (vasupura.blogspot.in)
ಬಸ್ರೂರಿಗೆ ಬರುತ್ತಿದ್ದ ಹಡಗು | Barur (vasupura.blogspot.in)
ಶಿವಾಜಿಯ ಬಸ್ರೂರು ದಾಳಿ:
         ಕ್ರಿ. ಶ. 1665 ಫೆಬ್ರವರಿ 8ರಂದು ಶಿವಾಜಿಯ ಬಸ್ರೂರು ದಾಳಿ ಇಲ್ಲಿನ ಇತಿಹಾಸದಲ್ಲಿ ಮರೆಯಲಾಗದ ಘಟನೆ. ಈ ದಾಳಿಗೆ ಮುಖ್ಯ ಉದ್ದೇಶ ಫರಂಗಿಗಳಾದ ಡಚ್ಚ ಮತ್ತು ಪೋರ್ಚುಗೀಸರ ವ್ಯಾಪಾರದ ಪ್ರಾಬಲ್ಯವನ್ನು ಅಡಗಿಸುವುದು. ಇದು ಪ್ರಬಲವಾದುದು ಬಸ್ರೂರಿನಲ್ಲಿ. ಈ ರೇವು ಪೋರ್ಚುಗೀಸರ ಕೇಂದ್ರವಾದ ಗೋವಾ ಮತ್ತು ಡಚ್ಚರ ಕೇಂದ್ರವಾದ ವೆನಗುರಲ್ಗಳಿಗೆ ಆಹಾರ ಸಾಮಗ್ರಿಗಳನ್ನು ರಫ್ತು ಮಾಡುವ ಮುಖ್ಯ ಕೇಂದ್ರ. ಇದನ್ನು ಅವ್ಯವಸ್ಥೆ ಮಾಡಿದರೆ ಫರಂಗಿಗಳು ನಿರ್ಬಲರಾಗುತ್ತಾರೆಂದು ಶಿವಾಜಿ ದಾಳಿ ಮಾಡಿದ.
  ಇದು ಇವನ ರಾಜಕೀಯ ಮುತ್ಸದ್ದಿತನವನ್ನು ತೋರಿಸುತ್ತದೆ. ಇಲ್ಲಿ ಇವನು ಕೊಳ್ಳೆ ಹೊಡೆದನೆಂದು ವಿದೇಶೀಯ ದಾಖಲೆಗಳು ತಿಳಿಸುತ್ತವೆ. ಇದರಿಂದ ಗಲಿಬಿಲಿಗೊಂಡವರು ವಿದೇಶಿ ವರ್ತಕರು. ಈ ನೌಕಾದಾಳಿಯು ಶಿವಾಜಿಯ ನೌಕಾಸೇನೆಯ ಸಾಮರ್ಥ್ಯವನ್ನು ತೋರಿಸುತ್ತದೆ.

ಬಸ್ರೂರು: 1700-1800:
         ಶಿವಾಜಿಯ ಬಸ್ರೂರು ನೌಕಾದಾಳಿ ವಿದೇಶಿಯರ ವ್ಯಾಪಾರದ ಏಕಸ್ವಾಮ್ಯವನ್ನು ಮುರಿಯಿತು. ಈ ಘಟನೆಯ ನಂತರ ಬಸ್ರೂರಿನಲ್ಲಿದ್ದ ವಿದೇಶಿಯರು ಕೆಳದಿ ಅರಸರೊಂದಿಗೆ ಮೈತ್ರಿಯನ್ನು ಇಟ್ಟುಕೊಂಡು ವ್ಯಾಪಾರಗಳನ್ನು ನಡೆಸಿದರು. ಕ್ರಿ. ಶ. 1720ರಲ್ಲಿ ಬಸ್ರೂರು ರೆವಿನಿಂದ ಅಕ್ಕಿ, ಕರಿಮೆಣಸು, ಪರ್ಷಿಯಾ, ಅರೇಬಿಯಾ, ಒಮಜ್ ಮತ್ತು ನೊಲಾಗಲಿಗೆ ರಫ್ತಾಗುತ್ತಿತ್ತು. ಇಲ್ಲಿಯ ನದಿಯ ಹರಿಯುವಿಕೆ ಬಸ್ರೂರು ರೇವಿಗೆ ರಕ್ಷಣೆ ನೀಡಿತ್ತು ಎಂದು ಆಂಗ್ಲ ಪ್ರವಾಸಿ ಹ್ಯಾಮಿಲ್ಟನ್ ವರದಿ ಮಾಡಿದ್ದಾನೆ. ಕ್ರಿ. ಶ. 1748ರಲ್ಲಿ ಬಸ್ರೂರಿನಲ್ಲಿ ಡಚ್ಚರು ವ್ಯಾಪಾರ ನಡೆಸುವ ಹಕ್ಕನ್ನು ಹೊಂದಿದ್ದರು. ಬ್ರಿಟಿಷ್ ನೌಕೆಗಳು ವ್ಯಾಪಾರಕ್ಕೆ ಬಂದರೂ, ಇಲ್ಲಿ ಇವರ ಪ್ರಭಾವವಿರಲಿಲ್ಲ.
         ಕ್ರಿ. ಶ. 1763ರಲ್ಲಿ ಕೆಳದಿ ನಾಯಕರ ಆಳ್ವಿಕೆ ಹೈದರನಿಂದ ಅಂತ್ಯವಾಯಿತು. ಇವನು ಇಲ್ಲಿಗೆ ಬರುವ ಪೂರ್ವದಲ್ಲೇ ಬಸ್ರೂರು ರೇವು ತನ್ನ ಅಸ್ತಿತ್ವವನ್ನು ಕಳೆದುಕೊಂಡಿತ್ತು. ಆದರೆ ಹೈದರ್ ಈ ರೇವನ್ನು ಪುನಃ ಸ್ಥಾಪಿಸಿ, ಇಲ್ಲಿ ನೌಕಾ ಠಾಣೆ ಸ್ಥಾಪಿಸಲು ಯತ್ನಿಸಿದನು. ಇದನ್ನು ಸಾಧಿಸಲು ಪೋರ್ಚುಗೀಸ್ ಮತ್ತು ಡಚ್ ತಜ್ಞರ ಸಹಾಯ ಕೇಳಿದ. ಆದರೆ ಪೋರ್ಚುಗೀಸರು ಇವನಿಗೆ ಸಹಕರಿಸಲಿಲ್ಲ. ಡಚ್ ತಜ್ಞರು ಸಹಾಯ ಕೊಟ್ಟರು. ಅವರಿಗೆ ಬಸ್ರೂರು ರೇವನ್ನು ಪುನರ್ರಚಿಸಲು ಆಗಲಿಲ್ಲ. ಟಿಪ್ಪುವಿನ ಆಡಳಿತ ಕಾಲದಲ್ಲಿ(1784-1799) ಬಸ್ರೂರು ಒಳನಾಡಿನ ವ್ಯಾಪಾರ ಕೇಂದ್ರವಾಗಿ ಪರಿಣಮಿಸಿತು. ಸ್ಥಳೀಯ ದಾಖಲೆ ಪತ್ರಗಳಂತೆ ದವಸಧಾನ್ಯ, ಅಕ್ಕಿ, ತೆಂಗಿನಕಾಯಿ, ಮೆಣಸುಗಳ ಸಂಗ್ರಹ ಕೇಂದ್ರವಾಗಿದ್ದು, ಇಲ್ಲಿ ಇವುಗಳ ವ್ಯಾಪಾರ ನಡೆಯುತ್ತಿತ್ತು. ಘಟ್ಟದ ಮೇಲಿಂದಲೂ ಮತ್ತು ಕೆಳಗಿನಿಂದಲೂ ಸರಕುಗಳು ಇಲ್ಲಿಗೆ ಬರುತ್ತಿದ್ದವು.
ತಿರುಮಲ ವೆಂಕಟರಮಣ ದೇವಸ್ತಾನದ ಗಜಲಕ್ಷ್ಮಿ | Barur (vasupura.blogspot.in)
ಗಜಲಕ್ಷ್ಮಿ

ಉಪಸಂಹಾರ:
         ಕ್ರಿ. ಶ. 1554ರಿಂದ 1800ರವರೆಗಿನ ಬಸ್ರೂರಿನ ಇತಿಹಾಸದಲ್ಲಿ ಎಲ್ಲರೂ ಅಲಕ್ಷ್ಯ ಮಾಡಿದ ಆದರೆ ಮುಖ್ಯ ಘಟನೆ ಇಲ್ಲಿಯ ಪರಿಸರದಲ್ಲಾದ ಬದಲಾವಣೆ, ಇಲ್ಲಿ ಹರಿವ ನದಿ, ಸಮುದ್ರ ಬಸ್ರೂರು ರೇವಿನ ಮತ್ತು ವ್ಯಾಪಾರದ ಮೇಲೆ ಬಹಳ ಪರಿಣಾಮವನ್ನುಂಟು ಮಾಡಿತ್ತು. ಕ್ರಿ. ಶ. 1600ರ ನಂತರ 1749ರವರೆಗೆ ಇಲ್ಲಿಯ ನದಿ ಮತ್ತು ಸಮುದ್ರಗಳು ಈ ರೇವನ್ನು ಶಿಥಿಲಗೊಳಿಸಿದವು. ಇದನ್ನು ಗಮನಿಸಿದ ಪೋರ್ಚುಗೀಸ ಭೂನಕಾಶಕರು ಇಲ್ಲಿನ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರೂ, ಅವರು ನಿರ್ಲಕ್ಷಿಸಿದರು. ಕ್ರಿ ಶ 1750ರ ಪೋರ್ಚುಗೀಸ ದಾಖಲೆಯನ್ನು ನಂಬುವುದಾದರೆ ಕೆಳದಿ ನಾಯಕರು ನೈಸರ್ಗಿಕ ಅನಾಹುತದಿಂದ ಬಸ್ರೂರು ರೇವನ್ನು ರಕ್ಷಿಸಲು ಗಮನ ಕೊಡಲಿಲ್ಲ. ಈ ವಿಚಾರದಲ್ಲಿ ಸ್ವಲ್ಪ ಗಮನ ಕೊಟ್ಟವನು ಹೈದರಾಲಿ ಮಾತ್ರ. ಆದರೆ ಅವನ ಕಾಲ ಯುದ್ಧದಲ್ಲಿಯೇ ನಿರತನಾದುದರಿಂದ ಇದು ಸಾಧ್ಯವಾಗಲಿಲ್ಲ.
         ಕೆಳದಿ ನಾಯಕರ ಆಳ್ವಿಕೆಯ ಕಾಲದಲ್ಲಿ ಬಸ್ರೂರು ವ್ಯಾಪಾರ, ಧಾರ್ಮಿಕ ಮತ್ತು ಆಡಳಿತದಲ್ಲೋ ಕೆಲವು ಬದಲಾವಣೆಗಳು ನಡೆದವು. ವಿಜಯನಗರದ ಆಳ್ವಿಕೆಯಲ್ಲಿ ಬಸ್ರೂರಿನ ವ್ಯಾಪಾರ ಮುಖ್ಯವಾಗಿ ಸೆಟ್ಟಿಯರ ವಶದಲ್ಲಿದ್ದರೆ ಕೆಳದಿ ನಾಯಕರ ಕಾಲದಲ್ಲಿ ಸಾರಸ್ವತರು, ಖಾರ್ವಿಗಳು, ಮುಸ್ಲಿಮರು, ಅರಬರು, ಘಟ್ಟದ ಮೇಲಿನ ಬಣಜಿಗರು, ಕೆಲವು ಸಂದರ್ಭಗಳಲ್ಲಿ ಕ್ರೈಸ್ತರು ವ್ಯಾಪಾರದಲ್ಲಿ ಭಾಗವಹಿಸಿದರು. ಪೋರ್ಚುಗೀಸರ ಏಕಸ್ವಾಮ್ಯ ವ್ಯಾಪಾರವನ್ನು ಕೆಳದಿ ನಾಯಕರು ನಿಲ್ಲಿಸಿದರು. ಬಸ್ರೂರು ನಗಾರಾಡಳಿತದ ನಗರಪಾಲಿಕೆಯ ಹಕ್ಕನ್ನು ಕೆಳದಿ ನಾಯಕರು ಮೊಟಕುಗೊಳಿಸಿದರು. (1632ರ ನಂತರ) ಧಾರ್ಮಿಕವಾಗಿ ಬಸ್ರೂರಿನಲ್ಲಿ ಗೌಡ ಸಾರಸ್ವತರು ವೈಷ್ಣವ ಪಂಥ ಮತ್ತು ಘಟ್ಟದ ಮೇಲಿನವರು ವೀರಶೈವ ಪಂಥವನ್ನು ಪ್ರಚಾರಕ್ಕೆ ತಂದರು. ಆದರೆ ನಿರೀಕ್ಷಿಸಿದಷ್ಟು ಈ ಪಂಥಗಳು ಪ್ರಗತಿ ಹೊಂದಲಿಲ್ಲ.
ಪೋರ್ಚುಗೀಸರು 1554ರಿಂದ 1800ರ ವರೆಗೆ ತಮ್ಮದೇ ಆದ ಗುತ್ತಿಗೆ ವ್ಯಾಪಾರ ಮಾಡಿ ಸ್ಥಳೀಯ ವ್ಯಾಪಾರಕ್ಕೆ ಅಡ್ಡಿ ಉಂಟು ಮಾಡಿದರು. ಇವರ ಫ್ಯಾಕ್ಟರೀ-ಫೋರ್ಟೋಸ್ ವ್ಯಾಪಾರ ಪದ್ಧತಿ ಇಲ್ಲಿಯವರಿಗೆ ಹೊಸದಾಗಿ ಕಂಡಿತು. ಇದರ ನೇತೃತ್ವದಲ್ಲಿ ಪೋರ್ಚುಗೀಸರು ಹೊಸ ವ್ಯಾಪಾರವನ್ನು ನಡೆಸಿದರು. ಆದರೆ ಇದು ಹೆಚ್ಚು ಕಾಲ ನಡೆಯಲಿಲ್ಲ. ತಮ್ಮ ವ್ಯಾಪಾರವನ್ನು ಉಳಿಸಿಕೊಳ್ಳಲು ಪೋರ್ಚುಗೀಸರು ಸ್ಥಳೀಯರು ಸಹಕಾರವನ್ನು ಪಡೆಯಬೇಕಾಗಿ ಬಂತು. ಕ್ರೈಸ್ತ ಮತ ಬಸ್ರೂರಿನಲ್ಲಿ ಪ್ರಚಾರವಾಗಲು ಪೋರ್ಚುಗೀಸರೇ ಕಾರಣರು. ಕ್ರಿ ಶ 1542ರಲ್ಲಿ ಕ್ರೈಸ್ತರ ಧಾರ್ಮಿಕ ಸಂಸ್ಥೆ ಸ್ಥಾಪನೆಗೊಂಡರೂ, 1681ರವರೆಗೆ ಈ ಮತವು ಹೆಚ್ಚು ಜನಾದರಣೀಯವಾಗಲಿಲ್ಲ. ಕ್ರಿ ಶ 1681ರ ನಂತರ ಇಲ್ಲಿ ಕ್ರೈಸ್ತ ಮತ ಪ್ರಚಾರಕ್ಕೆ ಬರಲು ಫಾದರ್ ವಾರ್ಝನ ಸೇವೆ ಕಾರಣವಾಯಿತು. ಇವನು ಇಲ್ಲಿಯ ಚರ್ಚ್ ಗಳನ್ನು ಸುಧಾರಿಸಿದ. ಇದರಿಂದಾಗಿ ಬಸ್ರೂರು ವಿಕಾರ (Vicar) ಬಲಿಷ್ಟವಾಗಿ ಭಟ್ಕಳ, ಶಿರಾಲಿ, ಕಲ್ಯಾಣಪುರದ ಕ್ರೈಸ್ತ ಸಮುದಾಯಗಳಿಗೆ ಆಶ್ರಯವಾಯಿತು.
         ಪೋರ್ಚುಗೀಸ ಮತ್ತು ಸ್ಥಳೀಯ ಜನರ ಮಿಶ್ರಣದಿಂದಾದ ಜನಾಂಗ ಇಲ್ಲಿ ಬೆಳಕಿಗೆ ಬಂತು. ಈ ಜನಾಂಗವನ್ನು ಕ್ಯಾಸಡೋಸ್ (Casados) ಎಂದು ಕರೆಯುತ್ತಾರೆ. ಬಸ್ರೂರಿನಲ್ಲಿ ಕ್ರಿ. ಶ. 1635ರಲ್ಲಿ ಇಂತಹ ಜನಾಂಗದವರ 36 ಕುಟುಂಬಗಳಿದ್ದವು. ಇವರು 33 ಅಡಿ ಎತ್ತರದ ಪಾಗಾರ ಹೊಂದಿದ ಮನೆಯಲ್ಲಿ ವಾಸಿಸುತ್ತಿದ್ದರು. ಪಾಗಾರದ ಮೇಲೆ ಬರುಜಿನ ಆಕಾರವಿರುವ ಅಸ್ತ್ರಗಳನ್ನು ತೆಗೆದುಕೊಂಡು ಹೋಗಲು ಸ್ಥಳೀಯ ಸೇವಕರಿದ್ದರು. ಈ ರೀತಿಯ ಕಟ್ಟಡ ರಚನೆಯು ಸ್ಥಳೀಯ ಕಟ್ಟಡಗಳ ರಚನೆಯ ಮೇಲೆ ಪರಿಣಾಮ ಬೀರಿತು. ಒಟ್ಟಿನಲ್ಲಿ ಈ ಎಲ್ಲ ಘಟನೆಗಳು ಬಸ್ರೂರು ಇತಿಹಾಸಕ್ಕೆ ಹೊಸ ಆಯಾಮ ಕೊಟ್ಟಿದ್ದವು.




-ಶಿವರಾಜ್ ಶೆಟ್ಟಿ.

ಆಧಾರ: ಡಾ| ಬಿ. ವಸಂತ ಶೆಟ್ಟಿ, ಬ್ರಹ್ಮಾವರ ಮತ್ತು ಡಾ| ಕೆ. ಜಿ. ವಸಂತಮಾಧವ ಅವರ ಲೇಖನಗಳು. 

Theme images by sndr. Powered by Blogger.